×
Ad

ರಾಜ್ಯದಲ್ಲಿ ಬರಗಾಲ | ವಿದೇಶ ಪ್ರವಾಸ ಹೋಗದಂತೆ ಸಹಕಾರ ಸಂಘಗಳಿಗೆ ಸಚಿವ ಕೆ.ಎನ್.ರಾಜಣ್ಣ ಸೂಚನೆ

Update: 2023-10-21 20:28 IST

ಕೆ.ಎನ್.ರಾಜಣ್ಣ

ಬೆಂಗಳೂರು, ಅ.21: ರಾಜ್ಯದಲ್ಲಿ ತೀವ್ರ ಬರಗಾಲ ಇರುವ ಕಾರಣದಿಂದ ಸಹಕಾರ ಸಂಘಗಳಿಗೆ ವಿದೇಶ ಪ್ರವಾಸ ಹೋಗದಂತೆ ಈಗಾಗಲೆ ಸೂಚನೆ ನೀಡಿದ್ದೇವೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

ಶನಿವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ಹಿರಿಯ ಅಧಿಕಾರಿಗಳು ಅ.25ರಂದು ಭೇಟಿಗೆ ಕಾಲಾವಕಾಶ ನೀಡಿದ್ದಾರೆ. ಬರದ ಕುರಿತು ಅಗತ್ಯ ಮಾಹಿತಿಯನ್ನು ನೀಡುತ್ತೇವೆ. 16 ಸಾವಿರ ಕೋಟಿ ರೂ.ಬರ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದ್ದೇವೆ. ಎನ್‍ಡಿಆರ್‍ಎಫ್ ಮಾನದಂಡದ ಪ್ರಕಾರ 4,800 ಕೋಟಿ ರೂ.ಸಿಗಬಹುದು ಎಂದರು.

ಬರಗಾಲದ ಹಿನ್ನೆಲೆಯಲ್ಲಿ ರೈತರ ಅಲ್ಪಾವಧಿ ಸಾಲದ ಬಡ್ಡಿ ಮನ್ನಾ ಮಾಡಬಹುದು. ನಬಾರ್ಡ್‍ನಿಂದ ನಮಗೆ ಬರಬೇಕಿರುವ 4 ಸಾವಿರ ಕೋಟಿ ರೂ.ಇನ್ನೂ ಬಂದಿಲ್ಲ. ಈ ಸಂಬಂಧ ಕೇಂದ್ರ ಸರಕಾರಕ್ಕೆ ಪತ್ರ ಬರೆದು, ಆದಷ್ಟು ಶೀಘ್ರ ಹಣ ಬಿಡುಗಡೆ ಮಾಡುವಂತೆ ಕೋರಿದ್ದೇವೆ ಎಂದು ರಾಜಣ್ಣ ಹೇಳಿದರು.

ಸರಕಾರ ಹಾಗೂ ಪಕ್ಷಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಯಾರೊಬ್ಬರೂ ಮಾಧ್ಯಮಗಳ ಎದುರು ಹೇಳಿಕೆಗಳನ್ನು ನೀಡಬಾರದು ಎಂದು ಉಪ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ. ಆದುದರಿಂದ, ಪಕ್ಷಕ್ಕೆ ಧಕ್ಕೆ ಬರುವುದಾದರೆ ರಾಜಕಾರಣದ ಬಗ್ಗೆ ಏನು ಮಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಹೆಚ್ಚುವರಿ ಡಿಸಿಎಂ ಹುದ್ದೆಗಳ ಬಗ್ಗೆ ಮಾತನಾಡಿದ್ದೆ. ಈ ವಿಚಾರವನ್ನು ಕೇಂದ್ರದ ನಾಯಕರ ಗಮನಕ್ಕೂ ತರಲಾಗಿದೆ. ನಾವು 135 ಜನ ಗೆದ್ದಿದ್ದೇವೆ ಎಂದು ಬೀಗುವ ಪರಿಸ್ಥಿತಿಯಲ್ಲಿ ಇಲ್ಲ ಎಂದು ರಾಜಣ್ಣ ಹೇಳಿದರು.

ಎರಡೂವರೆ ವರ್ಷದ ಬಳಿಕ ಸಂಪುಟ ಪುನಾರಚನೆಯಾಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜಣ್ಣ, ಮುಖ್ಯಮಂತ್ರಿ ನಾಳೆಯೆ ನನ್ನನ್ನು ಸಂಪುಟದಿಂದ ಕೈ ಬಿಟ್ಟರೆ ನಾನು ವಿರೋಧಿಸುವುದಿಲ್ಲ. ಅತ್ಯಂತ ಸಂತೋಷದಿಂದ ಹೊರಗೆ ಹೋಗುತ್ತೇನೆ. ಅಧಿಕಾರಕ್ಕೆ ಅಂಟಿಕೊಂಡು ಕೂರುವ ವ್ಯಕ್ತಿತ್ವ ನನ್ನದಲ್ಲ ಎಂದರು.

ನ.2ರಿಂದ ಹಾಸನಾಂಬೆಯ ದರ್ಶನ ಆರಂಭ: ‘ಇತಿಹಾಸ ಪ್ರಸಿದ್ಧ ಹಾಸನಾಂಬೆಯ ದರ್ಶನವು ನ.2ರಿಂದ ಆರಂಭ ಆಗಲಿದೆ. ಕಳೆದ ವರ್ಷ ಸುಮಾರು 6 ಲಕ್ಷ ಭಕ್ತರು ಹಾಸನಾಂಬೆಯ ದರ್ಶನ ಪಡೆದಿದ್ದರು. ಈ ವರ್ಷ ಭಕ್ತಾದಿಗಳ ಸಂಖ್ಯೆ 10 ಲಕ್ಷ ದಾಟಬಹುದು ಎಂಬ ನಿರೀಕ್ಷೆಯಿದೆ’ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News