ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಎಚ್‍ಡಿಕೆ ಏಕೆ ಮಾತಾಡುತ್ತಿಲ್ಲ: ಡಿ.ಕೆ.ಶಿವಕುಮಾರ್
ಬೆಂಗಳೂರು : ‘ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆಯಾಗಿದೆ. ಚಿನ್ನ ಖರೀದಿ ಮಾಡಬೇಡಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಏಕೆ ಮಾತನಾಡುತ್ತಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಪ್ರಶ್ನಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಬೇರೆಯವರ ವಿರುದ್ಧ ಟೀಕೆ ಮಾಡಿ, ಹೇಳಿಕೆ ನೀಡುವುದು ಬಿಟ್ಟರೆ ಎಚ್‍ಡಿಕೆಗೆ ಬೇರೆ ಕೆಲಸವೇ ಇಲ್ಲ. ಅವರ ಕಾಲದಲ್ಲಿ ಬಡವರಿಗಾಗಿ ಒಂದು ಕೆಲಸ ಮಾಡಿದ್ದಾರಾ? ಜನರಿಗೆ ಕುಡಿಯುವ ನೀರು ಕೊಡಿಸಲು ಆಗಿರಲಿಲ್ಲ. ನಾನು ಆ ಕೆಲಸ ಮಾಡಿದ್ದೇನೆ’ ಎಂದು ನುಡಿದರು.
‘ಜನರ ಆಸ್ತಿ ದಾಖಲೆ ಸರಿ ಮಾಡಲಾಗುತ್ತಿದೆ. ಬೆಂಗಳೂರಿನ ಆಡಳಿತ ಸುಧಾರಣೆಗೆ ಐದು ಪಾಲಿಕೆ ಮಾಡಿದ್ದೇವೆ. ನನ್ನ ಕೆಲಸ ಉತ್ತಮವಾಗಿದೆ. ಈ ವಿಚಾರದಲ್ಲಿ ಬಿಜೆಪಿಯವರ ಸಲಹೆಯನ್ನು ಪಡೆದು ಕೆಲಸ ಮಾಡುತ್ತಿದ್ದೇನೆ. ನನ್ನ ಕಾಲದಲ್ಲಿ ಇಂತಹ ಕೆಲಸ ಮಾಡುವ ಅವಕಾಶ ಸಿಗಲಿಲ್ಲವಲ್ಲ ಎಂದು ಕುಮಾರಸ್ವಾಮಿಗೆ ಹೊಟ್ಟೆಯುರಿ ಬಿಟ್ಟು ಬೇರೆ ಏನು ಇಲ್ಲ ಎಂದು ಶಿವಕುಮಾರ್ ಕಿಡಿಕಾರಿದರು.
ರಿಯಲ್ ಎಸ್ಟೇಟ್ ಮೂಲಕ ಆಸ್ತಿ: ರಿಯಲ್ ಎಸ್ಟೇಟ್ ಮೂಲಕ ಆಸ್ತಿ ಮಾಡಿಕೊಂಡಿರುವುದು ಕುಮಾರಸ್ವಾಮಿ ಕುಟುಂಬದವರು. ಪಿಆರ್‌ಆರ್ ರಸ್ತೆ ಭಾಗದಲ್ಲಿ ಹೆದರಿಸಿ ಆಸ್ತಿಗಳನ್ನು ಬರೆಸಿಕೊಳ್ಳುವ ಕೆಲಸವನ್ನು ಅವರ ಅಣ್ಣ ಮಾಡಿದ್ದಾರೆ. ಕುಮಾರಸ್ವಾಮಿ ಬರೀ ಹಗಲುಗನಸು ಕಾಣುತ್ತಿರುತ್ತಾರೆ. ಬಿಡದಿ ಟೌನ್‍ಶಿಪ್ ಮಾಡುವುದು ಬೇಡ ಎಂದು ನಿನ್ನೆ ಹೇಳಿದ್ದಾರಲ್ಲಾ? ಅದನ್ನು ಆರಂಭಿಸಿದ್ದು ಯಾರು? ಅವರೇ ಅಧಿಸೂಚನೆ ಹೊರಡಿಸಿದ್ದಾರೆ. ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿರುವವರು ಯಾರು? ಎಂದು ಪ್ರಶ್ನೆ ಮಾಡಿದರು.
ದೊಡ್ಡಗುಬ್ಬಿ, ಚಿಕ್ಕ ಗುಬ್ಬಿ ಭಾಗದಲ್ಲಿ ಕೇಳಿ ನೋಡಿ. ಅವರು ಹೇಗೆ ಜನರನ್ನು ಹೆದರಿಸಿ ಎಲ್ಲ ಆಸ್ತಿಗಳನ್ನು 7, 8, 10 ಲಕ್ಷ ರೂ.ಗಳಿಗೆ ಆಸ್ತಿಗಳನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂಬುದನ್ನು ಹೇಳುತ್ತಾರೆ. ಈಗ ಆ ಅಸ್ತಿಗಳೆಲ್ಲ 25, 30, 50 ಕೋಟಿ ರೂ.ಆಸ್ತಿಯಾಗಿದೆ. ಅವರು ಬೇರೆಯವರ ಬಗ್ಗೆ ಮಾತನಾಡುವುದು ಬೇಡ ಎಂದು ಶಿವಕುಮಾರ್ ತಿರುಗೇಟು ನೀಡಿದರು.
ಖಾತಾ ಪರಿವರ್ತನೆಗೆ ಶೇ.2ರಷ್ಟು ಶುಲ್ಕ ಕಟ್ಟುವುದು ಬೇಡ ಎನ್ನುವ ಕುಮಾರಸ್ವಾಮಿಯದ್ದು, ಹಗಲುಗನಸು. ಅವರ ಸರಕಾರ ಅಧಿಕಾರಕ್ಕೆ ಬರುವುದಿಲ್ಲ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ, ಜನಪರ ಕೆಲಸ ಮಾಡುತ್ತಿದೆ. ಜನ ಇದನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ದೇವೇಗೌಡರ ಪುತ್ರ ಅಧಿಕಾರ ಹಸ್ತಾಂತರ ವಿಚಾರದಲ್ಲಿ ಮಾಡಿದ್ದನ್ನು ಅವರು ಸ್ಮರಿಸಲಿ. ಆಮೇಲೆ ಬೇರೆ ವಿಚಾರದ ಬಗ್ಗೆ ಮಾತನಾಡಲಿ ಎಂದು ಶಿವಕುಮಾರ್ ತಿರುಗೇಟು ನೀಡಿದರು.