×
Ad

ಧರ್ಮಸ್ಥಳ ದೂರು | ಎಸ್‍ಐಟಿ ತನಿಖೆ ರಾಜಕೀಯ ಪ್ರೇರಿತ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಮುಖಂಡರು ಹೇಳಲಿ: ದಿನೇಶ್ ಗುಂಡೂರಾವ್

Update: 2025-07-22 20:35 IST

ಹುಬ್ಬಳ್ಳಿ : ʼಧರ್ಮಸ್ಥಳ ದೂರುʼ ಕುರಿತು ಎಸ್‍ಐಟಿ ತನಿಖೆ ರಾಜಕೀಯ ಪ್ರೇರಿತ ಎಂದು ಬಿಜೆಪಿ ನಾಯಕರು ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಇದೇ ಮಾತನ್ನು ದಕ್ಷಿಣ ಕನ್ನಡ ಜಿಲ್ಲೆಯ ಮುಖಂಡರು ಹೇಳಲಿ ಎಂದು ತಿಳಿಸಿದರು.

ಮಂಗಳವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‍ಐಟಿ ತನಿಖೆ ರಾಜಕೀಯ ಪ್ರೇರಿತವಾದದ್ದು ಎಂದು ಬಿಜೆಪಿ ನಾಯಕರು ನೀಡಿರುವ ಹೇಳಿಕೆಗೆ ಯಾವುದೇ ಆಧಾರ ಇಲ್ಲ. ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಒತ್ತಡ ಹಾಕುತ್ತಿದ್ದರು. ಈ ಹಿನ್ನೆಲೆಯಲ್ಲಿ ಸರಕಾರ ಎಸ್‍ಐಟಿ ರಚನೆ ಮಾಡಿ ತನಿಖೆಗೆ ಮುಂದಾಗಿದೆ ಎಂದು ಹೇಳಿದರು.

ಈ ಪ್ರಕರಣದಲ್ಲಿ ಅನೇಕ ಗೊಂದಲಗಳು ಉಂಟಾಗಿವೆ. ಸಾಕಷ್ಟು ಹೆಣಗಳನ್ನು ಮುಚ್ಚಿ ಹಾಕಿದ್ದಾರೆ ಎಂಬ ಆರೋಪ ಇದೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದನ್ನು ನೋಡಬೇಕಿದೆ. ಆದುದರಿಂದ, ಈ ಬಗ್ಗೆ ರಾಜ್ಯದೆಲ್ಲೆಡೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ತನಿಖೆಯ ಹಿಂದೆ ಯಾವುದೆ ರಾಜಕೀಯ ಉದ್ದೇಶಗಳಿಲ್ಲ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.

ಸಣ್ಣ ವರ್ತಕರಿಗೆ ವಾಣಿಜ್ಯ ತೆರಿಗೆ ಇಲಾಖೆಯವರು ಜಿಎಸ್‍ಟಿ ನೋಟಿಸ್ ನೀಡುತ್ತಿರುವ ವಿಚಾರವಾಗಿ ಸಹಾಯವಾಣಿ ತೆರೆಯಲು ಬಿಜೆಪಿ ಮುಂದಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಬಿಜೆಪಿಯವರಿಗೆ ಜಿಎಸ್‍ಟಿ ವಿಚಾರವಾಗಿ ಸಾಕಷ್ಟು ತಿಳುವಳಿಕೆ ಕೊರತೆ ಇದೆ. ಜಿಎಸ್‍ಟಿ ವಿಚಾರದಲ್ಲಿ ಸರಕಾರದ ಮಧ್ಯಪ್ರವೇಶಕ್ಕೆ ಅಧಿಕಾರ ಇಲ್ಲ ಎಂದು ಹೇಳಿದರು.

ಕೇಂದ್ರ ಸರಕಾರಕ್ಕೆ ಮುಖಭಂಗ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ವಿರುದ್ಧ ಮುಡಾ ಪ್ರಕರಣದಲ್ಲಿ ಈ.ಡಿ ತನಿಖೆಗೆ ಸುಪ್ರೀಂಕೋರ್ಟ್ ಚಾಟಿ ಬೀಸಿದೆ. ಇದೊಂದು ಬಹಳ ಗಂಭೀರವಾದ ವಿಚಾರ. ಸರಕಾರದ ವಿಷಯಗಳಲ್ಲಿ ತಾವು ಯಾಕೆ ಭಾಗಿಯಾಗುತ್ತೀರಿ ಎಂದು ಈ.ಡಿಯನ್ನು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಪ್ರಶ್ನಿಸಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮುಡಾ ಪ್ರಕರಣದಲ್ಲಿ ಈ.ಡಿ ತನಿಖೆ ಕುರಿತು ಪದೇ ಪದೇ ಹೇಳಿಕೆಗಳನ್ನು ಕೊಡುತ್ತಿದ್ದರು. ಈಗ ಅವರೇ ಸ್ಪಷ್ಟನೆ ಕೊಡಲಿ. ಈ.ಡಿ, ಐಟಿ, ಸಿಬಿಐ ಬಗ್ಗೆ ಮೇಲಿಂದ ಮೇಲೆ ಮಾತನಾಡುತ್ತಿದ್ದ ಪ್ರಹ್ಲಾದ್ ಜೋಶಿಗೆ ಯಾವ ನೈತಿಕತೆಯಿದೆ. ಸುಪ್ರೀಂಕೋರ್ಟ್ ತೀರ್ಪು ಕೇಂದ್ರ ಸರಕಾರಕ್ಕೆ ದೊಡ್ಡ ಮುಖ ಭಂಗ ಎಂದು ದಿನೇಶ್ ಗುಂಡೂರಾವ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News