×
Ad

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಚಾಲಕರ ಆಕ್ರೋಶ; ಪೋಸ್ಟರ್ ಅಭಿಯಾನ ಆರಂಭ

Update: 2023-11-16 19:05 IST

 ಚಿತ್ರ- ತೇಜಸ್ವಿ ಸೂರ್ಯ ವಿರುದ್ಧ ಪೋಸ್ಟರ್‌ ಅಭಿಯಾನ

ಬೆಂಗಳೂರು, ನ.16: ಕಾರ್ ಪೂಲಿಂಗ್‍ಗೆ ಅವಕಾಶ ನೀಡುವಂತೆ ಮುಖ್ಯಮಂತ್ರಿಗೆ ಬರೆದಿರುವ ಪತ್ರ ಮತ್ತು ಹೇಳಿಕೆಯನ್ನು ಹಿಂಪಡೆಯುವಂತೆ ಆಗ್ರಹಿಸಿರುವ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಸದಸ್ಯರು ‘ಪೋಸ್ಟರ್ ಅಭಿಯಾನ’ ಆರಂಭಿಸಿದ್ದಾರೆ.

ಗುರುವಾರ ನಗರದ ಫ್ರೀಡಂ ಪಾರ್ಕಿನ ಮೈದಾಣದಲ್ಲಿ ಜಮಾಯಿಸಿದ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದ ಸದಸ್ಯರು, ಕಾರ್ ಪೂಲಿಂಗ್ ಮತ್ತು ವೈಟ್‍ಬೋರ್ಡ್ ವಾಹನ ಬಾಡಿಗೆಗೆ ಬಳಸಲು ನೀಡಿರುವ ಹೇಳಿಕೆಯನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಈ ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ಎಸ್.ನಟರಾಜ ಶರ್ಮಾ, ಇತ್ತೀಚಿಗೆ ಬೃಹತ್ ಪ್ರತಿಭಟನೆ ನಡೆಸಿ ಕಾನೂನು ಬಾಹಿರ ಆ್ಯಪ್ ಸೇವೆಗಳನ್ನು ರದ್ದುಪಡಿಸಬೇಕೆಂದು ರಾಜ್ಯ ಸರಕಾರಕ್ಕೆ ಒತ್ತಾಯ ಮಾಡಲಾಗಿತ್ತು.ಅದರಂತೆ ಕಾನೂನು ಬಾಹಿರ ಹಾಗೂ ಕಾರ್ಮಿಕ, ಬಡ ವಿರೋಧಿ ನೀತಿಗಳನ್ನು ಜಾರಿಗೊಳಿಸುವುದಿಲ್ಲ ಎಂದು ಸರಕಾರ ಭರವಸೆ ನೀಡಿತ್ತು. ಆದರೆ, ಈ ಮಧ್ಯೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ವೈಟ್ ಬೋರ್ಡ್ ವಾಹನ ಮತ್ತು ಕಾರ್ ಪೂಲಿಂಗ್ ಅವಕಾಶ ನೀಡುವಂತೆ ಮನವಿ ಮಾಡಿರುವುದು ಖಂಡನೀಯ ಎಂದು ಹೇಳಿದರು.

ತೇಜಸ್ವಿ ಸೂರ್ಯ ನಡೆಯಿಂದ ವಾಣಿಜ್ಯ ಸೇವೆಗೆ ತೆರಿಗೆ ಕಟ್ಟಿ, ಪರವಾನಿಗೆ ಪಡೆದು, ಬ್ಯಾಡ್ಜ್ ಹೊಂದಿರುವ ಚಾಲಕರಿಗೆ ದೊಡ್ಡ ನಷ್ಟ ಆಗಲಿದೆ. ತೇಜಸ್ವಿ ಸೂರ್ಯಗೆ ಈ ಕುರಿತು ಒಂದಿಷ್ಟು ಮಾಹಿತಿ ಇಲ್ಲದೆ, ಪತ್ರ ಬರೆದಿದ್ದು, ಇದರಿಂದ ಕಾನೂನು ಉಲ್ಲಂಘನೆ ಮಾಡಿ ಓಡಿಸುತ್ತಿರುವ ವಾಹನ ಮತ್ತು ಆ್ಯಪ್ ಅದಾರಿತ ಕಂಪೆನಿಗಳಿಗೆ ಇನ್ನಷ್ಟು ಬೆಂಬಲ ಸಿಕ್ಕ ಹಾಗೆ ಆಗಿದೆ ಎಂದರು. 

ಒಕ್ಕೂಟದ ಗಂಡಸಿ ಸದಾನಂದ ಸ್ವಾಮಿ ಮಾತನಾಡಿ, ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಕಾರ್ಮಿಕರ ಪರ ನಿಲ್ಲಬೇಕಾಗಿದೆ.ಆದರೆ, ಅವರ ನಡೆಯಿಂದ ಬಡ ಮತ್ತು ಮಧ್ಯ ವರ್ಗದ ಕಾರ್ಮಿಕರ ಆರ್ಥಿಕ ಸ್ಥಿತಿ ಹಾಳಾಗಲಿದೆ. ಹೀಗಾಗಿ ಅವರು ಈ ಕೂಡಲೇ ತಮ್ಮ ಹೇಳಿಕೆ ಮತ್ತು ಪತ್ರವನ್ನು ವಾಪಸ್ಸು ಪಡೆಯಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News