×
Ad

ಸುರಂಗ ರಸ್ತೆಗೂ ನಿಮ್ಮ ಮುಖ್ಯಮಂತ್ರಿ ಹುದ್ದೆ ಕನಸಿಗೂ ಸಂಬಂಧವಿದೆಯಾ? : ಡಿಕೆಶಿಗೆ ಅಶೋಕ್‌ ಪ್ರಶ್ನೆ

Update: 2025-10-27 13:18 IST

ಬೆಂಗಳೂರು : ಸುರಂಗ ರಸ್ತೆ ಯೋಜನೆ ಸಂಬಂಧ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ವಿಪಕ್ಷ ನಾಯಕ ಆರ್.ಅಶೋಕ್‌, ಸುರಂಗ ರಸ್ತೆಗೂ ನಿಮ್ಮ ಮುಖ್ಯಮಂತ್ರಿ ಹುದ್ದೆ ಕನಸಿಗೂ ಸಂಬಂಧವಿದೆಯಾ? ಎಂದು ಪ್ರಶ್ನಿಸಿದ್ದಾರೆ.

ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ಇಷ್ಟೆಲ್ಲ ಬಾಧಕಗಳಿರುವ ಸುರಂಗ ರಸ್ತೆಯನ್ನು ಮಾಡಿಯೇ ತೀರುತ್ತೇನೆ ಎನ್ನುವ ಹಠಕ್ಕೆ ಯಾಕೆ ಬಿದ್ದಿದ್ದೀರಿ? ಐಐಎಸ್ಸಿ ಅಧ್ಯಯನ ವರದಿ, ವಿಜ್ಞಾನಿಗಳು, ಪರಿಸರ ತಜ್ಞರು, ಪರಿಸರವಾದಿಗಳು, ನಾಗರೀಕರು ಎಷ್ಟೇ ವಿರೋಧ ಮಾಡುತ್ತಿದ್ದರೂ ಸುರಂಗ ರಸ್ತೆ ಬಗ್ಗೆ ನಿಮಗೆ ಅಷ್ಟು ಅಚಲ ಆಸಕ್ತಿ ಯಾಕೆ? ಎಂದು ಕೇಳಿದ್ದಾರೆ.

ಸುರಂಗ ರಸ್ತೆಗೂ ನಿಮ್ಮ ಮುಖ್ಯಮಂತ್ರಿ ಹುದ್ದೆ ಕನಸಿಗೂ ಸಂಬಂಧವಿದೆಯಾ?. ಇದರಲ್ಲಿ ರಾಹುಲ್‌ ಗಾಂಧಿ ಮತ್ತು ಹೈಕಮಾಂಡ್ ಕಮಿಷನ್ ಪಾಲೆಷ್ಟು? ಉತ್ತರ ಕೊಡಿ ಸ್ವಾಮಿ. ನಿಮ್ಮ ವೈಯಕ್ತಿಕ ಪ್ರತಿಷ್ಠೆ, ಹಠಕ್ಕೆ ಬೆಂಗಳೂರಿನ ಪರಿಸರಕ್ಕೆ ದೀರ್ಘಕಾಲೀನ ಅಪಾಯ ತಂದೊಡ್ಡುವ ಅವೈಜ್ಞಾನಿಕ ಯೋಜನೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಈ ರೀತಿ ಯೋಜನೆಯನ್ನು ಹೇರಿ ಬೆಂಗಳೂರಿನ ವಿಲನ್ ಆಗಬೇಡಿ ಎಂದಿದ್ದಾರೆ.

ಸುರಂಗ ರಸ್ತೆ ಯೋಜನೆಯಿಂದ ಜಲಮೂಲ, ಅಂತರ್ಜಲ, ಕೊಳವೆಬಾವಿಗೆ ಧಕ್ಕೆಯಾಗಲಿದೆ. ನಗರದ ಪರಿಸರಕ್ಕೆ ದೊಡ್ಡಮಟ್ಟದ ಪೆಟ್ಟು, ಲಾಲ್ ಬಾಗ್, ಕಬ್ಬನ್ ಪಾರ್ಕ್ ನಂತಹ ನಗರದ ಶ್ವಾಸಕೋಶಗಳಿಗೆ ಹಾನಿ ಆಗಲಿದೆ. ಟ್ರಾಫಿಕ್ ಸಮಸ್ಯೆಗೆ ಯಾವುದೇ ಶಾಶ್ವತ ಪರಿಹಾರ ಅಲ್ಲ ಎಂದು ಪೋಸ್ಟ್‌ನಲ್ಲಿ ಅವರು ಬರೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News