×
Ad

ಶಿಕ್ಷಣ ಪದ್ಧತಿಯಲ್ಲಿ ತಾರತಮ್ಯ ಅಡಕವಾಗಿದೆ: ಕೋಟಗಾನಹಳ್ಳಿ ರಾಮಯ್ಯ

Update: 2023-09-09 18:37 IST

ಬೆಂಗಳೂರು, ಸೆ.9: ‘ಇಂದಿನ ಶಿಕ್ಷಣ ಪದ್ಧತಿಯಲ್ಲಿ ತಾರತಮ್ಯ ಅಡಕವಾಗಿದ್ದು, ಮಕ್ಕಳಿಗೆ ಶಿಕ್ಷಣ ನೀಡುವ ನೈತಿಕತೆಯೇ ನಮಗೆ ಇಲ್ಲವಾಗಿದೆ. ಹೀಗಿರುವಾಗ ಮಕ್ಕಳಿಗೆ ಯಾವ ರೀತಿಯ ನೀತಿ ಶಿಕ್ಷಣ ನೀಡಲು ಸಾಧ್ಯವಿದೆ’ ಎಂದು ಹಿರಿಯ ಸಾಹಿತಿ ಕೋಟಗಾನಹಳ್ಳಿ ರಾಮಯ್ಯ ಪ್ರಶ್ನಿಸಿದ್ದಾರೆ.

ಶನಿವಾರ ನಗರದಲ್ಲಿರುವ ಚಿತ್ರಕಲಾ ಪರಿಷತ್ತಿನಲ್ಲಿ ಬಹುರೂಪಿ ಪ್ರಕಾಶನವು ಆಯೋಜಿಸಿದ್ದ ಮಕ್ಕಳ ಲೋಕಕ್ಕೆ ಮಹತ್ವದ 10 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವಾಸ್ತವದಲ್ಲಿ ಮಕ್ಕಳಿಗೆ ನೀತಿ ಶಿಕ್ಷಣ ನೀಡುವ ಅರ್ಹತೆಯನ್ನೇ ನಾವು ಕಳೆದುಕೊಂಡಿದ್ದೇವೆ. ನಮ್ಮ ದೇಶದಲ್ಲಿ ಪಠ್ಯ ಪುಸ್ತಕಗಳು, ಕಥೆ ಪುಸ್ತಕಗಳ ಮೂಲಕ ಬಹು ಹಿಂದಿನಿಂದಲೂ ಮೈಕ್ರೋ ಫ್ಯಾಸಿಸಂ ಅನ್ನು ಬಿತ್ತಲಾಗುತ್ತಿದೆ. ಆದನ್ನು ಇಂದಿಗೂ ಮುಂದುವರಿಸಲಾಗುತ್ತಿದೆ’ ಎಂದು ಹೇಳಿದರು.

‘ಮಕ್ಕಳು ಏನು ಓದಬೇಕು, ಏನನ್ನು ಓದಬಾರದು ಎಂಬುದನ್ನು ತೀರ್ಮಾನಿಸುವವರು ಯಾರು? ಇಂತಹ ತೀರ್ಮಾನ ಕೈಗೊಳ್ಳಲು ನಮಗೆ ಅರ್ಹತೆ ಇದೆಯೇ? ಈ ಬಗ್ಗೆ ಮಕ್ಕಳಿಂದ ಅಭಿಪ್ರಾಯಗಳನ್ನು ಪಡೆಯಲಾಗಿದೆಯೇ ಎಂಬ ಸಂಕೀರ್ಣ ಪ್ರಶ್ನೆಗಳಿಗೆ ತ್ವರಿತವಾಗಿ ಉತ್ತರ ಕಂಡುಕೊಳ್ಳುವ ಅನಿವಾರ್ಯತೆ ಇದೆ’ ಎಂದು ಅವರು ತಿಳಿಸಿದರು.

‘ಎಳೆಯ ಮಕ್ಕಳ ವಯಸ್ಸಿನ ಮೇಲೆ ಯಾವುದೇ ಪ್ರಭಾವವನ್ನು ಬೀರುವ ವಿಷಯಗಳನ್ನು ಹೇರದೆ, ಕಲಿಯಲು ಮುಕ್ತ ವಾತವರಣವನ್ನು ನಿರ್ಮಿಸಬೇಕು. ಮಕ್ಕಳ ಪಠ್ಯದಲ್ಲಿ ರಾಜಕೀಯ ಪ್ರೇರಿತ ವಿಚಾರಗಳಿದ್ದರೆ, ಅವರ ಕ್ರಿಯಾಶೀಲತೆಗೆ ದಕ್ಕೆಯಾಗುತ್ತದೆ’ ಎಂದು ಕೋಟಗಾನಹಳ್ಳಿ ರಾಮಯ್ಯ ಹೇಳಿದರು.

ಅಂಕಣಕಾರ ನಾಗೇಶ್ ಹೆಗಡೆ ಮಾತನಾಡಿ, ‘ಗ್ರಾಮೀಣ ಭಾಗದ ಸಂಪ್ರದಾಯಿಕ ಕರಕುಶಲ ಕಲೆ, ಜೀವ ವೈವಿದ್ಯ ಮೊದಲಾದವು ಮರೆಯಾಗುತ್ತಿದ್ದರೆ, ಮೂಡನಂಬಿಕೆ ಮಾತ್ರ ಜೀವಂತವಾಗಿ ಉಳಿಯುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಪುಸ್ತಕಗಳಿಗೆ ಮಾರಾಟ ಮಾಡುವುದು ಸಮಸ್ಯೆಯಾಗಿದೆ. ಕನ್ನಡ ಮಾಧ್ಯಮ ಶಾಲೆಗಳು ಕಡಿಮೆಯಾಗುತ್ತಿವೆ. ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪ್ರಾಧಿಕಾರ ಹಾಗೂ ಸಾಹಿತ್ಯ ಅಕಾಡೆಮಿಗಳು ಕನ್ನಡ ಪುಸ್ತಕಗಳ ಮಾರಾಟದ ಬಗ್ಗೆ ಗಮನ ಹರಿಸಬೇಕು ಎಂದು ಅವರು ಸಲಹೆ ನೀಡಿದರು.

ಗಾಯಕಿ ಎಂ.ಡಿ. ಪಲ್ಲವಿ ಮಾತನಾಡಿ, ಮಕ್ಕಳಿಗೆ ಸಂಬಂಧಿಸಿದ ಕತೆ ಹಾಗೂ ಹಾಡುಗಳು ಸಾಕಷ್ಟಿಲ್ಲ. ಆ ನಿಟ್ಟಿನಲ್ಲಿ ಮಕ್ಕಳ ಸಾಹಿತ್ಯದ ಬಗ್ಗೆ ಕನ್ನಡದಲ್ಲಿ ಸಾಕಷ್ಟು ಸಾಹಿತ್ಯ ಕೃಷಿಯಾಗಬೇಕು. ಆದರೆ ಇಂಗ್ಲೀಷ್‍ನಲ್ಲಿ ಮಕ್ಕಳಿಗೆ ಸಂಬಂಧಿಸಿದಂತೆ ಸಾಕಷ್ಟು ಸಾಹಿತ್ಯ ಇದೆ. ಮಕ್ಕಳ ಮನಸ್ಥಿತಿ ಅರಿತು ಕತೆ, ಹಾಡು ಮೊದಲಾದ ಸಾಹಿತ್ಯವನ್ನು ರಚನೆ ಮಾಡಬೇಕು ಎಂದರು. ಬಹುರೂಪಿ ಸಂಸ್ಥಾಪಕ ಜಿ.ಎನ್.ಮೋಹನ್, ಪತ್ರಕರ್ತೆ ವಿ.ಗಾಯತ್ರಿ ಮತ್ತಿತರರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News