×
Ad

ಸಮಾವೇಶಕ್ಕೆ ಎದುರಾಗಿದ್ದ ದೊಡ್ಡ ಪ್ರತಿರೋಧವನ್ನು ಯಶಸ್ವಿಯಾಗಿ ಎದುರಿಸಿದ್ದೇವೆ : ಸುಹೈಲ್‌ ಅಹ್ಮದ್ ಮರೂರ್

ಬೆಂಗಳೂರಿನಲ್ಲಿ ರಾಜ್ಯ ಮುಸ್ಲಿಮ್ ಸಂಘಟನೆಗಳ ಒಕ್ಕೂಟದಿಂದ ʼಕರ್ನಾಟಕ ಮುಸ್ಲಿಮ್ ಸಮಾವೇಶʼ

Update: 2026-05-16 18:03 IST

ಬೆಂಗಳೂರು : ಕರ್ನಾಟಕ ಮುಸ್ಲಿಮ್ ಸಮಾವೇಶವನ್ನು ಆಯೋಜಿಸಿ ಒಂದು ವಾರದಿಂದ ಇದರ ಪ್ರಚಾರ ಮಾಡಿದ್ದೇವೆ. ಆದರೆ, ಕಳೆದ 24 ಗಂಟೆಯಲ್ಲಿ ಈ ಸಮಾವೇಶ ರದ್ದಾಗಿದೆ ಎಂದು ಅಪಪ್ರಚಾರ, ಸುಳ್ಳು ಮಾಹಿತಿ ಹರಡಿದರೂ ರಾಜ್ಯದ ವಿವಿಧ ಮೂಲೆಗಳಿಂದ ಅಸಂಖ್ಯಾತ ಜನರು ಇಲ್ಲಿ ಸೇರಿದ್ದಾರೆ. ಸಮಾವೇಶಕ್ಕೆ ಎದುರಾಗಿದ್ದ ದೊಡ್ಡ ಪ್ರತಿರೋಧವನ್ನು ನಾವು ಯಾಶಸ್ವಿಯಾಗಿ ಎದುರಿಸಿದ್ದೇವೆ ಎಂದು ಕರ್ನಾಟಕ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ವಕ್ತಾರ ಸುಹೈಲ್‌ ಅಹ್ಮದ್ ಮರೂರ್ ತಿಳಿಸಿದರು.

ಶನಿವಾರ ನಗರದ ಟೌನ್‍ಹಾಲ್‍ನಲ್ಲಿ ಕರ್ನಾಟಕ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಆಯೋಜಿಸಿದ್ದ ಕರ್ನಾಟಕ ಮುಸ್ಲಿಮ್ ಸಮಾವೇಶದಲ್ಲಿ ‘ಸಂವಿಧಾನ ಪೀಠಿಕೆ’ ಓದುವ ಮೂಲಕ ಪ್ರಾಸ್ತಾವಿಕ ಭಾಷಣ ಆರಂಭಿಸಿದ ಅವರು, ನಮ್ಮ ಒಕ್ಕೂಟ ಕಳೆದ ಎಂಟು ತಿಂಗಳಿನಿಂದ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅಭಿಪ್ರಾಯ ಸಂಗ್ರಹಿಸಿದೆ. ಸಮುದಾಯದ ಹಿತಾಸಕ್ತಿಗಾಗಿ, ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಟ ಮಾಡುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.

ಮುಸ್ಲಿಮ್ ಸಮುದಾಯಕ್ಕೆ ಲಕ್ಷಾಂತರ ಜನರನ್ನು ಸೇರಿಸಿ ಧಾರ್ಮಿಕ ಸಮಾವೇಶ ಮಾಡುವ ಶಕ್ತಿಯಿದೆ. ಆದರೆ, ಕೇವಲ ಒಂದು ಸಾವಿರ ಜನರನ್ನು ಸಂಘಟಿಸಲು ಹೊರಟಾಗ ನಿಮ್ಮ ಹಿಂದೆ ಯಾರಿದ್ದಾರೆ? ನಿಮಗೆ ದುಡ್ಡು ಕೊಟ್ಟವರು ಯಾರು?, ಈ ಸಮಾವೇಶ ಯಾರ ಪರ?, ಯಾರ ವಿರುದ್ಧ? ಎಂದು ದೊಡ್ಡ ಮಟ್ಟದ ಪ್ರತಿರೋಧ, ಸವಾಲು, ಒತ್ತಡ ನಿರ್ಮಾಣವಾಯಿತು. ಬೇರೆ ಯಾರಾದರೂ ಇದ್ದಿದ್ದರೆ, ಈ ಸಮಾವೇಶ ರಾಜಿ, ಒತ್ತಡಕ್ಕೆ ಮಣಿದು ರದ್ದಾಗುತ್ತಿತ್ತು ಎಂದು ಸುಹೈಲ್‌ ಅಹ್ಮದ್ ಮರೂರ್ ತಿಳಿಸಿದರು.

ನಾವು ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ಅಸ್ಮಿತೆ ಅಪಾಯದಲ್ಲಿರುವ ಸಂದಿಗ್ಧ ಕಾಲದಲ್ಲಿದ್ದೇವೆ. ಹಿಜಾಬ್ ನಿಷೇಧ ಆದೇಶವನ್ನು ರದ್ದು ಮಾಡುವಂತೆ ಮೂರು ವರ್ಷಗಳಿಂದ ಆಗ್ರಹಿಸುತ್ತಿದ್ದೆವು. ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಈ ಸಮಾವೇಶದ ಕುರಿತು ಪತ್ರಿಕಾಗೋಷ್ಠಿ ಮಾಡಿದ ಮೂರೇ ಗಂಟೆಯಲ್ಲಿ ಸರಕಾರ ಆದೇಶ ಹಿಂಪಡೆದಿದೆ. ಈ ಒತ್ತಡವನ್ನು ಎಲ್ಲರೂ ಗ್ರಹಿಸಬೇಕು. ಸರಕಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ಈ ಒಕ್ಕೂಟ ಸ್ವಾಗತಿಸಿ, ಧನ್ಯವಾದ ಸಲ್ಲಿಸುತ್ತದೆ ಎಂದು ಅವರು ಹೇಳಿದರು.

ಮುಸ್ಲಿಮ್ ಸಮುದಾಯಕ್ಕೆ ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಉದ್ದೇಶಗಳಿಗಾಗಿ ಒಂದು ಸಮಾವೇಶ ಮಾಡುವ ಸಾಮರ್ಥ್ಯವಿಲ್ಲವೆ? 500 ಜನ ಸೇರಿ ಮಾಡುವ ಸಮಾವೇಶವನ್ನು ಅನುಮಾನದ ದೃಷ್ಟಿಯಿಂದ ನೋಡಿ, ಅಪಪ್ರಚಾರ ನಡೆಸುತ್ತಿರುವುದು ಏಕೆ? ಇದು ಕಾಂಗ್ರೆಸ್ ಪಕ್ಷ ಅಥವಾ ಸರಕಾರದ ವಿರುದ್ಧ ಮಾಡುತ್ತಿರುವ ಸಮಾವೇಶವಲ್ಲ. ಕಾಂಗ್ರೆಸ್ ಪಕ್ಷ ಚುನಾವಣೆ ಸಂದರ್ಭದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಕೊಟ್ಟ ಭರವಸೆಗಳು ಏನು? ಈಡೇರಿಸಿದ್ದು ಯಾವುವು? ಈಡೇರಿಸದೆ ಇರುವುದು ಯಾವುದು? ಎಂದು ಪ್ರಶ್ನೆ ಮಾಡಲು ಸಮಾವೇಶ ಮಾಡಿದ್ದೇವೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್ ಸರಕಾರದ ಆಶ್ವಾಸನೆಗಳು, ಅನುಷ್ಠಾನದಲ್ಲಿ ಆಗಿರುವ ಕೊರತೆ ಕುರಿತ ನಮ್ಮ ವರದಿಯಲ್ಲಿ ದೇಶದ ಆರ್ಥಿಕತೆಗೆ ಅತಿದೊಡ್ಡ ಕೊಡುಗೆ ನೀಡುತ್ತಿರುವ ಕಾರ್ಮಿಕರು ಇದೇ ಮೊದಲ ಬಾರಿಗೆ ತಮ್ಮ ತೆರಿಗೆ ಹಾಗೂ ಶ್ರಮದ ಪಾಲಿಗೆ ಲೆಕ್ಕ ಕೇಳುತ್ತಿದ್ದಾರೆ. ಇದು ವ್ಯಕ್ತಿ, ಪಕ್ಷದ ಪರವಾಗಿ ಅಲ್ಲ, ಸಮುದಾಯದ ಪರವಾಗಿ ಒಂದು ಸಣ್ಣ ಕೆಲಸ ಮಾಡುತ್ತಿದ್ದೇವೆ. ಈ ಸಮಾವೇಶ ಮುಗಿದ ಬಳಿಕ ವರದಿಯನ್ನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು, ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಹುಲ್ ಗಾಂಧಿಯವರಿಗೂ ತಲುಪಿಸುವ ಪ್ರಯತ್ನ ಮಾಡುತ್ತೇವೆ ಎಂದು ಸುಹೈಲ್‌ ಅಹ್ಮದ್ ಮರೂರ್ ತಿಳಿಸಿದರು.

ಕರ್ನಾಟಕ ಮುಸ್ಲಿಮ್ ಸಂಘಟನೆಗಳ ಒಕ್ಕೂಟದ ಹಾರಿಸ್ ಸಿದ್ದೀಖಿ ಸ್ವಾಗತಿಸಿದರು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News