ಹೈಕಮಾಂಡ್ ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ : ಡಿ.ಕೆ.ಸುರೇಶ್
Update: 2025-12-01 20:42 IST
ಬೆಂಗಳೂರು : ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸುಸೂತ್ರವಾಗಿ ಆಗುತ್ತಿದ್ದು, ಒಂದು ಹಂತಕ್ಕೆ ಬರಲಿದೆ ಎಂದು ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ತಿಳಿಸಿದರು.
ಸೋಮವಾರ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನನ್ನ ದಿಲ್ಲಿಯ ಖಾಸಗಿ ಭೇಟಿ ಬಗ್ಗೆ ಎಲ್ಲವನ್ನೂ ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಸಿಎಂ ಉಪಾಹಾರ ಕೂಟ ನಡೆದಿದ್ದು, ನಾಳೆ(ಡಿ.2)ಯೂ ಒಂದು ಉಪಾಹಾರಕೂಟ ನಡೆಯಲಿದೆ ಎಂದರು.
ಇಬ್ಬರೂ ನಾಯಕರು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದಾರೆ. ಹೈಕಮಾಂಡ್ ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಸ್ವಾಮೀಜಿಗಳು ರಾಜಕೀಯದಲ್ಲಿ ಹಸ್ತಕ್ಷೇಪದ ವಿಚಾರ ಸಂಬಂಧ ರಾಜಕೀಯವಾಗಿ ಉತ್ತರ ಕೊಡುವುದಕ್ಕಿಂತ, ಯಾರು ಯಾವ ಸಂದರ್ಭದಲ್ಲಿ ಮಠವನ್ನು ಹೇಗೆ ಬಳಸಿಕೊಂಡಿದ್ದಾರೆಂಬುದು ಜನರಿಗೆ ಗೊತ್ತಿದೆ ಎಂದು ತಿಳಿಸಿದರು.