×
Ad

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ | ಸಿಬಿಐ ಮೇಲೆ ವಿಶ್ವಾಸವಿಲ್ಲ, ನ್ಯಾಯಾಂಗ ತನಿಖೆ ನಡೆಯಲಿ : ಡಾ.ಶರಣಪ್ರಕಾಶ್ ಪಾಟೀಲ್

Update: 2026-05-16 18:39 IST

ಬೆಂಗಳೂರು : ವೈದ್ಯಕೀಯ ಪದವಿ ಶಿಕ್ಷಣ ಪ್ರವೇಶ ಪರೀಕ್ಷೆ(ನೀಟ್) ಸೋರಿಕೆ ಪ್ರಕರಣದ ತನಿಖೆ ಸಿಬಿಐ ನಡೆಸುತ್ತಿರುವ ಬಗ್ಗೆ ವಿಶ್ವಾಸವಿಲ್ಲ. ಹಾಗಾಗಿ, ಈ ಕೂಡಲೇ ನ್ಯಾಯಾಂಗ ತನಿಖೆ ನಡೆಸಲು ಕೇಂದ್ರ ಸರಕಾರ ಮುಂದಾಗಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಆಗ್ರಹಿಸಿದ್ದಾರೆ.

ಶನಿವಾರ ವಿಕಾಸಸೌಧದ ತಮ್ಮ ಕೊಠಡಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪದೇ ಪದೇ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗುತ್ತಿದೆ. ಇದರ ಹಿಂದೆ ಪ್ರಭಾವಿ ವ್ಯಕ್ತಿಗಳಿದ್ದಾರೆ.ಹೀಗಾಗಿ, ನ್ಯಾಯಾಂಗ ತನಿಖೆ ನಡೆಯಲೇಬೇಕು.ಇಲ್ಲದಿದ್ದರೆ, ಪುನಃ ಇಂತಹ ಘಟನೆಗಳು ಆಗಬಹುದು. ಸದ್ಯ ಸಿಬಿಐ ತನಿಖೆ ಕೈಗೊಂಡಿದೆ.ಆದರೆ, ಇದರ ಮೇಲೆ ನಂಬಿಕೆ ಇಲ್ಲ ಎಂದರು.

ನೀಟ್ ಪ್ರಶ್ನೆ ಸೋರಿಕೆಯಾಗಿದ್ದು ಇಡೀ ವಿದ್ಯಾರ್ಥಿ ಸಮೂಹಕ್ಕೆ ಮಾಡಿರುವ ಬಹುದೊಡ್ಡ ಅನ್ಯಾಯವಾಗಿದೆ. ವೈದ್ಯರಾಗಬೇಕು ಎಂಬ ಸಾವಿರಾರು ಕನಸುಗಳನ್ನು ಹೊತ್ತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೇಂದ್ರ ಸರಕಾರ ಕೊಳ್ಳಿ ಇಟ್ಟಿದೆ. ಅದರಲ್ಲೂ ಕೇಂದ್ರ ಸರಕಾರದ ನಿರ್ಲಕ್ಷ್ಯ, ವೈಫಲ್ಯ ಇದರಲ್ಲಿ ಎದ್ದು ಕಾಣುತ್ತಿದೆ. ನೀಟ್ ಬದಲು ಕರ್ನಾಟಕದಲ್ಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಅತ್ಯುತ್ತಮ ಮಾದರಿಯಾಗಿದೆ. ಇದನ್ನು ಅಳವಡಿಸಿಕೊಂಡರೆ ಉತ್ತಮ. ಈ ಬಗ್ಗೆ ನಾವು ಕೇಂದ್ರ ಸರಕಾರಕ್ಕೆ ಹಲವಾರು ಬಾರಿ ಮನವಿ ಮಾಡಿದ್ದೇವೆ. ಆದರೂ ಕೇಂದ್ರ ಸರಕಾರ ಗಮನ ವಹಿಸಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ನೀಟ್ ಪರೀಕ್ಷೆಯನ್ನು ನಿರ್ಲಕ್ಷ್ಯದಿಂದ ನಡೆಸುತ್ತಿರುವ ಕೇಂದ್ರ ಸರಕಾರದ ಮೇಲೆ ನಂಬಿಕೆ ಇಲ್ಲದಂತಾಗಿದೆ. ಎಂಬಿಬಿಎಸ್ ಸೀಟು ಮಾರಾಟ ಮಾಡಿಕೊಳ್ಳಲು ಈ ರೀತಿ ಹಗರಣ ನಡೆಸಲಾಗುತ್ತಿದೆ. ಒಟ್ಟಾರೆ ಪ್ರಕರಣದ ಹಿಂದೆ ದೊಡ್ಡ ದೊಡ್ಡವರೇ ಇದ್ದಾರೆ ಎಂಬ ಗುಮಾನಿ ಇದೆ ಎಂದ ಅವರು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ರಾಜ್ಯ ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುವುದು ನೋಡಿದರೆ ಇವರಿಗೆ ನಾಚಿಕೆ, ಮಾನ ಮರ್ಯಾದೆ ಇಲ್ಲ ಎಂದು ಸ್ಪಷ್ಟವಾಗುತ್ತದೆ ಎಂದು ಅವರು ಟೀಕಿಸಿದರು.

ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಬಿಜೆಪಿಗರು ನಿಸ್ಸೀಮರು. ಹಿಂದಿನ ಸರಕಾರದಲ್ಲಿ ಪಿಎಸ್ಸೈ ನೇಮಕಾತಿಯಲ್ಲಿ ಹಗರಣ ಆಗಿತ್ತು. ಈಗ ನೀಟ್ ಹಗರಣ. ಯುವ ಸಮುದಾಯವನ್ನು ಹಾದಿ ತಪ್ಪಿಸುವುದೇ ಬಿಜೆಪಿಗರ ಕಾಯಕವಾಗಿದೆ ಎಂದೂ ಅವರು ಉಲ್ಲೇಖಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News