ಜನರಿಂದ ಹಣ ಪಡೆದು ಸರಕಾರಿ ಜಾಗದಲ್ಲಿ ಗುಡಿಸಲು ಹಾಕಲು ಅವಕಾಶ ಕೊಟ್ಟವರ ವಿರುದ್ಧ ಕ್ರಮ : ಡಿ.ಕೆ.ಶಿವಕುಮಾರ್
► ಕೋಗಿಲು ಬಳಿ ಅನಧಿಕೃತ ನಿರ್ಮಾಣಗಳ ತೆರವು ಜಾಗಕ್ಕೆ ಡಿಸಿಎಂ ಭೇಟಿ ► "ಬಡವರು, ಅರ್ಹರ ಬಗ್ಗೆ ಪರಿಶೀಲನೆ"
ಬೆಂಗಳೂರು: "ಮುಂಬರುವ ಕೇರಳ ವಿಧಾನಸಭಾ ಚುನಾವನಣೆಯಲ್ಲಿ ಸೋಲುವ ಭೀತಿಯಿಂದ ಕೇರಳ ಸಿಎಂ ಅವರು ಕೋಗಿಲು ಬಡಾವಣೆಯಲ್ಲಿನ ಅಕ್ರಮ ಒತ್ತುವರಿ ತೆರವು ವಿಚಾರದಲ್ಲಿ ಕುತಂತ್ರ ರಾಜಕೀಯ ಮಾಡುತ್ತಿದ್ದಾರೆ " ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.
ಬೆಂಗಳೂರಿನ ಯಲಹಂಕದ ಕೋಗಿಲು ಬಳಿ ಘನ ತ್ಯಾಜ್ಯ ವಿಲೇವಾರಿ ಘಟಕದ ಸರಕಾರಿ ಜಾಗದಲ್ಲಿ ಅನಧಿಕೃತ ನಿರ್ಮಾಣಗಳ ತೆರವು ಜಾಗವನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸೋಮವಾರ ಪರಿಶೀಲಿಸಿದ ನಂತರ ಮಾಧ್ಯಮಗಳ ಜತೆ ಮಾತನಾಡಿದರು.
"ಕೋಗಿಲು ಬಡಾವಣೆಯಲ್ಲಿರುವ ಕ್ವಾರಿ ಜಾಗವನ್ನು ಘನತ್ಯಾಜ್ಯ ವಿಲೇವಾರಿ ಮಾಡಲು ಸರಕಾರ ಒಂಬತ್ತು ವರ್ಷಗಳ ಹಿಂದೆಯೇ ನೀಡಿತ್ತು. ಕೆಲವರು ಈಗ ಬಂದು ಇಲ್ಲಿನ ಜಾಗ ಒತ್ತುವರಿ ಮಾಡಿ ಗುಡಿಸಲು, ಶೆಡ್ ಹಾಕಿದ್ದಾರೆ. ಇದು ಸರಕಾರಿ ಜಾಗವಾಗಿರುವ ಕಾರಣ ಮತದಾರರ ಚೀಟಿ ನೀಡಿಲ್ಲ. ಇಲ್ಲಿನ ಅಕ್ಕಪಕ್ಕ ಪ್ರದೇಶದವರಿಗೆ ಮತದಾರರ ಚೀಟಿ ನೀಡಲಾಗಿದೆ" ಎಂದರು.
"ಇಲ್ಲಿ ಒತ್ತುವರಿ ತೆರವುಗೊಳಿಸುವ ಮುನ್ನ ಅಧಿಕಾರಿಗಳು ಇವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಶಾಸಕರು ಈ ವಿಚಾರವಾಗಿ ಚರ್ಚೆ ಮಾಡಿದ್ದಾರೆ. ಆದರೆ ಕೆಲವರು ನಮಗೆ ಇಲ್ಲೇ ಜಾಗ ನೀಡಿ ಎಂದು ಮನವಿ ಮಾಡಿದ್ದರು. ಆದರೆ ಇದು ತ್ಯಾಜ್ಯ ವಿಲೇವಾರಿ ಜಾಗ ಆಗಿರುವ ಕಾರಣ ವಾಸಕ್ಕೆ ಯೋಗ್ಯ ಪ್ರದೇಶವಲ್ಲ. ಅವರ ಆರೋಗ್ಯ ದೃಷ್ಟಿಯಿಂದ ಸರಕಾರ ಈ ತೀರ್ಮಾನ ಕೈಗೊಂಡಿದೆ" ಎಂದು ಹೇಳಿದರು.
"ಕೆಲವರು ಈ ವಿಚಾರದಲ್ಲಿ ರಾಜಕೀಯ ಬೆರೆಸುತ್ತಿದ್ದಾರೆ. ಕಮ್ಯುನಿಸ್ಟ್ ಪಕ್ಷದವರು ಚುನಾವಣೆ ಸೋಲಿನ ಭಯದಿಂದ ಅಲ್ಪಸಂಖ್ಯಾತರ ಸಿಂಪತಿ ಪಡೆಯಲು ಈ ರೀತಿ ಮಾಡುತ್ತಿದ್ದಾರೆ. ಕೇರಳ ಸಿಎಂ ಈ ವಿಚಾರವಾಗಿ ಸಂಪೂರ್ಣ ಮಾಹಿತಿ ಪಡೆಯಬೇಕು. ಇದು ನಮ್ಮ ರಾಜ್ಯದ ಸ್ಥಳೀಯ ವಿಚಾರ. ಇಲ್ಲಿ ವಾಸ ಮಾಡಿದರೆ ಆರೋಗ್ಯ ಸಮಸ್ಯೆ ಉದ್ಭವಿಸುತ್ತದೆ. ನಾನು ಇಲ್ಲಿಗೆ ಬಂದಾಗ ಅಲ್ಪಸಂಖ್ಯಾತ ಸಮುದಾಯದವರು ಜೈಕಾರ ಹಾಕುತ್ತಿದ್ದಾರೆ. ನಾವು ತಪ್ಪು ಮಾಡಿದ್ದರೆ ಅವರು ಧಿಕ್ಕಾರ ಹಾಕುತ್ತಿದ್ದರು" ಎಂದರು.
ಏಕಾಏಕಿ ಸ್ಲಂ ನಿರ್ಮಿಸಲು ಅವಕಾಶ ನೀಡುವುದಿಲ್ಲ :
"ಈ ತೆರವಿನಿಂದ ಸೂರು ಕಳೆದುಕೊಂಡ ಬಡವರಿಗೆ ಹಾಗೂ ಅರ್ಹರ ಬಗ್ಗೆ ನಾವು ಪರಿಶೀಲನೆ ಮಾಡುತ್ತಿದ್ದೇವೆ. ಕೆಲವರು ಇವರಿಂದ ಒಂದು ಲಕ್ಷ, ಒಂದೂವರೇ ಲಕ್ಷ ಹಣ ಪಡೆದು ಅಕ್ರಮವಾಗಿ ಗುಡಿಸಲು ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಬೆಂಗಳೂರು ನಗರದಲ್ಲಿ ಬೇರೆ ರಾಜ್ಯಗಳ ರೀತಿ ಏಕಾಏಕಿ ಸ್ಲಂ ಸೃಷ್ಟಿಸಲು ಬಿಡುವುದಿಲ್ಲ" ಎಂದು ತಿಳಿಸಿದರು.
"ಬೆಂಗಳೂರಿನಲ್ಲಿ ಈ ರೀತಿ ಒತ್ತುವರಿ ತೆರವು ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿರುತ್ತದೆ. ಸರಕಾರಿ ಜಾಗ ಕಾಪಾಡಿಕೊಳ್ಳಲು ಇದು ಸಹಜ ಪ್ರಕ್ರಿಯೆಯಾಗಿದೆ. ಈ ಕಸ ವಿಲೇವಾರಿ ಜಾಗದಲ್ಲಿ ಕಾಂಪೌಂಡ್ ಹಾಕುವ ಕಾರ್ಯ ಎರಡು ವರ್ಷದಿಂದ ನಡೆಯುತ್ತಿದೆ. ಇಲ್ಲಿ ಯಾರಿಗಾದರೂ ಅನ್ಯಾಯ ಆಗಿದ್ದರೆ, ಸರಕಾರಿ ಯೋಜನೆಯಲ್ಲಿ ಮನೆ ನೀಡಲಾಗುವುದು" ಎಂದು ಭರವಸೆ ನೀಡಿದರು.
"ಸಿಎಂ ಸಭೆಯಲ್ಲಿ ಭಾಗವಹಿಸುವ ಮುನ್ನ ಈ ಜಾಗದ ಪರಿಸ್ಥಿತಿ ಕಣ್ಣಾರೆ ನೋಡಬೇಕು ಎಂದು ವಿಮಾನ ನಿಲ್ದಾಣದಿಂದ ಈ ಪ್ರದೇಶಕ್ಕೆ ನೇರವಾಗಿ ಭೇಟಿ ನೀಡಿರುವೆ. ಈ ಸಮಸ್ಯೆ ಬಗೆಹರಿಸಲಾಗುವುದು" ಎಂದರು.
ಹಣ ಪಡೆದವರ ವಿರುದ್ಧ ಕ್ರಮ:
ಈ ಜನರಿಂದ ಹಣ ಪಡೆದಿರುವವರು ಯಾರು ಎಂದು ಕೇಳಿದಾಗ, "ಸಾರ್ವಜನಿಕವಾಗಿ ಈ ಮಾಹಿತಿ ಹೇಳಲು ಆಗುವುದಿಲ್ಲ. ನಮ್ಮ ತನಿಖಾ ತಂಡ ಅದನ್ನು ಪರಿಶೀಲನೆ ಮಾಡಲಿದೆ. ಈ ಪ್ರದೇಶ ಹೇಗಿತ್ತು ಎಂಬುದರ ಬಗ್ಗೆ ಪ್ರತಿ ವರ್ಷದ ಗೂಗಲ್ ಮ್ಯಾಪ್ ಫೋಟೋಗಳು ನಮ್ಮ ಬಳಿ ಇವೆ. ಅವುಗಳನ್ನು ಬಿಡುಗಡೆ ಮಾಡಲಾಗುವುದು" ಎಂದು ತಿಳಿಸಿದರು.
ಹಣ ಪಡೆದಿರುವವರ ವಿರುದ್ಧ ಕ್ರಮ ಕೈಗೊಳ್ಳುತ್ತೀರಾ ಎಂದು ಕೇಳಿದಾಗ, "ಖಂಡಿತಾ, ಸರಕಾರಿ ಜಾಗದಲ್ಲಿ ಗುಡಿಸಲು ಕಟ್ಟಲು ಒಪ್ಪಂದ ಮಾಡಿಕೊಂಡಿರುವ ದಾಖಲೆಗಳು ನಮ್ಮ ಬಳಿ ಇದೆ. ಜನರಿಂದ 1-2 ಲಕ್ಷ ರೂ. ಪಡೆದು ಸರಕಾರಿ ಜಾಗದಲ್ಲಿ ನಿವೇಶನ ಹಂಚಿದ್ದಾರೆ ಎಂದು ಸಂತ್ರಸ್ತ ಮಹಿಳೆಯರು ಹೇಳಿದ್ದಾರೆ. ಇಂತಹ ಭೂಗಳ್ಳರಿಗೆ ಬೆಂಗಳೂರಿನಲ್ಲಿ ಅವಕಾಶ ನೀಡುವುದಿಲ್ಲ. ಬಡವರಿಗೆ ನಾವು ಖಂಡಿತವಾಗಿ ಸಹಾಯ ಮಾಡುತ್ತೇವೆ" ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ ತರಲಾಗುತ್ತಿದೆ ಎಂದು ಕೇಳಿದಾಗ, "ಇದರಲ್ಲಿ ಯಾವ ಮುಜುಗರ ಇಲ್ಲ. ಬೆಂಗಳೂರು ನಗರದ ಸ್ವಚ್ಛತೆ, ಕಾನೂನು ನಾವು ಕಾಪಾಡಬೇಕಿದೆ. ಏಕಾಏಕಿ ಬಂದು ಇಲ್ಲಿ ಗುಡಿಸಲು ಹಾಕಲು ಬಿಡುವುದಿಲ್ಲ. ಪ್ರತಿಯೊಂದಕ್ಕೂ ದಾಖಲೆ ಇರಲೇಬೇಕು" ಎಂದು ತಿಳಿಸಿದರು.