ಡಿಸೆಂಬರ್ ಅಥವಾ ಜನವರಿಯಲ್ಲಿ ಬೆಂಗಳೂರು ಹಬ್ಬ, ಐಫಾ ಪ್ರಶಸ್ತಿ ಸಮಾರಂಭ : ಡಿ.ಕೆ.ಶಿವಕುಮಾರ್
ಬೆಂಗಳೂರು : ಈ ವರ್ಷ ಡಿಸೆಂಬರ್ ಅಥವಾ ಮುಂದಿನ ವರ್ಷ ಜನವರಿಯಲ್ಲಿ ಬೆಂಗಳೂರು ಹಬ್ಬ, ‘ಐಫಾ ಪ್ರಶಸ್ತಿ’ ಸಮಾರಂಭ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಅಂತರ್ ರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ (ಐಐಎಫ್‍ಎ) ವತಿಯಿಂದ ಉತ್ಸವ ಹಾಗೂ ಅಂತರ್ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸುವ ಸಂಬಂಧ ಐಐಎಫ್‍ಎ ಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ಡಿಸೆಂಬರ್ ಅಥವಾ ಜನವರಿಯಲ್ಲಿ ಬೆಂಗಳೂರು ಹಬ್ಬ ಹಾಗೂ ಐಫಾ ಪ್ರಶಸ್ತಿ ವಿತರಣೆ ಸಮಾರಂಭ ಚರ್ಚೆ ನಡೆಸಲಾಗಿದೆ.
ಈ ಬಗ್ಗೆ ಐಫಾದವರ ಜತೆ ಚರ್ಚೆ ನಡೆಸಲಾಯಿತು. ಒಂದಷ್ಟು ಕಾರ್ಯಕ್ರಮಗಳನ್ನು ಸಂಯೋಜಿಸಿ ಬೆಂಗಳೂರಿನಲ್ಲಿ ಒಂದು ವಾರಗಳ ಕಾಲ ಉತ್ತಮ ವಾತಾವರಣ ಸೃಷ್ಟಿ ಮಾಡುವುದು ನಮ್ಮ ಆಧ್ಯತೆ. ಜೊತೆಗೆ ಬೆಂಗಳೂರಿನ ಬಗ್ಗೆ ಮಹತ್ವ ನೀಡಬೇಕು ಎನ್ನುವುದು ನಮ್ಮ ಆಲೋಚನೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಹಿಂದೆ ರಾಜಸ್ಥಾನದಲ್ಲಿ ನಡೆದಿತ್ತು. ತೆಲಂಗಾಣದಲ್ಲಿ ಸೌಂದರ್ಯ ಸ್ಪರ್ಧೆ ಮಾಡುತ್ತಿದ್ದಾರೆ. ನಾವು ಇದನ್ನು ಮಾಡಲು ಹೋಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್‍ಗಿಂತ ನಮ್ಮ ಸ್ಯಾಂಡಲ್ ವುಡ್ ಎತ್ತರಕ್ಕೆ ಹೋಗಿದೆ. ಇದಕ್ಕೆ ಉತ್ತೇಜನ ಕೊಡಬೇಕು ಎಂಬುದು ನಮ್ಮ ಉದ್ದೇಶ. ಅಕ್ಟೋಬರ್ ನಲ್ಲಿ ದಸರಾ ಇರುವ ಕಾರಣಕ್ಕೆ ಡಿಸೆಂಬರ್, ಜನವರಿಯಲ್ಲಿ ನಡೆಸಬಹುದು ಎಂದು ತಿಳಿಸಲಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಸಂಸ್ಕೃತಿಯನ್ನು ಪರಿಚಯಿಸಲು ಅವಕಾಶ ಸಿಗಲಿದೆ. ಮುಂಬೈ ಬಿಟ್ಟರೆ ಬೆಂಗಳೂರು ಈ ರೀತಿಯ ಕಾರ್ಯಕ್ರಮಗಳಿಗೆ ಸೂಕ್ತ ಎಂದು ಆಯೋಜಕರು ತಿಳಿಸಿದ್ದಾರೆ ಎಂದು ಹೇಳಿದರು.