×
Ad

ವರದಕ್ಷಿಣೆ ಕಿರುಕುಳ ಆರೋಪ: ಇನ್ಸ್ ಪೆಕ್ಟರ್ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲು

Update: 2023-09-07 21:54 IST

ಬೆಂಗಳೂರು, ಸೆ.7: ಸಿಐಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇನ್ಸ್ ಪೆಕ್ಟರ್ ಮಲ್ಲಿಕಾರ್ಜುನ್ ಎಂಬುವರ ವಿರುದ್ಧ ಪತ್ನಿಯೇ ಇಲ್ಲಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪತ್ನಿ ನೀಡಿದ ದೂರಿನನ್ವಯ ಇನ್ಸ್ ಪೆಕ್ಟರ್ ಮಲ್ಲಿಕಾರ್ಜುನ ಸೇರಿ ಒಟ್ಟು ನಾಲ್ವರ ವಿರುದ್ಧ ವಂಚನೆ ಹಾಗೂ ವರದಕ್ಷಿಣೆಯಡಿ ಪ್ರಕರಣ ದಾಖಲಾಗಿರುವ ಬಗ್ಗೆ ವರದಿಯಾಗಿದೆ.

ಮಲ್ಲಿಕಾರ್ಜುನ್ ಮತ್ತು ನನಗೂ 2012ರಲ್ಲಿ ಮದುವೆಯಾಗಿತ್ತು. ವಿವಾಹದ ವೇಳೆ 8 ಲಕ್ಷ ರೂ. ನಗದು, 250 ಗ್ರಾಂ ಚಿನ್ನ ಹಾಗೂ 5 ಕೆ.ಜಿ ಬೆಳ್ಳಿ ನೀಡಿ ನಮ್ಮ ತಂದೆ ತಾಯಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರು. ಆರಂಭದಲ್ಲಿ ದಾಂಪತ್ಯ ಜೀವನ ಚೆನ್ನಾಗಿತ್ತು. ಅನಂತರ ಹಣಕ್ಕಾಗಿ ಪತಿ ಮಲ್ಲಿಕಾರ್ಜುನ್ ಪೀಡಿಸಲು ಆರಂಭಿಸಿದ್ದರು. ಇವರಿಗೆ ಸಹೋದರ ಬಸಪ್ಪ, ಅತ್ತಿಗೆ ಶಿವಮ್ಮ ಸಾಥ್ ನೀಡುತ್ತಿದ್ದರು. ಒಂದು ವರ್ಷ ತುಂಬುವಷ್ಟರಲ್ಲೆ ಗರ್ಭ ಧರಿಸಿದ್ದ ತಮಗೆ ಗರ್ಭಪಾತ ಮಾಡಿಸುವಂತೆ ಒತ್ತಡ ಹೇರಿ, ಪತಿ ಕಿರುಕುಳ ನೀಡಿದ್ದ. ಅಷ್ಟರ ನಡುವೆಯೂ ನಾನು ಗಂಡು ಮಗುವಿಗೆ ಜನ್ಮ ನೀಡಿದ್ದೆ ಎಂದು ದೂರುದಾರ ಮಹಿಳೆ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಬಾಣಂತನಕ್ಕಾಗಿ ತವರು ಮನೆ ಸೇರಿದ ಬಳಿಕ ಪತಿ ಮಲ್ಲಿಕಾರ್ಜುನ್ ಬೇರೆ ಮಹಿಳೆಯೊಂದಿಗೆ ಸಂಬಂಧ ಬೆಸೆದುಕೊಂಡಿದ್ದರು. ನನಗೆ ವರದಕ್ಷಿಣೆ ಹಣದ ವಿಚಾರವಾಗಿ ಕಿರುಕುಳ ನೀಡುತ್ತಿದ್ದರು ಎಂದು ತಮ್ಮ ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ.

ಈ ಸಂಬಂಧ ಮಹಿಳೆ ನೀಡಿದ ದೂರಿನ ಮೇರೆಗೆ ಪತಿ ವಿರುದ್ಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಪ್ರಕರಣ ಕುರಿತು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಇನ್ಸ್‍ಪೆಕ್ಟರ್ ಮಲ್ಲಿಕಾರ್ಜುನ್, ‘ನನ್ನ ಮೇಲೆ ಬಂದಿರುವ ಆರೋಪಗಳೆಲ್ಲವೂ ಸುಳ್ಳಾಗಿದೆ. ಮದುವೆಯಾದ ಕೆಲವೇ ತಿಂಗಳಲ್ಲಿ ನನ್ನಿಂದ ಪತ್ನಿ ದೂರವಾಗಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 2018ರಲ್ಲಿ ಆಕೆಯಿಂದ ವಿಚ್ಚೇದನ ಪಡೆದಿದ್ದೇನೆ. ಬೇರೆ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದೇನೆ ಎಂದು ಆರೋಪಿಸುವ ಮೂಲಕ ತನ್ನನ್ನ ತೇಜೋವಧೆ ಮಾಡುವ ಪ್ರಯತ್ನ ಮಾಡಲಾಗಿದ್ದು, ಆಕೆಯ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ’ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News