×
Ad

ಪ್ರಜ್ವಲ್ ರೇವಣ್ಣ ಶಿಕ್ಷೆ ಬಗ್ಗೆ ನಮ್ಮ ಪ್ರತಿಕ್ರಿಯೆಗಿಂತ ಜೆಡಿಎಸ್- ಬಿಜೆಪಿ ನಾಯಕರ ಪ್ರತಿಕ್ರಿಯೆ ಬಹುಮುಖ್ಯ: ಡಿ.ಕೆ. ಶಿವಕುಮಾರ್

Update: 2025-08-02 21:57 IST

ಹೊಸದಿಲ್ಲಿ : “ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆಯಾಗಿರುವ ಬಗ್ಗೆ ನಾವು ಮಾತನಾಡಿದರೆ ರಾಜಕೀಯವಾಗುತ್ತದೆ. ಹೀಗಾಗಿ ಜೆಡಿಎಸ್-ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡುವುದು ಬಹುಮುಖ್ಯ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಹೊಸದಿಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು.

ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆಯಾಗಿರುವ ಬಗ್ಗೆ ಕೇಳಿದಾಗ, “ಈ ತೀರ್ಪಿನ ಬಗ್ಗೆ ನನ್ನ ಪ್ರತಿಕ್ರಿಯೆ ಕೇಳುವುದಕ್ಕಿಂತ ಅವರದೇ ಪಕ್ಷ ಜೆಡಿಎಸ್ ಹಾಗೂ ಅವರ ಮೈತ್ರಿ ಪಕ್ಷ ಬಿಜೆಪಿ ನಾಯಕರನ್ನು ಕೇಳಬೇಕು. ಏನು ಸರಿ, ಏನು ಸರಿಯಿಲ್ಲ ಅಂತಾ ಅವರು ಹೇಳಬೇಕು. ಅವರಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡುವ ಶಕ್ತಿ, ಸಾಮರ್ಥ್ಯ ಇದೆ. ಜೆಡಿಎಸ್ ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಅಧ್ಯಕ್ಷರು, ಯುವ ಘಟಕದ ಅಧ್ಯಕ್ಷರು ಪ್ರತಿಕ್ರಿಯೆ ನೀಡಲಿ. ನಾವು ಕಾನೂನಿಗೆ ಗೌರವ ಕೊಟ್ಟು, ಅದು ಹೇಳಿದಂತೆ ಕೇಳಿಕೊಂಡು ಬರುತ್ತೇವೆ. ಅಶೋಕ್, ನಾರಾಯಣಸ್ವಾಮಿ, ಸಿ.ಟಿ. ರವಿ ಸೇರಿದಂತೆ ಬಿಜೆಪಿ ಪ್ರಮುಖ ನಾಯಕರು ಯಾಕೆ ಮಾತನಾಡುತ್ತಿಲ್ಲ” ಎಂದು ಕೇಳಿದರು.

ವಿಚಾರಣೆ ವೇಳೆಯಲ್ಲೂ ಪ್ರಜ್ವಲ್ ರೇವಣ್ಣ ಇದನ್ನು ಷಡ್ಯಂತ್ರ ಎಂದು ವಾದ ಮಂಡಿಸಿದ್ದಾರೆ ಎಂದು ಕೇಳಿದಾಗ, “ನನಗೆ ಆ ಬಗ್ಗೆ ಗೊತ್ತಿಲ್ಲ. ಅವರು ನ್ಯಾಯಾಲಯದಲ್ಲಿ ಕೊಟ್ಟಿರುವ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ” ಎಂದು ತಿಳಿಸಿದರು.

ರಾಹುಲ್ ಗಾಂಧಿ ತಮ್ಮ ಸಂದೇಶ ನೀಡಿದ್ದಾರೆ:

ರಾಹುಲ್ ಗಾಂಧಿ ಅವರ ಪ್ರತಿಭಟನೆ ಬಗ್ಗೆ ಕೇಳಿದಾಗ, “ನಾನು ಈ ವಿಚಾರವಾಗಿ ಹೆಚ್ಚು ಚರ್ಚೆ ಮಾಡುವುದಿಲ್ಲ. ರಾಹುಲ್ ಗಾಂಧಿ ಅವರು ತಮ್ಮ ಸಂದೇಶ ತಿಳಿಸಲಿದ್ದಾರೆ. ಸಂವಿಧಾನ ಉಳಿಸಿ, ಪ್ರಜಾಪ್ರಭುತ್ವ ರಕ್ಷಿಸಿ ಹೋರಾಟದ ವಿಚಾರವಾಗಿ ರಾಹುಲ್ ಗಾಂಧಿ ಅವರು ದೇಶಕ್ಕೆ ತಮ್ಮ ಸಂದೇಶ ರವಾನಿಸಿದ್ದಾರೆ” ಎಂದು ತಿಳಿಸಿದರು.

ರಾಹುಲ್ ಗಾಂಧಿ ಅವರ ಪ್ರತಿಭಟನೆ ದಿನ ಸಾರಿಗೆ ನೌಕರರ ಮುಷ್ಕರದ ಬಗ್ಗೆ ಕೇಳಿದಾಗ, “ಅವರು ತಮ್ಮದೇ ಆದ ವಿಚಾರ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ. ಅವರು ಈ ಹಿಂದೆ ಸಮಯಾವಕಾಶ ಕೇಳಿದ್ದರು. ಅವರನ್ನು ಕರೆದು ಮಾತನಾಡಬೇಕು ಎಂದು ಸಿಎಂ ಹೇಳಿದ್ದರು. ಈಗಾಗಲೇ ನಮ್ಮ ಸಾರಿಗೆ ಸಚಿವರು ಕರೆಸಿ ಮಾತನಾಡಿದ್ದಾರೆ. ಅದನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಲಾಗುವುದು” ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News