ಸಿಎಸ್‍ಆರ್ ಅನುದಾನ ಪರಿಣಾಮಕಾರಿ ಸದ್ಬಳಕೆಗೆ ಆದ್ಯತೆ : ದಿನೇಶ್ ಗುಂಡೂರಾವ್
ಬೆಂಗಳೂರು: ಜನಸಾಮಾನ್ಯರಿಗೆ ಹಾಗೂ ಗ್ರಾಮೀಣ ಭಾಗದವರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‍ಆರ್) ಅನುದಾನವನ್ನು ಪರಿಣಾಮಕಾರಿಯಾಗಿ ಹಾಗೂ ಸದ್ಬಳಕೆಯಾಗುವ ರೀತಿಯಲ್ಲಿ ಬಳಸಿಕೊಳ್ಳಲು ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಸೋಮವಾರ ನಗರದ ಆರೋಗ್ಯ ಸೌಧದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನವೀಕರಿಸುವ ಮೂಲಕ ಆರೋಗ್ಯ ಸೇವೆಗಳನ್ನು ಬಲಪಡಿಸುವ ಯೋಜನೆಗೆ ಚಾಲನೆ ನೀಡಿದ ನಂತರ ಅವರು ಮಾತನಾಡಿದರು.
ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ರಾಯಚೂರು ಜಿಲ್ಲೆಯಲ್ಲಿ ಒಟ್ಟು 13 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು(ಪಿಎಚ್‍ಸಿ) ಉನ್ನತೀಕರಿಸಲಾಗಿದೆ. ಈ ಪೈಕಿ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಪೂರ್ಣಗೊಂಡಿವೆ. ಇವುಗಳನ್ನು ನಾವು ಲೋಕಾರ್ಪಣೆ ಮಾಡಿದ್ದೇವೆ. ಉಳಿದ ಮೂರು ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಆರೋಗ್ಯ ಮತ್ತು ಶಿಕ್ಷಣ ಜನರಿಗೆ ಅತ್ಯಂತ ಅಗತ್ಯವಿರುವ ಕ್ಷೇತ್ರಗಳಾಗಿವೆ. ಈ ನಿಟ್ಟಿನಲ್ಲಿ ಜನರಿಗೆ ಉತ್ತಮ ಆರೋಗ್ಯ ಸೇವಾ ಸೌಲಭ್ಯಗಳನ್ನು ಒದಗಿಸಲು ನಮ್ಮ ಇಲಾಖೆ ಸಿಎಸ್‍ಆರ್ ಯೋಜನೆಯಡಿ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ. ಈಗ ಜಿ.ಇ.ಹೆಲ್ತ್ ಕೇರ್, ಸಿಎಸ್‍ಆರ್ ಬಾಕ್ಸ್, ಭಾರತ್ ಕೇರ್ಸ್ ಸಹಭಾಗಿತ್ವದಲ್ಲಿ ನಮ್ಮ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣಕ್ಕೆ ಮುಂದಾಗಿದ್ದೇವೆ ಎಂದು ಅವರು ತಿಳಿಸಿದರು.
ಸಿಎಸ್‍ಆರ್ ಬಾಕ್ಸ್, ಭಾರತ್ ಕೇರ್ಸ್ ಸಂಸ್ಥೆಯ ಉಪಾಧ್ಯಕ್ಷ ಮನೋವಿರಾಜ್ ಸಿಂಗ್ ಮಾತನಾಡಿ, ಗ್ರಾಮೀಣ ಮತ್ತು ಹಿಂದುಳಿದ ಸಮುದಾಯಗಳಿಗೆ ಸಮಾನವಾದ ಮತ್ತು ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ದೃಷ್ಟಿಯಿಂದ ನಾವು ಸರಕಾರದ ಜೊತೆ ಕೈ ಜೋಡಿಸಿದ್ದೇವೆ ಎಂದು ಹೇಳಿದರು.
ಉನ್ನತೀಕರಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಮುದಾಯದ ಸಂಪರ್ಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಲು ನಾವು ಬದ್ಧರಾಗಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆಗಳಿಗೆ ನಾವು ಕೊಡುಗೆ ನೀಡುತ್ತೇವೆ ಎಂದು ಅವರು ತಿಳಿಸಿದರು.
ಜಿಇ ಹೆಲ್ತ್ ಕೇರ್ ಅಧ್ಯಕ್ಷ ಚೈತನ್ಯ ಸಾರವತೆ ಮಾತನಾಡಿ, ದೂರದೃಷ್ಟಿಯ ಯೋಜನೆಗಳನ್ನು ದಶಕಗಳವರೆಗೆ ಅನುಷ್ಠಾನಕ್ಕೆ ತರಲು ನಾವು ಸರಕಾರದೊಂದಿಗೆ ಹೆಜ್ಜೆ ಹಾಕಲಿದ್ದೇವೆ. ಜನರಿಗೆ ಸೇವೆ ಮಾಡಲು ಹಾಗೂ ನಮ್ಮ ಜವಾಬ್ದಾರಿಯನ್ನು ಸಾಕಾರಗೊಳಿಸಲು ಅವಕಾಶ ನೀಡಿರುವ ಆರೋಗ್ಯ ಸಚಿವರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾದ ರಾಯಚೂರು ಬಳಗನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದೌಲಾಸಾಬ್ ಮುದ್ದಾಪುರ ಮಾತನಾಡಿ, ಸಿಎಸ್‍ಆರ್ ಯೋಜನೆಯಡಿ ದೊರೆತಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಹಲವಾರು ಪಿಎಚ್‍ಸಿಗಳ ವೈದ್ಯಾಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ದರು.
.