×
Ad

ಕರ್ನಾಟಕ ಮುಸ್ಲಿಮ್ ಸಮಾವೇಶ | ಮುಸ್ಲಿಮರಿಗೆ ನೀಡಲಾಗಿದ್ದ 2ಬಿ ಮೀಸಲಾತಿ ಮರುಸ್ಥಾಪನೆ ಸೇರಿದಂತೆ 10 ಪ್ರಮುಖ ಬೇಡಿಕೆಗಳ ಮಂಡನೆ

Update: 2026-05-16 18:11 IST

ಬೆಂಗಳೂರು : ಮುಸ್ಲಿಮರಿಗೆ ಹಿಂದುಳಿದ ವರ್ಗಗಳ ಪ್ರವರ್ಗ 2ಬಿ ಅಡಿಯಲ್ಲಿ ನೀಡಲಾಗುತ್ತಿದ್ದ ಮೀಸಲಾತಿಯನ್ನು ಮರುಸ್ಥಾಪನೆ ಮಾಡಬೇಕು. ಜಾನುವಾರು ಹತ್ಯೆ ಪ್ರತಿಬಂಧಕ ಕಾನೂನು ರದ್ದುಪಡಿಸಬೇಕು ಇಲ್ಲವೇ ತಿದ್ದುಪಡಿ ಮಾಡಬೇಕು, ಮತಾಂತರ ನಿಷೇಧ ಕಾನೂನು ಹಿಂಪಡೆಯುವುದು ಸೇರಿದಂತೆ 10 ಪ್ರಮುಖ ಬೇಡಿಕೆಗಳನ್ನು ಕರ್ನಾಟಕ ಮುಸ್ಲಿಮ್ ಸಂಘಟನೆಗಳ ಒಕ್ಕೂಟವು ಸಮಾವೇಶದ ಮೂಲಕ ಸರಕಾರದ ಮುಂದಿಟ್ಟಿದೆ.

ಶನಿವಾರ ನಗರದ ಟೌನ್‍ಹಾಲ್‍ನಲ್ಲಿ ಕರ್ನಾಟಕ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ಕರ್ನಾಟಕ ಮುಸ್ಲಿಮ್ ಸಮಾವೇಶದಲ್ಲಿ ತಮ್ಮ ಆಶಯ ಭಾಷಣದಲ್ಲಿ ಬೇಡಿಕೆಗಳನ್ನು ಮುಂದಿಟ್ಟ ಸಾಮಾಜಿಕ ಹೋರಾಟಗಾರ ಮುಹಮ್ಮದ್ ಯಾಸೀನ್ ಮಲ್ಪೆ, ಹಿಂದಿನ ಸರಕಾರ ಮುಸ್ಲಿಮ್ ಹೆಣ್ಣು ಮಕ್ಕಳ ಹಿಜಾಬ್‍ಗೆ ನಿರ್ಬಂಧ ವಿಧಿಸಿ ಹೊರಡಿಸಿದ ಆದೇಶ ಹಿಂಪಡೆಯುವುದಾಗಿ ಕಾಂಗ್ರೆಸ್ ಸರಕಾರ ಹೇಳಿತ್ತು. ಆದರೆ, ನಾವು ಸಮಾವೇಶದ ದಿನಾಂಕ ಘೋಷಿಸುವವರೆಗೆ ಹಿಜಾಬ್ ಮೇಲಿನ ನಿರ್ಬಂಧ ಹಾಗೆಯೇ ಇತ್ತು. ಈಗ ಅದನ್ನು ಹಿಂಪಡೆದಿರುವುದಕ್ಕೆ ಕೃತಜ್ಞತೆಗಳು ಎಂದು ತಿಳಿಸಿದರು.

ಮೀಸಲಾತಿ: ಹಿಂದಿನ ಬಿಜೆಪಿಸ ಸರಕಾರವು 2023ರಲ್ಲಿ ರದ್ದುಪಡಿಸಿದ್ದ ಪ್ರವರ್ಗ 2ಬಿ ಅಡಿಯಲ್ಲಿ ಮುಸ್ಲಿಮರಿಗೆ ನೀಡುತ್ತಿದ್ದ ಮೀಸಲಾತಿಯನ್ನು ಕಾಂಗ್ರೆಸ್ ಸರಕಾರ ಮೂರು ವರ್ಷವಾದರೂ ಮರುಸ್ಥಾಪಿಸಿಲ್ಲ. 2ಬಿ ಮೀಸಲಾತಿ ರದ್ದು ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ್ದರೂ, ಅದನ್ನು ಶಾಸನಾತ್ಮಕ ಜಾರಿಗೆ ಕ್ರಮ ಕೈಗೊಂಡಿಲ್ಲ. ಆದಷ್ಟು ಬೇಗ 2ಬಿ ಮೀಸಲಾತಿ ಮರುಸ್ಥಾಪನೆ ಮಾಡಬೇಕು ಎಂದು ಯಾಸೀನ್ ಮಲ್ಪೆ ಆಗ್ರಹಿಸಿದರು.

ಮತಾಂತರ ನಿಷೇಧ ಕಾಯ್ದೆ: 2023ರ ಜೂ.15ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಪಡಿಸುವ ತೀರ್ಮಾನವಾಗಿದೆ. ಆದರೆ, ಈವರೆಗೆ ಕಾಯ್ದೆ ಹಿಂಪಡೆಯುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಿಲ್ಲ. ಇದರ ಪರಿಣಾಮವಾಗಿ ಈ ನಾಡಿನ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುವ ದುರುದ್ದೇಶದಿಂದ ಕೂಡಿದ, ಜನರ ಧಾರ್ಮಿಕ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕಾಯ್ದೆ ಮುಂದುವರೆದಿದೆ. ಕೂಡಲೇ ಈ ಸಂವಿಧಾನ ವಿರೋಧಿ ಕಾಯ್ದೆಯನ್ನು ಹಿಂಪಡೆದುಕೊಳ್ಳಬೇಕು ಎಂದು ಯಾಸೀನ್ ಮಲ್ಪೆ ಆಗ್ರಹಿಸಿದರು.

ಗೋಹತ್ಯೆ ನಿಷೇಧ ಕಾನೂನು: ಮುಸ್ಲಿಮರಿಗೆ ಹಿಂಸೆ ಕೊಡುವ ಏಕಮಾತ್ರ ಉದ್ದೇಶದಿಂದ ಕರ್ನಾಟಕ ಜಾನುವಾರು ವಧೆ ತಡೆ ಮತ್ತು ಸಂರಕ್ಷಣಾ ಕಾಯ್ದೆ-2020 ಇಂದು ರೈತರು, ಕಾರ್ಮಿಕರು, ಮಾಂಸದ ವ್ಯಾಪಾರಿಗಳು ಮತ್ತು ಜಾನುವಾರು ಸಾಗಾಟಗಾರರ ಪಾಲಿಗೆ ಮರಣ ಶಾಸನವಾಗಿ ಮಾರ್ಪಟ್ಟಿದೆ. ಈ ಕಾಯ್ದೆಯನ್ನು ರದ್ದುಪಡಿಸಲು ಅಥವಾ ತಿದ್ದುಪಡಿ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಅಕ್ರಮ ಕಾನೂನನ್ನು ಕೂಡಲೇ ರದ್ದುಗೊಳಿಸುವಂತೆ ಅವರು ಒತ್ತಾಯಿಸಿದರು.

ಅಲ್ಪಸಂಖ್ಯಾತರ ಬಜೆಟ್: ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ವರ್ಷಕ್ಕೆ 10 ಸಾವಿರ ಕೋಟಿ ರೂ.ಮೀಸಲಿರಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ, 2026-27ನೆ ಸಾಲಿನ ಬಜೆಟ್‍ನಲ್ಲಿ ಸುಮಾರು 4762 ಕೋಟಿ ರೂ.ಗಳನ್ನು ಮಾತ್ರ ಮೀಸಲಿಡಲಾಗಿದೆ. ಇದು ಕಾಂಗ್ರೆಸ್ ನೀಡಿದ್ದ ಭರವಸೆಯ ಅರ್ಧಕ್ಕಿಂತ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ 10 ಸಾವಿರ ಕೋಟಿ ರೂ.ಗಳ ಭರವಸೆಯ ಪೂರ್ಣ ಅನುಷ್ಠಾನವಾಗಬೇಕು ಎಂದು ಯಾಸೀನ್ ಮಲ್ಪೆ ಆಗ್ರಹಿಸಿದರು.

ವಕ್ಫ್ ಆಸ್ತಿಗಳು: ವಕ್ಫ್ ಆಸ್ತಿಗಳ ವ್ಯಾಪಕ ಅತಿಕ್ರಮಣ, ಅಕ್ರಮ ವರ್ಗಾವಣೆ, ಕಡಿಮೆ ಮೌಲ್ಯದ ಲೀಸ್‍ಗಳು ಮತ್ತು ದುರ್ಬಲ ಆಡಳಿತ ಇನ್ನೂ ಮುಂದುವರೆದಿದೆ. ವಕ್ಫ್ ಆಸ್ತಿಗಳ ಮರು ಪಡೆಯುವಿಕೆ, ಅಭಿವೃದ್ಧಿ ಮತ್ತು ಹೊಣೆಗಾರಿಕೆ ವಿಷಯದಲ್ಲಿ ಸರಕಾರದಿಂದ ಯಾವುದೆ ತೃಪ್ತಿದಾಯಕ ಕೆಲಸ ಆಗಿಲ್ಲ. ಕೇಂದ್ರ ಸರಕಾರ ದುರುದ್ದೇಶದಿಂದ ಜಾರಿ ಮಾಡಿದ ವಕ್ಫ್(ತಿದ್ದುಪಡಿ) ಕಾಯ್ದೆ-2025ಕ್ಕೆ ರಾಜ್ಯ ಸರಕಾರ ಸ್ಪಷ್ಟ ವಿರೋಧ ವ್ಯಕ್ತಪಡಿಸದಿರುವ ಬಗ್ಗೆ ನಮಗೆ ಅಸಮಾಧಾನವಿದೆ. ವಕ್ಫ್ ಆಸ್ತಿಗಳ ರಕ್ಷಣೆಗಾಗಿ ಯೋಜನೆಗಳನ್ನು ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.

ಜಾತಿ ಸಮೀಕ್ಷೆ: ಕಾಂತರಾಜ್ ಆಯೋಗದ ಜಾತಿ ಸಮೀಕ್ಷೆಯಾಗಲಿ ಅಥವಾ ಮಧುಸೂದನ್ ಆರ್.ನಾಯಕ್ ನೇತೃತ್ವದ ಆಯೋಗದಿಂದ ನಡೆಸಲಾದ ಸಮೀಕ್ಷೆಯ ವರದಿ ಇನ್ನೂ ಸದನದಲ್ಲಿ ಮಂಡನೆಯಾಗಿಲ್ಲ. ಇದರಿಂದ ಮೀಸಲಾತಿ ಮತ್ತು ಕಲ್ಯಾಣ ಸಂಬಂಧಿತ ಪ್ರಮುಖ ಸುಧಾರಣೆಗಳು ಸ್ಥಗಿತಗೊಂಡಿವೆ. ಜಾತಿಗಣತಿ ವಿಷಯದಲ್ಲಿ ಸರಕಾರ ರಾಜ್ಯದ ಎಲ್ಲ ಹಿಂದುಳಿದವರಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ ಹಾಗು ದುರ್ಬಲ ವರ್ಗಗಳಿಗೆ ಭಾರಿ ಅನ್ಯಾಯ ಮಾಡಿದೆ ಮತ್ತು ನಿರಾಶೆ ಉಂಟುಮಾಡಿದೆ ಎಂದು ಅವರು ಹೇಳಿದರು.

ದ್ವೇಷ ಭಾಷಣ, ದ್ವೇಷ ಅಪರಾಧ, ದ್ವೇಷ ಪ್ರಚಾರಕ್ಕೆ ಕಡಿವಾಣ: ಮುಸ್ಲಿಮರನ್ನು ಗುರಿಯಾಗಿಸಿಕೊಂಡ ದ್ವೇಷ ಭಾಷಣ, ಗುಂಪು ಹಿಂಸಾಚಾರ, ಅನೈತಿಕ ಪೊಲೀಸ್‍ಗಿರಿ ಮತ್ತು ಆರ್ಥಿಕ ಬಹಿಷ್ಕಾರದ ಘಟನೆಗಳು ಮುಂದುವರೆಯುತ್ತಿವೆ. ಪದೇ ಪದೇ ತಪ್ಪು ಪುನರಾವರ್ತಿಸುವವರ ವಿರುದ್ಧ ಯಾವುದೆ ಪರಿಣಾಮಕಾರಿ ಕಾನೂನು ಕ್ರಮ ಜರುಗಿಸಲಾಗಿಲ್ಲ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ರಾಜಕೀಯ ಪ್ರಾತಿನಿಧ್ಯ: ವಿಧಾನಸಭೆ, ವಿಧಾನಪರಿಷತ್, ನಿಗಮ-ಮಂಡಳಿಗಳು, ವಿಶ್ವವಿದ್ಯಾಲಯಗಳು, ಆಯೋಗಗಳು ಹಾಗೂ ಸ್ಥಳೀಯ ಸಂಸ್ಥೆಗಳ ನಾಮ ನಿರ್ದೇಶನಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ತೀರಾ ಕಡಿಮೆಯಾಗಿದೆ. ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.13 ರಷ್ಟಿದೆ. ಆದರೆ, ಕಾಂಗ್ರೆಸ್‍ನ 136 ಶಾಸಕರ ಪೈಕಿ ಮುಸ್ಲಿಮರ ಸಂಖ್ಯೆ ಕೇವಲ ಬಂಭತ್ತು ಮಾತ್ರ. ಈ ಸರಕಾರ ಬಂದ ಮೇಲೆ ವಿಧಾನಪರಿಷತ್‍ನ 15 ಸ್ಥಾನಗಳಿಗೆ ನಡೆದ ಆಯ್ಕೆಯಲ್ಲಿ ಅವಕಾಶ ಸಿಕ್ಕಿರುವುದು ಕೇವಲ ಒಬ್ಬ ಮುಸ್ಲಿಮನಿಗೆ ಮಾತ್ರ ಎಂದು ಅವರು ಹೇಳಿದರು.

ರಾಜ್ಯದ ಪ್ರಮುಖ ಸರಕಾರಿ ವೈದ್ಯಕೀಯ ಸಂಸ್ಥೆಗಳ ಮುಖ್ಯಸ್ಥರಲ್ಲಿ ಒಬ್ಬನೆ ಒಬ್ಬ ಮುಸ್ಲಿಮರಿಲ್ಲ. ಶಾಸನಸಭೆಗಳಲ್ಲಿ ಮತ್ತು ಸರಕಾರದ ವಿವಿಧ ಸಂಸ್ಥೆಗಳ ಮುಖ್ಯಸ್ಥರ ಹುದ್ದೆಗಳಲ್ಲಿ ಮುಸ್ಲಿಮರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಅವರು ಆಗ್ರಹಿಸಿದರು.

ಶಿಕ್ಷಣ: ಮುಸ್ಲಿಮ್ ವಿದ್ಯಾರ್ಥಿಗಳಿಗೆ ಶಿಕ್ಷಣದ ವಿಷಯದಲ್ಲಿ ಈ ಸರಕಾರದಿಂದ ಒಂದಷ್ಟು ಕೆಲಸಗಳು ಆಗಿವೆ ಎಂಬುದನ್ನು ಒಪ್ಪಕೊಳ್ಳುತ್ತೇವೆ ಮತ್ತು ಅದಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇವೆ. ಆದರೆ, ಸಿಬ್ಬಂದಿ ನೇಮಕಾತಿ, ಸಿಬ್ಬಂದಿ ಬಳಕೆ, ಪಠ್ಯಕ್ರಮದ ವ್ಯಾಪ್ತಿ, ವಿದ್ಯಾರ್ಥಿವೇತನದ ಸರಿಯಾದ ವಿತರಣೆ ಮತ್ತು ವಸತಿನಿಲಯಗಳ ಸಾಮರ್ಥ್ಯ ದ ವಿಷಯಗಳಲ್ಲಿ ಬಹಳಷ್ಟು ಕೆಲಸ ಇನ್ನೂಆಗಬೇಕಿದೆ. ಹಲವೆಡೆ ಮೌಲಾನಾ ಆಝಾದ್ ಶಾಲೆಗಳ ಪರಿಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ಯಾಸೀನ್ ಮಲ್ಪೆ ಗಮನ ಸೆಳೆದರು.

ಮತದಾರರ ಪಟ್ಟಿ ಪರಿಷ್ಕರಣೆ(ಎಸ್‍ಐಆರ್): ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಅಲ್ಪಸಂಖ್ಯಾತರ ಮೇಳೆ ಅಸಮರ್ಪಕ ಪರಿಣಾಮ ಬೀರಿದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಗೆ ವಿರೋಧವಾಗಿ ಕರ್ನಾಟಕ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಬೇಕು. ರಾಜ್ಯದಲ್ಲಿ ಎಸ್‍ಐಆರ್ ಜಾರಿಯಾಗದಂತೆ ತಡೆಯಲು ಹಾಗೂ ಒಬ್ಬನೆ ಒಬ್ಬ ಮತದಾರ ತನ್ನ ಹಕ್ಕಿನಿಂದ ವಂಚಿತನಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News