ಫೆರಿಫೆರಲ್ ರಿಂಗ್ ರಸ್ತೆ-2ಕ್ಕೆ ಡಿನೋಟಿಫಿಕೇಶನ್ ಮಾಡಿ ಜೈಲಿಗೆ ಹೋಗಲು ನಾನು ಸಿದ್ಧವಿಲ್ಲ: ಡಿ.ಕೆ.ಶಿವಕುಮಾರ್
ಬೆಂಗಳೂರು, ಆ.14 : 2005-06ರಲ್ಲೇ ಫೆರಿಫೆರಲ್ ರಿಂಗ್ ರಸ್ತೆ-2ಕ್ಕೆ ಮೊದಲ ಅಧಿಸೂಚನೆ ಬಂದಿದೆ. ಆದರೆ, ಯಾವುದೇ ಸರಕಾರ ಇದನ್ನು ಡಿನೋಟಿಫಿಕೇಷನ್ ಮಾಡಲಿಲ್ಲ. ಈಗ ಇದನ್ನು ಡಿನೋಟಿಫಿಕೇಶನ್ ಮಾಡಿ ಜೈಲಿಗೆ ಹೋಗಲು ನಾನು ಸಿದ್ಧನಿಲ್ಲ. ಇದು ನನ್ನ ವೈಯಕ್ತಿಕ ಹಾಗೂ ಸರಕಾರದ ತೀರ್ಮಾನ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಗುರುವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಎಚ್.ಎಸ್.ಗೋಪಿನಾಥ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನೈಸ್ ರಸ್ತೆ ಇಲ್ಲವಾಗಿದ್ದರೆ ಬೆಂಗಳೂರು ಸತ್ತು ಹೋಗುತ್ತಿತ್ತು. ಇದು ನೈಸ್ ರಸ್ತೆಗೆ ಪರ್ಯಾಯವಾಗಿ ಬರುತ್ತಿರುವ ರಸ್ತೆಯಾಗಿದೆ ಎಂದರು.
ಫೆರಿಫೆರಲ್ ರಿಂಗ್ ರಸ್ತೆ-1ಕ್ಕೆ 26 ಸಾವಿರ ಕೋಟಿ ರೂ. ಬೇಕಾಗಿದೆ. ಅಂದಿನ ಕಾಲದಲ್ಲೇ ಮಾಡಿದ್ದರೆ 4ರಿಂದ 5 ಸಾವಿರ ಕೋಟಿಯಲ್ಲಿ ಮುಗಿಯುತ್ತಿತ್ತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ವ್ಯಾಪ್ತಿಯಲ್ಲಿ ಹೊಸ ಪರಿಹಾರ ನೀತಿ ಬರುವುದಿಲ್ಲ. ಆದರೂ ನಾವು ರೈತರಿಗೆ ತೊಂದರೆ ಮಾಡಬಾರದು ಎಂದು ಉತ್ತಮ ಪರಿಹಾರ ನೀಡಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಫೆರಿಫೆರಲ್ ರಿಂಗ್ ರಸ್ತೆ-2 ಕೂಡ ಆರ್ಥಿಕವಾಗಿ ಸರಿದೂಗಬೇಕು. ಇದಕ್ಕೆ 27 ಸಾವಿರ ಕೋಟಿ ರೂ.ಗಳನ್ನು ಸಾಲ ಮಾಡಲು ಆಗುವುದಿಲ್ಲ. ಇಲ್ಲಿ ಕೆಲವರು ಮನೆ ಕಟ್ಟಿದ್ದಾರೆ, ಕೆಲವರು ಕಟ್ಟಿಲ್ಲ ಎಂದು ಹೇಳಿದ್ದೀರಿ. ನಾವು ಎಲ್ಲರ ಹಿತ ಗಮನದಲ್ಲಿಟ್ಟುಕೊಂಡು ಪ್ರತಿ ಪ್ರಕರಣವನ್ನು ಪರಿಶೀಲನೆ ಮಾಡುತ್ತೇವೆ. ಆದರೆ, ಈ ರಸ್ತೆ ಮಾಡುವುದನ್ನು ನಿಲ್ಲಿಸಲು ಆಗುವುದಿಲ್ಲ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.