ಮಾವು ಬೆಳೆಗಾರರ ನೆರವಿಗೆ ಧಾವಿಸಿ: ಪ್ರಧಾನಿ ಮೋದಿಗೆ ದೇವೇಗೌಡರ ಮನವಿ
ಎಚ್.ಡಿ.ದೇವೇಗೌಡ
ಬೆಂಗಳೂರು : ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಮಾವು ಬೆಳೆಗಾರರ ನೆರವಿಗೆ ಕೇಂದ್ರ ಸರಕಾರ ಕೂಡಲೇ ಧಾವಿಸಿ, ಮಾರುಕಟ್ಟೆ ಮಧ್ಯಪ್ರವೇಶ ಮಾಡಿ, ಬೆಂಬಲ ಬೆಲೆ ಯೋಜನೆಯಡಿ ಮಾವಿನ ಹಣ್ಣುಗಳನ್ನು ಖರೀದಿಸಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಪ್ರಧಾನಿ ಮೋದಿ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್‍ಗೆ ಪತ್ರ ಬರೆದಿದ್ದಾರೆ.
ರವಿವಾರ ಈ ಸಂಬಂಧ ಉಭಯರಿಗೆ ಪ್ರತ್ಯೇಕ ಪತ್ರ ಬರೆದಿರುವ ದೇವೇಗೌಡ, ಕರ್ನಾಟಕದ ಗ್ರಾಮೀಣ ಭಾಗದ ಬೆಳೆಗಾರರು ಬೆಲೆ ಕುಸಿತದಿಂದ ತೀವ್ರ ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರಕಾರ ಮಾರುಕಟ್ಟೆ ಮಧ್ಯೆಪ್ರವೇಶ ಮಾಡಿ ನಫೆಡ್ ಮತ್ತು ಎನ್‍ಸಿಸಿಎಫ್ ಮೂಲಕ ತಕ್ಷಣ ಮಾವು ಖರೀದಿಯನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.
ವಿವಿಧ ಯೋಜನೆಗಳ ಮೂಲಕ ಸಾಕಷ್ಟು ಆರ್ಥಿಕ ಪ್ರಯೋಜನಗಳನ್ನು ಒದಗಿಸುವ ಮೂಲಕ ಮಾವು ಬೆಳೆಗಾರರಿಗೆ ನೆರವಾಗಬೇಕು. ಬೆಂಬಲ ಬೆಲೆಯಡಿ ಮಾವು ಖರೀದಿಸಬೇಕು. ನೆರೆಯ ಚಿತ್ತೂರು ಜಿಲ್ಲೆಗೆ ತೋತಾಪುರಿ ಮಾವಿನಹಣ್ಣು ಪ್ರವೇಶಿಸದಂತೆ ಆಂಧ್ರಪ್ರದೇಶ ನಿಷೇಧ ವಿಧಿಸಿರುವುದರಿಂದ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರಿಗೆ ತೊಂದರೆಯಾಗಿದೆ ಎಂದು ದೇವೇಗೌಡ ಗಮನ ಸೆಳೆದಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿ ತೋತಾಪುರಿ ಮಾವಿನ ಹಣ್ಣಿನ ನಿಷೇಧವನ್ನು ರದ್ದುಗೊಳಿಸುವಂತೆ ಆಂಧ್ರಪ್ರದೇಶ ಸರಕಾರಕ್ಕೆ ಮನವಿ ಮಾಡಿದ್ದಾರೆ. ದೇಶದ ತೋಟಗಾರಿಕೆ ಬೆಳೆ ಬೆಳೆಯುವ ಪ್ರಮಖ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ಹೆಚ್ಚು ಮಾವು ಬೆಳೆಯಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದ 1.39 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಹವಾಮಾನ ವೈಪರೀತ್ಯ ಕಾರಣಗಳಿಂದ ಈ ಬಾರಿ ಮಾವಿನ ಫಸಲು ಶೇ.30ರಷ್ಟು ಕಡಿಮೆಯಾಗಿದೆ. ಆದರೂ ಮಾವಿನ ಹಣ್ಣುಗಳ ಧಾರಣೆ ಮಾರುಕಟ್ಟೆಯಲ್ಲಿ ತೀವ್ರ ಕುಸಿತ ಕಂಡಿದೆ. ಹೀಗಾಗಿ ಕೇಂದ್ರ ಸರಕಾರ ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ದೇವೇಗೌಡ ಪತ್ರದಲ್ಲಿ ಮನವಿ ಮಾಡಿದ್ದಾರೆ.