ಸಿಎಂ ದೊಡ್ಡವರು, ಅವರು ಹೇಳಿದ್ದನ್ನು ನಾವು ನಮ್ರತೆಯಿಂದ ಕೇಳಬೇಕು : ಡಿ.ಕೆ.ಶಿವಕುಮಾರ್
"ಹೈಕಮಾಂಡ್ ಮಾತಿಗೆ ಬದ್ಧ ಎಂದು ಸಿಎಂ ಹೇಳಿದ್ದು, ಅವರ ಮಾತಿಗೆ ನಾವೂ ಬದ್ಧ"
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಐದು ವರ್ಷ ಇರುವುದಿಲ್ಲ ಎಂದು ನಾವುಗಳು ಹೇಳಿಲ್ಲ. ಅವರೇ ತಾನು ಐದು ವರ್ಷ ಇರುವುದಾಗಿ ಹೇಳಿದ್ದಾರೆ. ದೊಡ್ಡವರು ಹೇಳಿದ ಮೇಲೆ, ನಾವು ಚಿಕ್ಕವರು ಗೌರವದಿಂದ ಕೇಳಿಕೊಂಡು ನಮ್ರತೆಯಿಂದ ಇರಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶುಕ್ರವಾರವಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಅವರು ಎಲ್ಲವನ್ನು ಹೇಳಿದ್ದಾರಲ್ಲ. ಮುಖ್ಯಮಂತ್ರಿಯವರ ಅಧಿಕಾರವನ್ನು ನಾವುಗಳು ಯಾರೂ ಪ್ರಶ್ನೆ ಮಾಡಿಲ್ಲ. ಸಂಪುಟ ಪುನಾರಚನೆ ಬಗ್ಗೆ ಅವರೇ ಹೇಳಿದ್ದಾರೆ" ಎಂದರು.
ಅನಗತ್ಯವಾಗಿ ಊಹಾಪೋಹ ಸೃಷ್ಟಿಸಬೇಡಿ: ಅನಗತ್ಯವಾಗಿ ಊಹಾಪೋಹ ಸೃಷ್ಟಿಸಬೇಡಿ. ಕಾಂಗ್ರೆಸ್ ಪಕ್ಷಕ್ಕೆ ಹಿರಿಯರ ಸಲಹೆ, ಮಾರ್ಗದರ್ಶನ ಅವಶ್ಯಕತೆ ಇದೆಯೋ ಆಗ ನಾನು ಭೇಟಿ ಮಾಡುವೆ. ಅವರು ನಮ್ಮ ನಾಯಕರು, ನಮ್ಮ ಪಕ್ಷದ ಅಧ್ಯಕ್ಷರು. ಅವರು ಬಂದಾಗ ಅವರನ್ನು ಭೇಟಿ ಮಾಡುವುದು, ನಮ್ಮ ಕರ್ತವ್ಯ. ಶಿಷ್ಟಾಚಾರದ ಬಗ್ಗೆ ನನಗೆ ಬೇರೆಯವರಿಗಿಂತ ಹೆಚ್ಚಿನ ಅರಿವಿದೆ. ಅವರು ನಮ್ಮ ರಾಜ್ಯದವರೇ ಆದರೂ ಅವರ ಹಿರಿತನ ಹಾಗೂ ಹುದ್ದೆಗೆ ನಾವು ಗೌರವ ನೀಡಬೇಕು ಎಂದು ಶಿವಕುಮಾರ್ ತಿಳಿಸಿದರು.
"ವಿಧಾನ ಪರಿಷತ್ ಪದವೀಧರ ಕ್ಷೇತ್ರದ ಚುನಾವಣೆಗೆ ಅಭ್ಯರ್ಥಿ ಘೋಷಣೆಗೆ ಪ್ರಕ್ರಿಯೆ ಆರಂಭಿಸಿದ್ದು, ಈ ವಿಚಾರವಾಗಿ ಗುರುವಾರ ಪರಿಷತ್ ಸದಸ್ಯರೊಂದಿಗೆ ಚರ್ಚೆ ಮಾಡಿರುವೆ. ನೀವುಗಳು ಚುನಾವಣೆ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಹೇಳಿರುವೆ. ಅವರೆಲ್ಲರೂ ಜವಾಬ್ದಾರಿ ಪಡೆದು ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಮಂತ್ರಿಗಳಿಗೂ ಜವಾಬ್ದಾರಿ ನೀಡಬೇಕಿದೆ. ಇನ್ನು ಪರಿಷತ್ ಸಭಾಧ್ಯಕ್ಷರು ಹಾಗೂ ಉಪಸಭಾಧ್ಯಕ್ಷರ ಆಯ್ಕೆ ವಿಚಾರವಾಗಿ ಚರ್ಚೆ ಮಾಡಿರುವೆ" ಎಂದು ತಿಳಿಸಿದರು.
"ನಾನು ಶುಕ್ರವಾರ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ನಮ್ಮ ಶಾಸಕರನ್ನು ಭೇಟಿ ಮಾಡಿರುವೆ. ರಾಜಕೀಯ ಕಾರಣಗಳಿಗೆ ಅವರನ್ನು ಜೈಲಿಗೆ ಹಾಕಲಾಗಿದೆ" ಎಂದು ಹೇಳಿದರು.
ಯಾವುದೇ ಗೊಂದಲ ಇಲ್ಲ:
"ಯಾವ ಗೊಂದಲವೂ ಇಲ್ಲ. ಗೊಂದಲ ಆಗಿರುವುದು ಕೇವಲ ಮಾಧ್ಯಮಗಳಿಗೆ ಮಾತ್ರ. ನನಗೆ ಹಾಗೂ ಮುಖ್ಯಮಂತ್ರಿಗೆ ಯಾವುದೇ ಗೊಂದಲ ಇಲ್ಲ. ಎಐಸಿಸಿ ನಾಯಕರ ಮಾತಿಗೆ ಬದ್ಧವಿರುವುದಾಗಿ ಸಿಎಂ ಹೇಳಿದ್ದಾರೆ. ನಾವು ಕೂಡ ಅವರ ಮಾತಿಗೆ ಬದ್ಧ ಎಂದು ಈಗಾಗಲೇ ಹೇಳಿದ್ದೇವೆ. ಇದರಲ್ಲಿ ಗೊಂದಲ ಏನಿದೆ?" ಎಂದು ಕೇಳಿದರು.