×
Ad

ನಮ್ಮ ಸಂವಿಧಾನವು ಆರೆಸ್ಸೆಸ್‌ ಕುತಂತ್ರಗಳನ್ನು ಕೋಟಿ ಬಾರಿ ಎದುರಿಸುವಷ್ಟು ಸಮರ್ಥವಿದೆ: ಡಾ.ಮಹದೇವಪ್ಪ

Update: 2025-06-28 18:46 IST

ಡಾ.ಎಚ್.ಸಿ.ಮಹದೇವಪ್ಪ

ಬೆಂಗಳೂರು : ಡಾ.ಬಿ.ಆರ್.ಅಂಬೇಡ್ಕರ್ ವಿಷಯದಲ್ಲಿ ಇತ್ತೀಚೆಗೆ ಪ್ರೀತಿ ತೋರಿಸುವ ನಾಟಕ ಮಾಡುತ್ತಿರುವ ಆರೆಸ್ಸೆಸ್‍ನವರು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಮಾತನಾಡುತ್ತಿರುವ ದತ್ತಾತ್ತೇಯ ಹೊಸಬಾಳೆರನ್ನು ಆರೆಸ್ಸೆಸ್‍ನಿಂದ ಕೂಡಲೇ ಹೊರಹಾಕಬೇಕು. ಅಲ್ಲದೆ, ಅವರ ಮೇಲೆ ಕ್ರಮ ಜರುಗಿಸಬೇಕು. ಇಲ್ಲವಾದರೆ ತಮ್ಮದು ದೇಶದ್ರೋಹಿ ಸಂಘಟನೆ ಎಂಬುದನ್ನು ಆರೆಸ್ಸೆಸ್ ಬಹಿರಂಗವಾಗಿ ಒಪ್ಪಿಕೊಳ್ಳಲಿ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಇಂದಿಲ್ಲಿ ಹೇಳಿದ್ದಾರೆ.

ಶನಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಜಾತ್ಯತೀತತೆ’ ಎಂದರೆ ಜಾತಿ ಮತ್ತು ಧರ್ಮದ ಬೇಧ ನೋಡದೇ ಎಲ್ಲರನ್ನೂ ಸಮಾನವಾಗಿ ಕಾಣುವುದು. ‘ಸಮಾಜವಾದ’ ಎಂದರೆ ಸಾಮಾಜಿಕ ಮತ್ತು ಆರ್ಥಿಕವಾಗಿ ಎಲ್ಲರಿಗೂ ನ್ಯಾಯ ಒದಗಿಸುವುದು ಎಂದರ್ಥ. ಸಂವಿಧಾನದ ಮೂಲ ಆಶಯಗಳಲ್ಲಿ ಮೇಲೆ ಹೇಳಿದ ಸಮಾನತೆ ಮತ್ತು ನ್ಯಾಯದ ಅಂಶವು ಮಹತ್ವವಾಗಿರುವಂತದ್ದು ಮತ್ತು ಒಂದು ದೇಶದ ಉಳಿವಿಗೆ ಬೇಕಾಗಿರುವಂತಹ ಸಂಗತಿಗಳು ಎಂದು ಅವರು ಹೇಳಿದ್ದಾರೆ.

ಹೀಗಿರುವಾಗ ಇಂತಹ ಮಹತ್ವದ ಅಂಶಗಳನ್ನು ತೆಗೆದುಹಾಕಬೇಕೆಂದು ಹೇಳುತ್ತಿರುವ ಆರೆಸ್ಸೆಸ್‍ನ ದತ್ತಾತ್ರೇಯ ಹೊಸಬಾಳೆ ಜಾತ್ಯತೀತತೆ ಹಾಗೂ ಸಮಾಜವಾದ ಎಂಬ ಪದವನ್ನು ಅರ್ಥ ಮಾಡಿಕೊಳ್ಳವುದೇ ಸಂವಿಧಾನ ವಿರೋಧಿಯಾಗಿ ಮಾತನಾಡುತ್ತಿರುವುದು ದೇಶದ್ರೋಹದ ನಡವಳಿಕೆ ಆಗಿದೆ’ ಎಂದು ಟೀಕಿಸಿದ್ದಾರೆ.

‘ದೇಶದ ಬಹುತ್ವಕ್ಕೆ ಎಂದಿನಿಂದಲೂ ವಿರುದ್ಧವಾಗಿರುವ ಆರೆಸ್ಸೆಸ್ ಯಾವಾಗಲೂ ಮನುಷ್ಯನ ಆಹಾರ, ಬಟ್ಟೆ, ಆಚರಣೆ ಹಾಗೂ ಅವರ ಆಲೋಚನೆಗಳ ವಿಷಯದಲ್ಲಿ ನಿಯಂತ್ರಣ ಸಾಧಿಸಲು ಯತ್ನಿಸುತ್ತಲೇ ಇದೆ. ಆದರೆ, ಅಂಬೇಡ್ಕರ್ ಅವರು ನೀಡಿರುವ ಈ ದೇಶದ ಆತ್ಮವಾದ ಸಂವಿಧಾನವು ಎಷ್ಟು ಗಟ್ಟಿಯಾಗಿದೆ ಎಂದರೆ ಇಂತಹ ನೂರು ದಾಳಿಗಳು ಮತ್ತು ಕುತಂತ್ರಗಳನ್ನು ಅದು ಇನ್ನೂ ಕೋಟಿ ಬಾರಿ ಎದುರಿಸಿ ನಿಲ್ಲುವಷ್ಟು ಸಮರ್ಥವಾಗಿದೆ’ ಎಂದು ಮಹದೇವಪ್ಪ ಪ್ರತಿಪಾದಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News