×
Ad

ರಾಜ್ಯ ಸರಕಾರ ಅನಿವಾಸಿ ಭಾರತೀಯರಿಗಾಗಿ ಪ್ರತ್ಯೇಕ ಇಲಾಖೆ ಆರಂಭಿಸಲಿದೆ : ಡಿ.ಕೆ.ಶಿವಕುಮಾರ್

ಬೆಂಗಳೂರು ತಂತ್ರಜ್ಞಾನ ಶೃಂಗಸಭೆ-2025

Update: 2025-11-18 19:00 IST

ಬೆಂಗಳೂರು : ರಾಜ್ಯ ಸರಕಾರವು ಅನಿವಾಸಿ ಭಾರತೀಯರಿಗಾಗಿ ಪ್ರತ್ಯೇಕ ಇಲಾಖೆಯನ್ನು ಆರಂಭಿಸಲಿದೆ. ಇದರಿಂದಾಗಿ, ಅನಿವಾಸಿ ಭಾರತೀಯರು ನಮ್ಮ ರಾಜ್ಯದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಲು ಅನುಕೂಲವಾಗಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಮಂಗಳವಾರ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತರ್‌ ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ-2025ರ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

ತಂತ್ರಜ್ಞಾನ ಹಾಗೂ ಪ್ರತಿಭೆ ಬೆಂಗಳೂರಿನ ಎರಡು ಆಧಾರಸ್ತಂಭಗಳು. ದೇಶದ ಐಟಿ ರಫ್ತಿನಲ್ಲಿ ಶೇ.40-45ರಷ್ಟು ಪಾಲು ಬೆಂಗಳೂರಿನದ್ದಾಗಿದೆ. ನಮ್ಮಲ್ಲಿ ಹೆಚ್ಚು ಇಂಜಿನಿಯರಿಂಗ್, ಪ್ಯಾರಾ ಮೆಡಿಕಲ್, ಮೆಡಿಕಲ್ ಕಾಲೇಜುಗಳಿವೆ. ಇಲ್ಲಿರುವ ಮಾನವ ಸಂಪನ್ಮೂಲ ಬೇರೆ ಎಲ್ಲೂ ಇಲ್ಲ ಎಂದು ಶಿವಕುಮಾರ್ ತಿಳಿಸಿದರು.

ನಮ್ಮ ಸರಕಾರ ಅನ್ವೇಷಣೆ, ತಂತ್ರಜ್ಞಾನ, ಬಂಡವಾಳ ಹೂಡಿಕೆ, ಪ್ರತಿಭೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದೆ. ನೀವು ನಮ್ಮ ಮೇಲೆ ನಂಬಿಕೆ ಇಟ್ಟು ಬೆಂಗಳೂರಿಗೆ ಆಗಮಿಸಿದ್ದೀರಿ, ನಿಮ್ಮ ಸಮಸ್ಯೆಗಳ ಬಗ್ಗೆ ನಮಗೆ ಅರಿವಿದೆ. ಹೀಗಾಗಿ ನಾವು ನಿಮಗೆ ಅತ್ಯುತ್ತಮ ಮೂಲ ಸೌಕರ್ಯ ಒದಗಿಸಲು ಮುಂದಾಗಿದ್ದೇವೆ ಎಂದು ಅವರು ತಿಳಿಸಿದರು.

‘ಫ್ಯೂಚರೈಸ್’(ಭವಿಷ್ಯೋದಯ) ಎಂಬುದು ಕೇವಲ ಘೋಷ ವಾಕ್ಯವಲ್ಲ, ಇದು ಬದಲಾವಣೆ, ನಾಳಿನ ಭವಿಷ್ಯದ ಅಡಿಪಾಯ. ಇಂದು ನೀವು ನಮ್ಮ ಮೇಲೆ ವಿಶ್ವಾಸವಿಟ್ಟು ಇಲ್ಲಿಗೆ ಆಗಮಿಸಿರುವುದಕ್ಕೆ ನಮಗೆ ಹೆಮ್ಮೆ ಇದೆ. ಈ ಕಾರ್ಯಕ್ರಮದ ಯಶಸ್ಸಿನಲ್ಲಿ ನಮ್ಮ ರಾಜ್ಯದ ಯಶಸ್ಸು ಅಡಗಿದೆ. ನಾನು ಇಂದು ನಿಮ್ಮ ಮುಂದೆ ಎಲ್ಲ ಬಂಡವಾಳ ಹೂಡಿಕೆ, ನಿಮ್ಮ ಆಲೋಚನೆಗಳ ಧ್ವನಿಯಾಗಿ ನಿಂತಿದ್ದೇನೆ ಎಂದು ಶಿವಕುಮಾರ್ ಹೇಳಿದರು.

ರಾಜ್ಯದಲ್ಲಿ 1998ರಿಂದ ಈ ಐಟಿ ಸಮ್ಮೇಳನ ನಡೆದುಕೊಂಡು ಬರುತ್ತಿದ್ದು, ಈ ಸಮ್ಮೇಳನ ರಾಜ್ಯದ 28ನೆ ಐಟಿ ಕ್ಷೇತ್ರದ ಕಾರ್ಯಕ್ರಮವಾಗಿದೆ. ಬೆಂಗಳೂರು ತಂತ್ರಜ್ಞಾನ ಶೃಂಗಸಭೆ ಏಷ್ಯಾದ ಅತಿ ದೊಡ್ಡ ತಂತ್ರಜ್ಞಾನ ಸಮ್ಮೇಳನಗಳಲ್ಲಿ ಒಂದಾಗಿದೆ. ಇದರೊಂದಿಗೆ ಬೆಂಗಳೂರು ಜಾಗತಿಕ ಐಟಿ ರಾಜಧಾನಿಯಾಗುವತ್ತ ಸಾಗಲು ನೆರವಾಗಲಿದೆ ಎಂದು ಅವರು ಹೇಳಿದರು.

ಮೊದಲ ಬಾರಿಗೆ ಬೆಂಗಳೂರು ಅರಮನೆ ಮೈದಾನದಿಂದ ಈ ಅಂತರ್‍ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರಕ್ಕೆ ತಂತ್ರಜ್ಞಾನ ಶೃಂಗಸಭೆ ಸ್ಥಳಾಂತರವಾಗಿದೆ. ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಈ ಕೇಂದ್ರ ಆರಂಭಕ್ಕೆ ಅನುಮತಿ ನೀಡಿದ್ದೆ. ಈ ಸಮ್ಮೇಳನದಲ್ಲಿ 10 ಸಾವಿರ ನವೋದ್ಯಮಗಳು, 60 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಬೆಂಗಳೂರಿನ ಜನಸಂಖ್ಯೆಯಲ್ಲಿ ಶೇ.20 ರಷ್ಟು ಮಂದಿ ಐಟಿ ವೃತ್ತಿಪರರು:

ಈ ಸಮ್ಮೇಳನದಲ್ಲಿ ವಿಶ್ವದ ನಾನಾ ಭಾಗಗಳಿಂದ 550 ಮಂದಿ ತಮ್ಮ ಅಭಿಪ್ರಾಯವನ್ನು ಈ ಸಮ್ಮೇಳನದಲ್ಲಿ ಹಂಚಿಕೊಳ್ಳಲಿದ್ದಾರೆ. ಕರ್ನಾಟಕ ಐಟಿ ಕ್ಷೇತ್ರದ ದಿಗ್ಗಜನಾಗಿ ಬೆಳೆದಿಲ್ಲ, ಖಾಸಗಿ ವಲಯಕ್ಕೆ ಸರಕಾರದ ನೆರವು ಇಂದು ಈ ಸ್ಥಿತಿಗೆ ತಲುಪಲು ಕಾರಣವಾಗಿದೆ. ದೇಶದಲ್ಲಿ ಮೊದಲು ಐಟಿ ನೀತಿ ಜಾರಿಗೊಳಿಸಿದ ರಾಜ್ಯ ಕರ್ನಾಟಕ. ಐಟಿ ಇಲಾಖೆ ಆರಂಭಿಸಿದ ಮೊದಲ ರಾಜ್ಯ ಕರ್ನಾಟಕ. ಬೆಂಗಳೂರು ಗಾರ್ಡನ್ ಸಿಟಿ, ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ, ಏಷ್ಯಾದ ನವೋದ್ಯಮಗಳ ರಾಜಧಾನಿ ಎಂಬ ಖ್ಯಾತಿ ಪಡೆದಿದೆ ಎಂದು ಶಿವಕುಮಾರ್ ಶ್ಲಾಘಿಸಿದರು.

ಬೆಂಗಳೂರು ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬೆಳೆದಿದೆ. ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಐಟಿ ವೃತ್ತಿಪರರು ಇದ್ದರೆ, ಬೆಂಗಳೂರಿನಲ್ಲಿ 25 ಲಕ್ಷ ಐಟಿ ವೃತ್ತಿಪರರಿದ್ದಾರೆ. ಇದು ಬೆಂಗಳೂರಿನ ಐಟಿ ಕ್ಷೇತ್ರದ ಸಾಮರ್ಥ್ಯ. ಬೆಂಗಳೂರಿನಲ್ಲಿ 1.40 ಕೋಟಿ ಜನರಿದ್ದು, ಆ ಪೈಕಿ ಶೇ.20ರಷ್ಟು ಜನರು ಐಟಿ ವೃತ್ತಿಪರರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ನಮ್ಮ ಸರಕಾರ ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ 1.5 ಲಕ್ಷ ಕೋಟಿ ರೂ.ಮೀಸಲಿಡುತ್ತಿದೆ. 41 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಮೇಲ್ಸೇತುವೆ, ಅವಳಿ ಸುರಂಗ, ಎಲಿವೇಟೆಡ್ ಕಾರಿಡಾರ್, ಬಫರ್ ರಸ್ತೆಗಳು ಸೇರಿದಂತೆ 117 ಕಿ.ಮೀ ಉದ್ಧದ ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆ ರೂಪಿಸಲಾಗಿದೆ ಎಂದು ಶಿವಕುಮಾರ್ ಹೇಳಿದರು.

ಬಿಡದಿಯಲ್ಲಿ ಎಐ ಸಿಟಿ:

ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿಯಲ್ಲಿ ಎಐ ಸಿಟಿ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಇನ್ನು ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಎರಡನೆ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದ್ದೇವೆ. ರಾಜ್ಯ ಸರಕಾರ ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಸಿಎಸ್‍ಆರ್ ಶಾಲೆಗಳನ್ನು ನಿರ್ಮಿಸಲು ಮುಂದಾಗಿದೆ. ಇದಕ್ಕೆ ನೀವೆಲ್ಲರೂ ಹೆಚ್ಚಿನ ಸಹಕಾರ ನೀಡಬೇಕಾಗಿದೆ ಎಂದು ಅವರು ಮನವಿ ಮಾಡಿದರು.

ಜೊತೆಗೆ ಬೆಂಗಳೂರಿನಿಂದಾಚೆಗೆ ಕೈಗಾರಿಕೆಗಳ ಅಭಿವೃದ್ಧಿಗೆ ಹೊಸ ನೀತಿ ರೂಪಿಸಲಾಗಿದೆ. ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ. ನೀವು ಬಲಿಷ್ಠವಾದರೆ, ನಾವು ಬಲಿಷ್ಠವಾಗುತ್ತೇವೆ. ನಿಮ್ಮ ಜೊತೆಗಿನ ಸಹಭಾಗಿತ್ವಕ್ಕೆ ನಾವು ಎದುರು ನೋಡುತ್ತೇವೆ. ನಾವೆಲ್ಲರೂ ಸೇರಿ ಉತ್ತಮ ಬೆಂಗಳೂರು, ಉತ್ತಮ ಕರ್ನಾಟಕ ಹಾಗೂ ಉತ್ತಮ ಭಾರತದ ನಿರ್ಮಾಣ ಮಾಡೋಣ ಎಂದು ಉಪ ಮುಖ್ಯಮಂತ್ರಿ ಕರೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News