ಸೌಜನ್ಯ ಪ್ರಕರಣದ ವೀಡಿಯೋ ಮಾಡಿದ್ದ ʼದೂತ - ಸಮೀರ್ʼ; ಪೊಲೀಸರಿಂದ ನೋಟಿಸ್
ಬೆಂಗಳೂರು: ಇಡೀ ರಾಜ್ಯ ಮಾತ್ರವಲ್ಲದೆ ದೇಶದ ಗಮನ ಸೆಳೆದಿದ್ದ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಹಾಗೂ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಯೂಟ್ಯೂಬರ್ "ದೂತ ಸಮೀರ್" ಮಾಡಿರುವ ವೀಡಿಯೋ ಸಂಚಲನ ಸೃಷ್ಟಿಸಿದ್ದ ಬೆನ್ನಲ್ಲೇ ಸಮೀರ್ ಎಂಡಿ ಅವರಿಗೆ ಪೊಲೀಸ್ ಇಲಾಖೆ ನೋಟಿಸ್ ನೀಡಿದೆ.
ಪೊಲೀಸರು ತಮ್ಮ ನಿವಾಸಕ್ಕೆ ಆಗಮಿಸಿ ಬಂಧನಕ್ಕೆ ಮುಂದಾಗಿದ್ದರು. ಆದರೆ ವಿಚಾರಣೆಗೆ ಸಹಕರಿಸುವುದಾಗಿ ಭರವಸೆ ನೀಡಿದ ಬಳಿಕ ನೋಟಿಸ್ ನೀಡಿ ಹಿಂದಿರುಗಿದ್ದಾರೆ ಎಂದು ಯೂಟ್ಯೂಬ್ ಲೈವ್‌ನಲ್ಲಿ ಸಮೀರ್ ಎಂಡಿ ಹೇಳಿದ್ದಾರೆ.
ತಡರಾತ್ರಿ 10.45 ಗಂಟೆಗೆ ಪೊಲೀಸ್ ನೋಟಿಸ್ ಬಂದಿದೆ. ಆದರೆ ಇದರ ಬಗ್ಗೆ ನನಗೆ ಯಾವುದೇ ಭಯ ಇಲ್ಲ. ಯಾಕೆಂದರೆ ನಾನು ಮಾಡಿದಂತಹ ಸೌಜನ್ಯ ಪ್ರಕರಣದ ವೀಡಿಯೋ ಸಂಬಂಧ ಎಲ್ಲ ಆಧಾರಗಳನ್ನು ಇಟ್ಟುಕೊಂಡು ಮಾತನಾಡಿದ್ದೇನೆ. ಈ ವೀಡಿಯೋಗೆ ಒಂದು ಮಿಲಿಯನ್ ವ್ಯೂವ್ಸ್ ಬರುತ್ತಿದ್ದಂತಯೇ ಸಾಮಾಜಿಕ ಮಾಧ್ಯಮದಲ್ಲಿ ನನ್ನ ವೈಯಕ್ತಿಕ ಮಾಹಿತಿ ಮತ್ತು ನನ್ನ ವಿಳಾಸ ಲೀಕ್ ಆಯಿತು. ನಂತರ ನನಗೆ ಹಲವಾರು ಜೀವ ಬೆದರಿಕೆ ಕರೆಗಳ ಬರಲು ಪ್ರಾರಂಭವಾದವು. ಪೊಲೀಸರ ಬಳಿ ಹೋದರೆ ರಕ್ಷಣೆ ಸಿಗುತ್ತೆ ಎಂಬ ನಂಬಿಕೆಯೂ ನನಗಿರಲಿಲ್ಲ. ಬಳಿಕ ನಾನು ಕೂಡಲೇ ಸೌಜನ್ಯ ಪ್ರಕರಣದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ತಂಡದ ಸದಸ್ಯರನ್ನು ಸಂಪರ್ಕಿಸಿದೆ. ಅವರು ನನಗೆ ದೈರ್ಯ ನೀಡಿ ವಕೀಲರ ಸಹಾಯವನ್ನು ನೀಡಿದ್ದಾರೆ ಎಂದು ಸಮೀರ್ ವೀಡಿಯೊದಲ್ಲಿ ಮಾಹಿತಿ ನೀಡಿದ್ದಾರೆ.
ನನಗೆ ಜೀವ ಬೆದರಿಕೆ ಕರೆಗಳು ಹೆಚ್ಚಾದ ಹಿನ್ನಲೆಯಲ್ಲಿ ಸೌಜನ್ಯ ಪ್ರಕರಣದ ಮತ್ತೋರ್ವ ಹೋರಾಟಗಾರ ಗಿರಿಶ್ ಮಟ್ಟನವರ್ ಅವರನ್ನು ಮನೆಗೆ ಬರುವಂತೆ ಮನವಿ ಮಾಡಿಕೊಂಡೆ. ಗಿರೀಶ್ ಮಟ್ಟನವರ್ ಮನೆಗೆ ಬಂದ ಸಂದರ್ಧದಲ್ಲಿಯೇ ಪೊಲೀಸರು ನಮ್ಮ ಮನೆಗೆ ಬಂದರು ಎಂದ ಅವರು, ಸೌಜನ್ಯ ಪ್ರಕರಣದ ವೀಡಿಯೊ ಮಾಡುವ ಮುನ್ನ ಗಿರೀಶ್ ಅಥವಾ ತಿಮರೋಡಿ ಅವರಿಗೂ ನನಗೆ ಯಾವುದೇ ಪರಿಚಯವೇ ಇರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದೇ ವೇಳೆ ಸೌಜನ್ಯ ಪ್ರಕರಣದ ಮತ್ತೋರ್ವ ಹೋರಾಟಗಾರ ಗಿರಿಶ್ ಮಟ್ಟನವರ್ ಮಾತನಾಡಿ, ಸಮೀರ್ ತಮ್ಮ ವೀಡಿಯೋದಲ್ಲಿ ಯಾರ ಹೆಸರನ್ನು ಬಳಸಿಲ್ಲ. ಅಲ್ಲದೆ, ಪ್ರಕರಣ ಸಂಬಂಧ ಅವರು ಎಲ್ಲ ಆಧಾರವನ್ನು ಇಟ್ಟುಕೊಂಡೇ ಮಾತನಾಡಿದ್ದಾರೆ. ಸಮೀರ್ ಅವರು ಯಾವುದೇ ವಿವಾದಾತ್ಮಕ ಹೇಳಿಕೆಯನ್ನೂ ನೀಡಿಲ್ಲ. ಸೌಜನ್ಯಳನ್ನು ನಮ್ಮ ಮನೆ ಮಗಳು ಎಂದು ತಿಳಿದುಕೊಂಡು ಎಲ್ಲರೂ ಅವಳಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ರಾಜ್ಯಾದ್ಯಂತ ಅಲರ್ಟ್ ಆಗುವಂತೆ ಪೊಲೀಸರಿಗೆ ಸೂಚಿಸಿದ್ದ ಡಿಜಿಪಿ :
ಯೂಟ್ಯೂಬರ್ "ದೂತ ಸಮೀರ್" ಮಾಡಿರುವ ವೀಡಿಯೊ ಸಂಚಲನ ಸೃಷ್ಟಿಸಿದ್ದ ಬೆನ್ನಲ್ಲೇ ಕಾನೂನು ಸುವ್ಯವಸ್ಥೆ ಧಕ್ಕೆಯಾಗದಂತೆ ರಾಜ್ಯಾದ್ಯಂತ ನಿಗಾ ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸೂಚಿಸಿದ್ದರು.
ಬುಧವಾರ ಈ ಕುರಿತು ಫ್ಯಾಕ್ಸ್ ಮೂಲಕ ಎಲ್ಲಾ ಜಿಲ್ಲಾ ಎಸ್ಪಿಗಳಿಗೆ ಸಂದೇಶ ರವಾನಿಸಿರುವ ಅವರು, ಇತ್ತೀಚಿಗೆ ಸಮೀರ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಧರ್ಮಸ್ಥಳದಲ್ಲಿ ನಡೆದಿದ್ದ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೀಡಿಯೊವೊಂದನ್ನು ಮಾಡಿದ್ದು, ಈ ವಿಷಯ ಮೇಲಾಧಿಕಾರಿಗಳ ಗಮನಕ್ಕೆ ತರುವಲ್ಲಿ ವಿಫಲರಾಗಿರುತ್ತೀರಿ ಎಂದು ಬೇಸರ ವ್ಯಕ್ತಪಡಿಸಿದ್ದರು.
ಆದರೆ, ಈ ವಿಷಯ ಕುರಿತಂತೆ ಸಾರ್ವಜನಿಕರಲ್ಲಿ ಪರ, ವಿರೋಧ ಅನಿಸಿಕೆಗಳು ಉದ್ಭವಿಸಿ ಸಾಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಂಭವವಿದೆ. ಆದ್ದರಿಂದ, ಘಟಕಾಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ಸೆಲ್ ಗಳನ್ನು ಚುರುಕುಗೊಳಿಸುವಂತೆ ಸೂಚಿಸಲಾಗಿತ್ತು. ಅದೇ ರೀತಿ, ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಪೋಸ್ಟ್ ಗಳ ಕುರಿತು ನಿಗಾ ಇಟ್ಟು ಈ ಕುರಿತಂತೆ ಕೈಗೊಂಡ ಕ್ರಮದ ಬಗ್ಗೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿಗೆ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿತ್ತು.