‘ದೇವನಹಳ್ಳಿ ಭೂಸ್ವಾಧೀನ’ ಕೈಬಿಟ್ಟು ಹಸಿರು ವಲಯವಾಗಿಯೇ ಮುಂದುವರಿಕೆ: ಸಚಿವ ಎಂ.ಬಿ.ಪಾಟೀಲ್
Update: 2025-09-05 21:01 IST
ಸಚಿವ ಎಂ.ಬಿ.ಪಾಟೀಲ್
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನಲ್ಲಿ ಕೈಗಾರಿಕೆ ಉದ್ದೇಶಕ್ಕೆ ಮಾಡಲಾಗಿದ್ದ ಭೂ ಸ್ವಾಧೀನವನ್ನು ಕೈಬಿಟ್ಟು ಹಸಿರು ವಲಯವನ್ನಾಗಿಯೇ ಮುಂದುವರೆಸಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರೈತರ ವಿರೋಧ ಇರುವ ಒಂದು ಎಕರೆ ಭೂಮಿಯನ್ನು ಸರಕಾರ ತೆಗೆದುಕೊಳ್ಳುವುದಿಲ್ಲ. ಆದರೆ, ಸ್ವಇಚ್ಛೆಯಿಂದ ಯಾರು ಕೃಷಿ ಜಮೀನು ನೀಡಲು ಮುಂದೆ ಬರುತ್ತಾರೆಯೋ ಅಂತಹವರ ಜಮೀನನ್ನು ಮಾತ್ರವೇ ಕೈಗಾರಿಕೆ ಉದ್ದೇಶಕ್ಕೆ ಪಡೆಯುತ್ತೇವೆ ಎಂದು ಸ್ಪಷ್ಟಪಡಿಸಿದರು.
ದೇವನಹಳ್ಳಿ ವ್ಯಾಪ್ತಿಯಲ್ಲಿ ದಿನ ಕಳೆದಂತೆ ಭೂಮಿಯ ಬೆಲೆ ದುಬಾರಿಯಾಗಿದೆ. ಹೀಗಾಗಿ ಜಮೀನು ನೀಡಲು ನಿರಾಕರಿಸಿದ ರೈತರ ಜಮೀನನ್ನು ಭೂಸ್ವಾಧೀನದಿಂದ ಕೈಬಿಡುತ್ತೇವೆ ಎಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದು, ಈ ವಿಚಾರದಲ್ಲಿ ಸರಕಾರ ಸ್ಪಷ್ಟವಾಗಿದೆ ಎಂದು ಹೇಳಿದರು.