‘ಧರ್ಮಸ್ಥಳ ಪ್ರಕರಣ’ ಎಸ್‍ಐಟಿ ಪ್ರಾಮಾಣಿಕವಾಗಿ ತನಿಖೆ ಮಾಡುತ್ತಿದೆ : ದಿನೇಶ್ ಗುಂಡೂರಾವ್
ಬೆಂಗಳೂರು, ಸೆ.26: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ಪ್ರಾಮಾಣಿಕವಾಗಿ ತನಿಖೆ ಮಾಡುತ್ತಿದೆ. ಅವರು ತನಿಖೆ ಆರಂಭಿಸಿದ ಬಳಿಕ ಹಲವಾರು ಪ್ರಕರಣಗಳು ಹೊರಗೆ ಬಂದಂತಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೋಧ ಕಾರ್ಯದ ವೇಳೆ ಬುರುಡೆಗಳು, ಮೂಳೆಗಳು ಸಿಕ್ಕಿವೆ. ಅವು ಯಾರದ್ದು, ಅಲ್ಲಿ ಹೇಗೆ ಬಂತು? ವಾಮಚಾರ ಏನಾದರೂ ಮಾಡಿದ್ದಾರಾ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಹೇಳಿದರು.
ಎಸ್‍ಐಟಿಯನ್ನು ರದ್ದು ಮಾಡುವ ಕುರಿತು ಸರಕಾರದ ಮಟ್ಟದಲ್ಲಿ ಏನಾದರೂ ಚರ್ಚೆ ನಡೆದಿದೆಯೇ? ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆ ತೀರ್ಮಾನ ಮಾಡಬೇಕು. ನನಗೆ ಆ ಬಗ್ಗೆ ಯಾವುದೆ ಮಾಹಿತಿಯಿಲ್ಲ ಎಂದು ತಿಳಿಸಿದರು.
ಬಿಜೆಪಿಯವರು ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ನಾವು ಎಸ್‍ಐಟಿ ರಚನೆ ಮಾಡಿದಾಗ ಬಿಜೆಪಿಯವರು ಸ್ವಾಗತಿಸಿದರು. ಆನಂತರ, ವಿರೋಧಿಸಿದರು. ಈಗ ಬೆಂಗಳೂರಿನಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚಲು ಸರಕಾರ ಕೆಲಸ ಆರಂಭಿಸಿದ ಬಳಿಕ ಬಿಜೆಪಿಯವರು ರಸ್ತೆ ಗುಂಡಿಗಳನ್ನು ಮುಚ್ಚುವ ಡ್ರಾಮ ಮಾಡುತ್ತಿದ್ದಾರೆ ಎಂದು ಕಿಡಿಗಾರಿದರು.