ಧರ್ಮಸ್ಥಳ ಪ್ರಕರಣ | ದೂರುದಾರ ಚಿನ್ನಯ್ಯನೊಂದಿಗೆ ಬೆಂಗಳೂರಿನ ವಿವಿಧೆಡೆ ಮಹಜರು ನಡೆಸಿದ ಎಸ್‍ಐಟಿ
ಬೆಂಗಳೂರು, ಆ.30 : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(ಎಸ್‍ಐಟಿ)ದ ಅಧಿಕಾರಿಗಳು, ಶನಿವಾರ ಬಂಧಿತ ಸಾಕ್ಷಿ-ದೂರುದಾರ ಚಿನ್ನಯ್ಯನನ್ನು ಸ್ಥಳ ಮಹಜರಿಗಾಗಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಬೆಂಗಳೂರಿಗೆ ಕರೆತಂದು ವಿವಿಧ ಸ್ಥಳಗಳಲ್ಲಿ ಮಹಜರು ನಡೆಸಿದ್ದಾರೆ.
ಆ.30ರ ಶನಿವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಎಸ್‍ಐಟಿ ತಂಡವು ಬಂಧಿತ ಚಿನ್ನಯ್ಯನ ಹೇಳಿಕೆ ಆಧಾರದ ಮೇಲೆ ಬೆಂಗಳೂರಿನ ಬಗಲಗುಂಟೆ ಹಾಗೂ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸ್ಥಳಗಳಿಗೆ ಕರೆದೊಯ್ದು ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ಮಹಜರು ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಭದ್ರತೆಯ ದೃಷ್ಟಿಯಿಂದ ಮಹಜರು ಪ್ರಕ್ರಿಯೆಯನ್ನು ಬೆಳಗಿನ ಜಾವ ನಡೆಸಲಾಗಿದ್ದು, ಭೇಟಿ ನೀಡಿದ ಸ್ಥಳಗಳು ಮತ್ತು ಪಡೆದುಕೊಂಡ ದಾಖಲೆಗಳ ವಿವರಗಳನ್ನು ಈ ಹಂತದಲ್ಲಿ ಬಹಿರಂಗಪಡಿಸಲು ಆಗುವುದಿಲ್ಲ ಎಂದು ಎಸ್‍ಐಟಿ ತನಿಖಾ ಮೂಲಗಳಿಂದ ತಿಳಿದುಬಂದಿದೆ.
ಈ ಹಿಂದೆ ಚಿನ್ನಯ್ಯ ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ಆತನನ್ನು ಭೇಟಿ ಮಾಡಿ ಚರ್ಚೆ ನಡೆಸಿದವರನ್ನು ಗುರುತಿಸುವ ಕೆಲಸವನ್ನು ಎಸ್‍ಐಟಿ ಅಧಿಕಾರಿಗಳು ಮಾಡಿರುವುದಾಗಿ ಮೂಲಗಳು ತಿಳಿಸಿವೆ.