ಸುರಂಗ ರಸ್ತೆ ಯೋಜನೆ | ಬಿಜೆಪಿಯ ತೇಜಸ್ವಿ ಸೂರ್ಯ ತಾಂತ್ರಿಕ ತಜ್ಞನಾ? : ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್
ಬೆಂಗಳೂರು : ‘ಬೆಂಗಳೂರಿನಲ್ಲಿ ಉದ್ದೇಶಿಸಿರುವ ಸುರಂಗ ರಸ್ತೆ ಯೋಜನೆ ಕುರಿತು ಪದೇ ಪದೇ ರಾಜ್ಯ ಸರಕಾರದ ವಿರುದ್ಧ ಇಲ್ಲ-ಸಲ್ಲದ ಆರೋಪ ಮಾಡುತ್ತಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಾಂತ್ರಿಕ ತಜ್ಞ ಆಗಿದ್ದಾರೆಯೇ?’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುರಂಗ ರಸ್ತೆ ವಿಚಾರವಾಗಿ ತೇಜಸ್ವಿ ಸೂರ್ಯ ಅನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾತುಕತೆಗೆ ಕರೆದಿದ್ದೇ ತಪ್ಪು. ಸ್ವಲ್ಪವೂ ಮಾಹಿತಿ ಇಲ್ಲದೆ ತೇಜಸ್ವಿ ಸೂರ್ಯ ಪದೇ ಪದೇ ಸರಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ಕಾಲದಲ್ಲಿ ಬೆಂಗಳೂರು ನಗರಕ್ಕಾಗಿ ಒಂದೇ ಒಂದು ಯೋಜನೆ ಮಾಡಲಿಲ್ಲ. ಈಗ ನಾವು ಮಾಡಲು ಹೊರಟರೆ ವಿರೋಧ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಟೀಕೆಗಳಿಗೆ ನಾವು ಹೆದರಲ್ಲ. ನಾವು ಸುರಂಗ ಮಾರ್ಗ ಮಾಡೇ ಮಾಡುತ್ತೇವೆ. ಅಲ್ಲದೆ, ಬಿಜೆಪಿ ತನ್ನ ಅವಧಿಯಲ್ಲಿ ಪರ್ಯಾಯವಾಗಿ ಯೋಚನೆ ಮಾಡಲಿಲ್ಲ. ಎಲ್ಲದಕ್ಕೂ ವಿರೋಧ ಮಾಡಿದರೆ ಹೇಗೆ? ಎಂದು ಅಸಮಾಧಾನ ಹೊರಹಾಕಿದರು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೇ ಬೆಂಗಳೂರಿನಲ್ಲಿ ಸುರಂಗ ರಸ್ತೆಯನ್ನು ನಿರ್ಮಾಣ ಮಾಡಲು ಸಲಹೆ ನೀಡಿದ್ದರು. ಮುಂಬೈ ಸೇರಿದಂತೆ ಅನೇಕ ಕಡೆಗಳಲ್ಲಿ ಸುರಂಗ ಮಾರ್ಗಗಳನ್ನು ಮಾಡಿದ್ದಾರೆ. ಬಿಜೆಪಿಗರ ಮಾತು ಕೇಳಿದರೆ ಬೆಂಗಳೂರು ಅಭಿವೃದ್ಧಿ ಆಗಲ್ಲ ಎಂದು ಅವರು ಹೇಳಿದರು.
ಚುನಾವಣೆ ದೃಷ್ಟಿಯಿಂದ ಅಥವಾ ಇದರಿಂದ ಲಾಭ ಆಗಲಿದೆ ಎನ್ನುವ ಕಾರಣಕ್ಕಾಗಿ ಸುರಂಗ ರಸ್ತೆಗಳನ್ನು ನಾವು ಮಾಡುತ್ತಿಲ್ಲ. ಬದಲಾಗಿ, ಬೆಂಗಳೂರು ನಾಗರಿಕರಿಗೆ ಸಂಚಾರ ದಟ್ಟಣೆ ಸಮಸ್ಯೆಯಿಂದ ತಪ್ಪಿಸಲು ಮುಂದಾಗಿದ್ದೇವೆ. ಬಿಜೆಪಿ ನಾಯಕರು ನಮಗೆ ತಾಂತ್ರಿಕ ಸಲಹೆಗಳನ್ನು ನೀಡಲಿ. ಅದನ್ನು ಬಿಟ್ಟು ವಿರೋಧಿಸಿದರೆ ಯಾವುದೇ ಪ್ರಯೋಜನವಿಲ್ಲ ಎಂದರು.