×
Ad

ಬರ ಪರಿಸ್ಥಿತಿ | 5,326 ಕೋಟಿ ರೂ.ಪರಿಹಾರ ಕೋರಿ ರಾಜ್ಯದಿಂದ ಕೇಂದ್ರಕ್ಕೆ ಪ್ರಸ್ತಾವ

Update: 2023-10-19 20:37 IST

ಬೆಂಗಳೂರು, ಅ.19: ನೈರುತ್ಯ ಮುಂಗಾರು ಮಳೆ ಕೊರತೆಯಿಂದಾಗಿ ಉಂಟಾಗಿರುವ ಬರ ಪರಿಸ್ಥಿತಿಯಿಂದಾಗಿ ಕೃಷಿ ಬೆಳೆ ಪರಿಹಾರ, ಜಾನುವಾರುಗಳಿಗೆ ಪರಿಹಾರ ಹಾಗೂ ಕುಡಿಯುವ ನೀರು ಸರಬರಾಜು ಮಾಡುವುದು ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳಿಗಾಗಿ ಕೇಂದ್ರ ಸರಕಾರಕ್ಕೆ 5326.87 ಕೋಟಿ ರೂ.ಗಳ ಪರಿಹಾರ ಕೋರಿ ಪ್ರಸ್ತಾವನೆ ಸಲ್ಲಿಸಲು ಸಂಪುಟ ಸಭೆ ನಿರ್ಧರಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 195 ತಾಲೂಕುಗಳನ್ನು ಬರಪೀಡಿತ ಎಂದು ಈಗಾಗಲೆ ಘೋಷಿಸಲಾಗಿದೆ. ಇದರ ಜೊತೆಗೆ ಇನ್ನೂ 21 ತಾಲೂಕುಗಳನ್ನು ಅ.12ರಂದು ಬರಪೀಡಿತ ಎಂದು ಘೋಷಿಸಿ ಹೊರಡಿಸಿದ್ದ ಆದೇಶಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ ಎಂದರು.

ಬರಪರಿಸ್ಥಿತಿಯಿಂದಾಗಿ ಅಂದಾಜು 33,770 ಕೋಟಿ ರೂ.ಗಳಷ್ಟು ಕೃಷಿ ಬೆಳೆ ನಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಎನ್‍ಡಿಆರ್ ಎಫ್ ನಿಯಮಾವಳಿಗಳ ಪ್ರಕಾರ 4,414 ಕೋಟಿ ರೂ.ಗಳ ಬೆಳೆ ಪರಿಹಾರ, ಜಾನುವಾರುಗಳಿಗೆ ಸಂಬಂಧಿಸಿದಂತೆ 355 ಕೋಟಿ ರೂ., ಕುಡಿಯುವ ನೀರು ಸರಬರಾಜು ಮಾಡಲು 554 ಕೋಟಿ ರೂ.ಸೇರಿದಂತೆ 5326.87 ಕೋಟಿ ರೂ.ಗಳ ಪರಿಹಾರ ಕೋರಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ರಸಗೊಬ್ಬರ ಬಫರ್ ಸ್ಟಾಕ್ ದಾಸ್ತಾನು ಮಾಡಲು ರಾಜ್ಯ ಸಹಕಾರ ಮಾರಾಟ ಮಂಡಳಿಗೆ 200 ಕೋಟಿ ರೂ. ಹಾಗೂ ರಾಜ್ಯ ಬೀಜ ನಿಗಮಕ್ಕೆ 200 ಕೋಟಿ ರೂ.ಗಳ ಬ್ಯಾಂಕ್ ಸಾಲಕ್ಕೆ ಸರಕಾರದ ಖಾತ್ರಿ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.

100 ಗ್ರಾಮ ನ್ಯಾಯಾಲಯಗಳ ಸ್ಥಾಪನೆ: 2008-09ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಸರಕಾರವು ‘ಗ್ರಾಮ ನ್ಯಾಯಾಲಯ’ಗಳನ್ನು ಸ್ಥಾಪಿಸುವ ಸಂಬಂಧ ಕಾನೂನು ಜಾರಿಗೆ ತಂದಿತ್ತು. ಅದರಂತೆ, ರಾಜ್ಯದಲ್ಲಿ 25 ಕೋಟಿ ರೂ.ವೆಚ್ಚದಲ್ಲಿ 100 ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಲು ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದರು.

ಗ್ರಾಮೀಣ ಪ್ರದೇಶದ ಜನರ ಮನೆಯ ಬಾಗಿಲಿಗೆ ನ್ಯಾಯದಾನ ಸಿಗಬೇಕು. ಗ್ರಾಮೀಣ ಜನರು ನ್ಯಾಯಕ್ಕಾಗಿ ಪಟ್ಟಣ, ನಗರ ಪ್ರದೇಶಗಳಿಗೆ ಅನಗತ್ಯವಾಗಿ ಅಲೆದಾಡಬಾರದು ಎಂಬ ಉದ್ದೇಶದಿಂದ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಇವು ಜೆಎಂಎಫ್‍ಸಿ ಹಂತದ ನ್ಯಾಯಾಲಯಗಳ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಲಿವೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಕೇಂದ್ರ ಸರಕಾರವು ಈ ಯೋಜನೆ ಅನುಷ್ಠಾನಕ್ಕಾಗಿ ಒಂದು ಬಾರಿಗೆ ಅನ್ವಯಿಸುವಂತೆ ಒಂದು ಗ್ರಾಮ ನ್ಯಾಯಾಲಯಕ್ಕೆ 18 ಲಕ್ಷ ರೂ.ಗಳನ್ನು ನೀಡಲಿದೆ. ಈ ಗ್ರಾಮ ನ್ಯಾಯಾಲಯಗಳ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಕೊಪ್ಪಳ ವೈದ್ಯಕೀಯ ಕಾಲೇಜಿನ 450 ಹಾಸಿಗೆಗಳ ಬೋಧನಾ ಆಸ್ಪತ್ರೆ ನಿರ್ಮಾಣ ಕಾಮಗಾರಿಯ ಪರಿಷ್ಕøತ ಅಂದಾಜು 192 ಕೋಟಿ ರೂ.ಗಳಿಗೆ ಅನುಮೋದನೆ ನೀಡಲಾಗಿದೆ. ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಬಸ್ ನಿಲ್ದಾಣವನ್ನು 23.48 ಕೋಟಿಗಳ ಅಂದಾಜು ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.

ಧಾರವಾಡ ಹಳೆಯ ನಗರ ಸಾರಿಗೆ ಬಸ್ ನಿಲ್ದಾಣವನ್ನು ತೆರವುಗೊಳಿಸಿ ನೂತನ ಮಾದರಿ ನಗರ ಸಾರಿಗೆ ಬಸ್ ನಿಲ್ದಾಣವನ್ನು 13.11 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸುವ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ, ಗೃಹಲಕ್ಷ್ಮಿ ಯೋಜನೆಯನ್ನು ಲಿಂಗತ್ವ ಅಲ್ಪಸಂಖ್ಯಾತರಿಗೂ ನೀಡುವುದು ಹಾಗೂ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಬದಲಿಗೆ ಹಣ ನೀಡುವ ವ್ಯವಸ್ಥೆಯನ್ನೆ ಮುಂದುವರೆಸಲು ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಅವರು ತಿಳಿಸಿದರು.

110 ಮಲ ತ್ಯಾಜ್ಯ ಸಂಸ್ಕರಣಾ ಸ್ಥಾವರಗಳ ನಿರ್ಮಾಣ: 50 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆಯಿರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಎನ್‍ಜಿಟಿ ಪರಿಸರ ಪರಿಹಾರ ನಿಧಿಯಡಿ 400.24 ಕೋಟಿ ರೂ.ವೆಚ್ಚದಲ್ಲಿ ಒಟ್ಟು 110 ಮಲ ತ್ಯಾಜ್ಯ ಸಂಸ್ಕರಣಾ ಸ್ಥಾವರಗಳ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಸೆಪ್ಟಿಕ್ ಟ್ಯಾಂಕ್‍ಗಳಿಂದ ಎಫ್‍ಎಸ್‍ಟಿಪಿ ಘಟಕಗಳಿಗೆ ಮಲದ ಕೆಸರನ್ನು ಸಾಗಿಸಲು ಕೆಯುಐಡಿಎಫ್‍ಸಿ ವತಿಯಿಂದ ಎಸ್‍ಬಿಎಂ ನಿಧಿ ಅಡಿಯಲ್ಲಿ 40.25 ಕೋಟಿ ರೂ.ವೆಚ್ಚದಲ್ಲಿ 161 ಸೆಸ್‍ಪೂಲ್ ವಾಹನಗಳನ್ನು ಖರೀದಿಸಲು ಅನುಮೋದಿಸಲಾಗಿದೆ ಎಂದು ಅವರು ಹೇಳಿದರು.

‘ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನದ ದಿನಾಂಕವನ್ನು ನಿರ್ಧರಿಸಲು ಮುಖ್ಯಮಂತ್ರಿಗೆ ಸಚಿವ ಸಂಪುಟ ಅಧಿಕಾರ ನೀಡಿದೆ’ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News