×
Ad

ದೇವೇಗೌಡರೇ, ನಿಮ್ಮ ಪುತ್ರ ಪದೇ ಪದೇ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದರೆ JDS ಕಾರ್ಯಕರ್ತರು ಎಲ್ಲಿ ಹೋಗಬೇಕು?: ಡಿಕೆಶಿ ಪ್ರಶ್ನೆ

Update: 2023-10-02 15:52 IST

ಬೆಂಗಳೂರು: “ಪೂಜನೀಯ ದೇವೇಗೌಡರೇ, ನಿಮ್ಮ ಸುಪುತ್ರರು ಪದೇ ಪದೆ ಜೆಡಿಎಸ್ ವಿಸರ್ಜನೆ ಮಾಡುತ್ತೇನೆ, ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದರೆ ಪಕ್ಷದ ನಾಯಕರು, ಕಾರ್ಯಕರ್ತರು ಎಲ್ಲಿ ಹೋಗಬೇಕು? ನಿಮ್ಮ ಸುಪುತ್ರರು ದಿನಬೆಳಗಾದರೆ ಸಿದ್ಧಾಂತ ಬದಲಿಸುತ್ತಾರೆ, ಯಾರ ಜೊತೆ ಬೇಕಾದರೂ ಸಂಬಂಧ ಬೆಳೆಸುತ್ತಾರೆ. ಆದರೆ ಸಿದ್ಧಾಂತ ನಂಬಿರುವ ಕಾರ್ಯಕರ್ತರು ಏನಾಗಬೇಕು?” ಎಂದು ಕೆಪಿಸಿಸಿ ಅದ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಜೆಡಿಎಸ್ ವರಿಷ್ಠ ದೇವೇಗೌಡರನ್ನು ಪ್ರಶ್ನಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿ. ಕೆ. ಶಿವಕುಮಾರ್ ಮಾತನಾಡಿದ ಅವರು, “ಮಹಾತ್ಮಗಾಂಧಿ ಜನ್ಮದಿನದಂದು ನಮ್ಮ ಪಕ್ಷದ ಸಿದ್ಧಾಂತ ನಂಬಿ ಬಂದಿರುವ ಜೆಡಿಎಸ್ ಮುಖಂಡರು, ಕಾರ್ಯಕರ್ತರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ. ರಾಜ್ಯಾದ್ಯಂತ ಮೂಲೆ ಮೂಲೆಯಿಂದ ಸಾವಿರಾರು ಮಂದಿ ಪಕ್ಷ ಸೇರಲು ಮುಂದಾಗಿದ್ದಾರೆʼʼ ಎಂದರು.

ʼʼಈ ಮಧ್ಯೆ ಮಾಜಿ ಪ್ರಧಾನಿ ದೇವೇಗೌಡರು ನನಗೆ ಎಚ್ಚರಿಕೆ ಕೊಟ್ಟಿದ್ದಾರೆ. ‘ಮಿಸ್ಟರ್ ಡಿ.ಕೆ. ಶಿವಕುಮಾರ್ ನಿಮ್ಮ ಆಟ ನಡೆಯುವುದಿಲ್ಲ’ ಎಂದು ಹೇಳಿದ್ದಾರೆ. ದೇವೇಗೌಡರರು ದೊಡ್ಡವರು. ಬಹಳ ಗೌರವದಿಂದ ಅವರ ಮಾತನ್ನು ನಾನು ಸಂತೋಷದಿಂದ ಸ್ವೀಕರಿಸುತ್ತೇನೆ. ಪೂಜನೀಯ ದೇವೇಗೌಡರೇ, ನೀವು ಮತ್ತು ನಿಮ್ಮ ಪಕ್ಷದ ನಾಯಕರು ಅನೇಕ ಬಾರಿ ಬಿಜೆಪಿ ಜೊತೆ ಕೈ ಜೋಡಿಸುವುದಿಲ್ಲ ಎಂದು ಹೇಳಿದ್ದಿರಿ. ಆದರೆ ಈಗ ಕೈ ಜೋಡಿಸಿದ್ದೀರಿ. ರಾಜಕಾರಣ ಏನೇ ಇರಲಿ, ಬಿಜೆಪಿ ಜತೆ ಮೈತ್ರಿ ಮೂಲಕ ನೀವು ಕಳುಹಿಸಿರುವ ಸಂದೇಶವನ್ನು ಮುಗ್ಧ ಜನ ಹೇಗೆ ಸ್ವೀಕರಿಸಬೇಕು? ಇಂತಹ ಪರಿಸ್ಥಿತಿಯಲ್ಲಿ ಸಿದ್ಧಾಂತ ನಂಬಿ ನಮ್ಮ ಪಕ್ಷಕ್ಕೆ ಬಂದವರನ್ನು ಪಕ್ಷದ ಅಧ್ಯಕ್ಷನಾಗಿ ನಾನು ಕರೆದುಕೊಳ್ಳಬಾರದೇ?ʼʼ ಎಂದು ಪ್ರಶ್ನೆ ಮಾಡಿದ್ದಾರೆ. 

ʼʼಈ ಹಿಂದೆ ನೀವು ಕೂಡ ಕಾಂಗ್ರೆಸ್ ನಿಂದ ಅನೇಕ ನಾಯಕರನ್ನು ನಿಮ್ಮ ಪಕ್ಷಕ್ಕೆ ಸೇರಿಸಿಕೊಂಡು ಚೆಸ್, ಫುಟ್ಬಾಲ್ ಗೇಮ್ ಆಡಿಲ್ಲವೇ? ನೀವು ಯಾರನ್ನು ಬೇಕಾದರೂ ಕಟ್ಟಿಹಾಕಿಕೊಳ್ಳಿ, ಮನೆಯೊಳಗೇ ಕೂಡಿ ಹಾಕಿಕೊಳ್ಳಿ. ನಾವು ಬೇಡ ಎನ್ನುವುದಿಲ್ಲʼʼ ಎಂದು ಸ್ಪಷ್ಟಪಡಿಸಿದರು. 

ಈ ಹಿಂದೆ ನಮ್ಮ ಪಕ್ಷದಿಂದ ಎಂಎಲ್ಸಿ ಆಗಿದ್ದ ಸಿ.ಎಂ. ಇಬ್ರಾಹಿಂ ಅವರನ್ನು, ಅವರ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಕರೆದುಕೊಂಡು ಹೋಗಿ ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದೀರಿ. ಅವರು ಈಗ ಏನು ಹೇಳಿದ್ದಾರೆ? ಪಕ್ಷದ ಅಧ್ಯಕ್ಷನಾದ ನನಗೇ ಮೈತ್ರಿ ವಿಚಾರ ತಿಳಿಸಲಿಲ್ಲ ಎಂದು ಹೇಳಿದ್ದಾರೆ. ನಿಮ್ಮ ಪಕ್ಷದ ಬಹುತೇಕ ಮುಖಂಡರು, ಕಾರ್ಯಕರ್ತರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅನೇಕರು ಕಾಂಗ್ರೆಸ್ ಕಡೆ ನೋಡುತ್ತಿದ್ದಾರೆ.

ʼʼರಾಜ್ಯದ ಪ್ರತಿ ಮನೆ, ಮನೆಗೂ ಹಾಗೂ ಕಾರ್ಯಕರ್ತರ ಬಳಿ ಹೋಗಿ ಕೈ ಮುಗಿದು ದೇಶ ಉಳಿಸೋಣ ಬನ್ನಿ ಎಂದು ಪಕ್ಷಕ್ಕೆ ಸೇರಿಸಿಕೊಳ್ಳುವ ಅಧಿಕಾರವನ್ನು ನಮ್ಮ ನಾಯಕಿ ಸೋನಿಯಾ ಗಾಂಧಿ ಹಾಗೂ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ನಮಗೆ ಕೊಟ್ಟಿದ್ದಾರೆʼʼ ಎಂದು ತಿಳಿಸಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News