ಎಲ್ಲ ಜಿಲ್ಲಾಸ್ಪತ್ರೆಗಳಿಗೆ ಆರ್‌ಟಿಪಿಸಿಆರ್ ಕಿಟ್ ರವಾನೆ : ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್
ಬೆಂಗಳೂರು : ರಾಜ್ಯದಲ್ಲಿ ಒಟ್ಟು 47 ಸಕ್ರಿಯ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳಿಗೆ ಆರ್‌ಟಿಪಿಸಿಆರ್ ಕಿಟ್ ಅನ್ನು ರವಾನಿಸಲು ಕ್ರಮ ವಹಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಪಾಸಿಟಿವ್ ಬಂದವರು ಹೋಮ್ ಐಶೋಲೇಸನ್ ಆಗಿದ್ದಾರೆ. ಹೀಗಾಗಿ ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಆಸ್ಪತ್ರೆಗಳಲ್ಲಿ ವಿನಾಃ ಕಾರಣ ಟೆಸ್ಟ್ ಮಾಡುತ್ತಿಲ್ಲ. ಹಾಗೆಯೇ ಸಾರ್ವಜನಿಕ ಸ್ಥಳಗಳಲ್ಲಿ ಟೆಸ್ಟ್ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದರೆ ಮಾತ್ರ ಕೋವಿಡ್ ವಾರ್ಡ್ ಗಳನ್ನು ಸ್ಪಾಪನೆ ಮಾಡುತ್ತೇವೆ. ಪೂರ್ವ ತಯಾರಿಯಾಗಿ ವಾರ್ಡ್‍ಗಳನ್ನು ಸ್ಪಾಪನೆ ಮಾಡುತ್ತಿದ್ದೇವೆ. ಇದುವರೆಗೂ ಸಾರ್ವಜನಿಕವಾಗಿ ಮಾಸ್ಕ್ ಧರಿಸುವುದು ಕಡ್ಡಾಯ ಮಾಡಿಲ್ಲ. ಆದರೆ ಜನರು ಮಾಸ್ಕ್ ಧರಿಸಿದರೆ ಉತ್ತಮ ಎಂದು ಅವರು ಹೇಳಿದರು.
ಕೇರಳ ಮಹಾರಾಷ್ಟ್ರದಿಂದ ಕರ್ನಾಟಕದಿಂದ ಓಡಾಡಲು ಯಾವುದೇ ನಿರ್ಬಂಧ ಇಲ್ಲ. ವಯಸ್ಸಾದವರು, ಬಾಣಂತಿಯರು ಹಾಗೂ ಗರ್ಭಿಣಿಯರು ಮಾಸ್ಕ್ ಧರಿಸಿದರೆ ಒಳ್ಳೆಯದು. ಕೋವಿಡ್ ಇದ್ದರೂ ಸದ್ಯ ಶಾಲಾ ಕಾಲೇಜುಗಳನ್ನು ಬಂದ್ ಮಾಡುವ ಪರಿಸ್ಥಿತಿ ಇಲ್ಲ. ಈ ಬಗ್ಗೆ ಕೇಂದ್ರದಿಂದ ಯಾವುದೇ ಸೂಚನೆಗಳು ಬಂದಿಲ್ಲ. ಆದರೆ ತಯಾರಿ ಮಾಡಿಕೊಂಡಿರಿ ಎಂದು ಸೂಚನೆ ಕೊಟ್ಟಿದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.