‘ಮನೆ ಮನೆಗೆ ಪೊಲೀಸ್’ ವ್ಯವಸ್ಥೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಚಾಲನೆ
Photo:X/@DrParameshwara
ಬೆಂಗಳೂರು: ರಾಜ್ಯ ಪೊಲೀಸ್ ವತಿಯಿಂದ ಆರಂಭಿಸಿರುವ ‘ಮನೆ-ಮನೆಗೆ ಪೊಲೀಸ್’ ಕಾರ್ಯಕ್ರಮಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಗೋವಿಂದರಾಜನಗರದಲ್ಲಿ ಶುಕ್ರವಾರ ಸಾಂಕೇತಿಕವಾಗಿ ಚಾಲನೆ ನೀಡಿದರು.
ಬಳಿಕ ವೇದಿಕೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರಥಮ ಬಾರಿಗೆ ಈ ಯೋಜನೆಯನ್ನು ಆರಂಭಿಸಲಾಗಿದ್ದು, ಇದರ ಯಶಸ್ಸು ದೇಶವ್ಯಾಪಿ ತಲುಪಲಿದೆ. ತಳಮಟ್ಟದಲ್ಲಿ ಅಪರಾಧ ನಿಯಂತ್ರಣ, ನಾಗರಿಕರಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ಸಹಕಾರಿಯಾಗಲಿದೆ ಎಂದು ಭರವಸೆ ವ್ಯಕಪಡಿಸಿದರು.
ನೆರೆಹೊರೆಯಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿದ್ದರೆ, ಮಕ್ಕಳಿಗೆ ತೊಂದರೆಯಾಗುತ್ತಿದ್ದರೆ, ಮಾದಕ ವಸ್ತುಗಳ ಮಾರಾಟ ಚಟುವಟಿಕೆಯ ಮಾಹಿತಿಯನ್ನು ಸಾರ್ವಜನಿಕರು ಪೊಲೀಸರೊಂದಿಗೆ ಮನೆ ಮನೆಗೆ ಪೊಲೀಸ್ ವ್ಯವಸ್ಥೆ ಮೂಲಕ ಹಂಚಿಕೊಳ್ಳಬಹುದು. ಜನಪ್ರತಿನಿಧಿಗಳು, ಉದ್ಯಮಿಗಳು, ಸಾಹಿತಿಗಳು ಸಾಫ್ಟ್ ಟಾರ್ಗೆಟ್ ಆಗಿರುತ್ತಾರೆ. ಆದ್ದರಿಂದ ಮನೆ ಮನೆಗೆ ಪೊಲೀಸ್ ವ್ಯವಸ್ಥೆ ಮೂಲಕ ಹೆಚ್ಚು ನಿಗಾವಹಿಸಲು ಸಹಾಯವಾಗುತ್ತದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ರಸ್ತೆಯ ಎರಡು ಬದಿಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇದೇ ವಿಚಾರಕ್ಕೆ ದಿನನಿತ್ಯ ಗಲಾಟೆಗಳಾಗುತ್ತವೆ. ಟೋಯಿಂಗ್ ವ್ಯವಸ್ಥೆ ಮರು ಜಾರಿಗೊಳಿಸಲಾಗುವುದು. ಪೊಲೀಸ್ ಸಿಬ್ಬಂದಿಗಳು ಟೋಯಿಂಗ್ ಮಾಡಲಿದ್ದಾರೆ. ಟೋಯಿಂಗ್ ಮಾಡಲು ಮಹಾನಗರ ಪಾಲಿಕೆಯಿಂದ ಹೊಸದಾಗಿ ವಾಹನಗಳನ್ನು ನೀಡುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತರು ತಿಳಿಸಿದ್ದಾರೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.
ಇದೇ ವೇಳೆ ವಿಡಿಯೋ ಕಾನ್ಫ್‍ರೆನ್ಸ್ ಮೂಲಕ ರಾಜ್ಯದ ವಿವಿಧ ಜಿಲ್ಲೆಗಳ ಎಸ್ಪಿ ಹಾಗೂ ಪೊಲೀಸ್ ಆಯುಕ್ತರೊಂದಿಗೆ ಗೃಹ ಸಚಿವರು ಸಂವಾದ ನಡೆಸಿದರು. ಈ ವೇಳೆ ದಕ್ಷಿಣ ಕನ್ನಡ ಜಿಲ್ಲೆ ಎಸ್ಪಿ ಡಾ.ಅರುಣ್ ಮಾತನಾಡಿ, ಈ ಭಾಗದಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಹೆಚ್ಚು ಅನುಕೂಲವಾಗುತ್ತಿದೆ. ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಈ ಕಾರ್ಯಕ್ರಮದಿಂದ ಸಾರ್ವಜನಿಕರು ಮತ್ತು ಪೊಲೀಸರ ನಡುವೆ ಸಮನ್ವಯತೆ ಬೆಳೆಯಲಿದೆ ಎಂದು ಅಭಿಪ್ರಾಯವನ್ನು ಹಂಚಿಕೊಂಡರು.
ಶಿವಮೊಗ್ಗ ಜಿಲ್ಲಾ ಎಸ್ಪಿ ಮಿಥುನ್ ಮಾತನಾಡಿ, ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಬಗ್ಗೆ ಜನರಿಗೆ ಒಂದು ರೀತಿಯ ಆತಂಕವಿತ್ತು. ಈಗ ಸರಿಯಾಗಿದೆ. ಮನೆಗಳಿಗೆ ಭೇಟಿ ನೀಡಿದಾಗ, ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಸೈಬರ್ ಕ್ರೈಂ, ಮಾದಕ ದ್ರವ್ಯ ಬಳಕೆಯ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸಲು ಅನುಕೂಲವಾಗುತ್ತಿದೆ ಎಂದರು.
ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಮಾತನಾಡಿ, ಜನರೊಂದಿಗೆ ಸಮನ್ವಯತೆ ಸಾಧಿಸಲು ಉತ್ತಮ ಕಾರ್ಯಕ್ರಮ. ಸಮಾಜದಲ್ಲಿ ಪೊಲೀಸರ ಬಗ್ಗೆ ಇರುವ ಅಭಿಪ್ರಾಯವನ್ನು ಉತ್ತಮಗೊಳಿಸುತ್ತೇವೆ. ಈ ಜವಾಬ್ಧಾರಿಯನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಎಲ್ಲ ಮನೆಗಳ ಡೇಟಾ ನಿಮ್ಮ ಬಳಿ ಇರಬೇಕು:
ನಿಗದಿತ ಸಮಯದಲ್ಲಿ ಎಲ್ಲ ಮನೆಗಳ ಡೇಟಾ ನಿಮ್ಮ ಬಳಿ ಇರಬೇಕು. ನಾನು ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿದಾಗ ಈ ಎಲ್ಲ ಮಾಹಿತಿ ಲಭ್ಯವಿರಬೇಕು. ಬೇರೆ ರಾಜ್ಯಗಳ ಪೊಲೀಸರಿಗೆ ಮಾದರಿಯಾಗಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸೂಚಿಸಿದರು.
ಏನಿದು ‘ಮನೆ ಮನೆಗೆ ಪೊಲೀಸ್’?:
ಅಪರಾಧ ನಿಯಂತ್ರಣ, ನಾಗರಿಕರಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ‘ಮನೆ ಮನೆಗೆ ಪೊಲೀಸ್’ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಯ ಮೂಲಕ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಂಚಿಕೆ ಮಾಡಲಾಗಿರುವ ಪೊಲೀಸ್ ಗಸ್ತು ಪ್ರಕ್ರಿಯೆ ಇನ್ನಷ್ಟು ಗಟ್ಟಿಗೊಳಿಸಲಾಗುತ್ತದೆ.
ಪ್ರತಿ ಪೊಲೀಸ್ ಠಾಣಾ ವ್ಯಾಪ್ತಿಯ ಸರಹದ್ದನ್ನು ಬೀಟ್‍ಗಳಾಗಿ ವಿಂಗಡಿಸಿ, ಬೀಟ್‍ಗಳನ್ನು ಸಬ್‍ಬೀಟ್‍ಗಳಾಗಿ ವಿಂಗಡಿಸಿದೆ. ಸಬ್‍ಬೀಟ್‍ಗಳಲ್ಲಿ 40-50 ಮನೆಗಳನ್ನೊಳಗೊಂಡ ಒಂದು ಕ್ಲಸ್ಟರ್ ಅಥವಾ ಸಮೂಹವನ್ನಾಗಿ ರಚಿಸಲಾಗುತ್ತದೆ. ಪ್ರತಿ ಕ್ಲಸ್ಟರ್‍ಗೆ ಒಬ್ಬ ಪೊಲೀಸ್ ಸಿಬ್ಬಂದಿ ನೇಮಿಸಿ ಉಸ್ತುವಾರಿ ಅಧಿಕಾರಿಗಳಾಗಿ ಎಎಸ್ಸೈ ಮತ್ತು ಪಿಎಸ್ಸೈ ನಿಯೋಜಿಸಲಾಗುತ್ತದೆ. ಈ ತಂಡಗಳು ಮನೆ-ಮನೆಗೆ ತೆರಳಿ ಕಾನೂನು ಪರಿಧಿಯಲ್ಲಿ ಸಾರ್ವಜನಿಕರ ದೂರುಗಳನ್ನು ಆಲಿಸಲಿದ್ದಾರೆ.