×
Ad

ಪ್ರಾಥಮಿಕ ಶಾಲೆಯ ಪಠ್ಯದಲ್ಲಿ ಕೆಂಪೇಗೌಡರ ಕುರಿತು ಪಾಠ : ಡಿ.ಕೆ.ಶಿವಕುಮಾರ್

Update: 2025-06-02 21:29 IST

ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಅವಶ್ಯಕತೆಯಿದೆ. ಆದುದರಿಂದ, ಪ್ರಾಥಮಿಕ ಶಾಲೆಯ ಪಠ್ಯದಲ್ಲಿ ಕೆಂಪೇಗೌಡರ ಕುರಿತು ಒಂದು ಪಾಠ ಸೇರಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಅವರಿಗೆ ಸಲಹೆ ನೀಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಾಡಪ್ರಭು ಕೆಂಪೇಗೌಡರ 516ನೇ ಜಯಂತ್ಯುತ್ಸವ ಆಚರಣೆ ಸಂಬಂಧ ಶಾಸಕರು, ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಸುಮನಹಳ್ಳಿಯಲ್ಲಿರುವ ಬಾಬು ಜಗಜೀವನ್ ರಾಮ್ ಭವನದಲ್ಲಿ ಜೂ.27ರಂದು ಅದ್ಧೂರಿಯಾಗಿ ಕೆಂಪೇಗೌಡರ ಜಯಂತಿಯನ್ನು ಆಚರಿಸಲಾಗುವುದು. ಅಲ್ಲದೇ, ಕೆಂಪೇಗೌಡ ಪ್ರಾಧಿಕಾರ ನಿರ್ಮಾಣಕ್ಕೆ ಸುಮನಹಳ್ಳಿಯಲ್ಲಿ ಜಮೀನು ಖರೀದಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕೆಂಪೇಗೌಡ ಜಯಂತಿಯಂದು ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ವಿವಿಧ ಸಂಸ್ಥೆಗಳು ಮತ್ತು ಎಲ್ಲ ವರ್ಗದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲು ಸಮಿತಿಯನ್ನು ರಚಿಸಲಾಗುವುದು. ಅಲ್ಲದೇ, ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಭಾಗವಹಿಸಲು ಕೆಂಪೇಗೌಡ ಪ್ರಾಧಿಕಾರದ ವತಿಯಿಂದ ಸ್ತಬ್ಧಚಿತ್ರ ಕಳುಹಿಸಲು ಉದ್ದೇಶಿಸಲಾಗಿದೆ ಎಂದು ಶಿವಕುಮಾರ್ ಹೇಳಿದರು.

ನಮ್ಮ ಮೆಟ್ರೋಗೆ ಕೆಂಪೇಗೌಡ ಮೆಟ್ರೋ ಎಂದು ನಾಮಕರಣ ಮಾಡಲು ಮನವಿ ಸಲ್ಲಿಸಿದ್ದಾರೆ. ಬೆಂಗಳೂರು ಅಂತರ್‌ ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡರ ಪ್ರತಿಮೆ ನಿರ್ಮಿಸಿ ಹೋದವರು, ಅದಕ್ಕೆ ಬೇಕಾದ ಹಣವನ್ನು ನೀಡಿಲ್ಲ. ಈಗ ನಮ್ಮ ಸರಕಾರ ಅದನ್ನು ಭರಿಸುತ್ತಿದೆ ಎಂದು ಹಿಂದಿನ ಬಿಜೆಪಿ ಸರಕಾರದ ವಿರುದ್ಧ ಉಪ ಮುಖ್ಯಮಂತ್ರಿ ವಾಗ್ದಾಳಿ ನಡೆಸಿದರು.

ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಮಾಗಡಿ ಶಾಸಕ ಬಾಲಕೃಷ್ಣ ಸೇರಿದಂತೆ ಇನ್ನಿತರ ಪ್ರಮುಖ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News