‘ಶೇ.60ರಷ್ಟು ಕನ್ನಡಕ್ಕೆ ಆದ್ಯತೆ’ ಅಂಗಡಿಗಳ ಪರವಾನಿಗೆ ನವೀಕರಿಸುವ ವೇಳೆ ಪರಿಶೀಲಿಸಿ : ಡಾ.ಪುರುಷೋತ್ತಮ ಬಿಳಿಮಲೆ
ಬೆಂಗಳೂರು : ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆಯ ಅನುಸಾರ ರಾಜ್ಯದ ಯಾವುದೇ ಅಂಗಡಿ ಮುಂಗಟ್ಟುಗಳು ತಮ್ಮ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡಕ್ಕೆ ಆದ್ಯತೆ ನೀಡಬೇಕು. ನಿಯಮ ಪಾಲಿಸದ ವಾಣಿಜ್ಯ ಸಂಸ್ಥೆಗಳ ಪರವಾನಿಗೆ ನವೀಕರಿಸುವಾಗ ಪರಿಶೀಲಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಶುಕ್ರವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕನ್ನಡ ಅನುಷ್ಠಾ ನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನಲ್ಲಿ 19 ಸ್ಥಳಗಳಲ್ಲಿ ಕನ್ನಡೇತರರಿಗೆ ಕನ್ನಡವನ್ನು ಕಲಿಸುವ ತರಗತಿಗಳನ್ನು ನಡೆಸುತ್ತಿದ್ದು, ಇದರ ಫಲಿತಾಂಶ ಆಶಾದಾಯಕವಾಗಿದೆ. ಕನ್ನಡೇತರರು ಇರುವ ಪ್ರದೇಶಗಳಲ್ಲಿ ಕನ್ನಡ ಕಲಿಕಾ ಕೇಂದ್ರಗಳ ಸಂಖ್ಯೆಯ ಹೆಚ್ಚಳಕ್ಕೆ ಬಿಬಿಎಂಪಿ ಮುಂದಾಗಬೇಕು. ಪ್ರಾಧಿಕಾರ ಈ ಕುರಿತಂತೆ ವಿಶೇಷ ಪಠ್ಯಕ್ರಮ ಸಿದ್ಧಪಡಿಸಿದ್ದು, ಬಿಬಿಎಂಪಿ ಅದನ್ನು ಅಳವಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಬಿಬಿಎಂಪಿ ಗುರುತಿಸುವ ಕನ್ನಡ ಶಿಕ್ಷಕರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ತರಬೇತಿಯನ್ನು ನೀಡಲು ಸಿದ್ಧವಿದೆ. ಬೆಂಗಳೂರಿನ ಬಹುಭಾμÁ ಪರಿಸರವನ್ನು ಉಳಿಸಿಕೊಂಡೇ ಕನ್ನಡವನ್ನು ಮುನ್ನೆಲೆಗೆ ತರಬೇಕಾದ ಅವಶ್ಯಕತೆ ಇದೆ. ಬಿಬಿಎಂಪಿ ವ್ಯಾಪ್ತಿಯ ಸರಕಾರಿ ಶಾಲೆಗಳ ಆಸ್ತಿ ಸಂರಕ್ಷಣೆಗೆ ಕೂಡಲೇ ಪಾಲಿಕೆ ಮುಂದಾಗಬೇಕು. ಸರಕಾರಿ ಕನ್ನಡ ಶಾಲೆಗಳು ಉಳಿದಲ್ಲಿ ಮಾತ್ರ ಕನ್ನಡ ಉಳಿಯುವ ಕಾಲಘಟ್ಟದಲ್ಲಿ ನಾವಿದ್ದೇವೆ ಎಂದು ಅಭಿಪ್ರಾಯಪಟ್ಟರು.
ಗ್ರೇಟರ್ ಬೆಂಗಳೂರು ಯೋಜನೆಯಡಿಯಲ್ಲಿ ಮುಂದಿನ ದಿನಗಳಲ್ಲಿ ಹತ್ತಾರು ಪಾಲಿಕೆಗಳು ಸೃಜನೆಯಾಗುವ ಸಾಧ್ಯತೆಗಳು ದಟ್ಟವಾಗಿದ್ದು, ಅಂದು ಎದುರಾಗಬಹುದಾದ ಕನ್ನಡದ ಸವಾಲುಗಳನ್ನು ಈಗಲೇ ಪಾಲಿಕೆ ಅಂದಾಜು ಮಾಡಬೇಕಿದೆ. ಈ ಪಾಲಿಕೆಗಳಿಗೆ ಮಹಾಪೌರರ ಆಯ್ಕೆ ಸಂದರ್ಭದಲ್ಲಿ ಮೂಲ ಕನ್ನಡಿಗರಿಗೆ ಮಾತ್ರ ಅವಕಾಶವಿರುವಂತೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು ಎಂದು ಸೂಚಿಸಿದರು.
ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಲವು ಹಿರಿಯ ಅಧಿಕಾರಿಗಳು ಕನ್ನಡದಲ್ಲಿ ಟಿಪ್ಪಣಿಯನ್ನು ಮಂಡಿಸುತ್ತಿಲ್ಲವೆಂಬ ದೂರುಗಳು ಪ್ರಾಧಿಕಾರಕ್ಕೆ ಸ್ವೀಕೃತವಾಗಿದ್ದು, ಈ ಬಗ್ಗೆ ಮುಖ್ಯ ಆಯುಕ್ತರು ಕೂಡಲೇ ಅಗತ್ಯ ನಿರ್ದೇಶನ ಹೊರಡಿಸಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತರಾದ ಮುನಿಷ್ ಮೊದ್ಗಿಲ್, ಅವಿನಾಶ್ ಮೆನನ್, ಹರಿಶ್ ಕುಮಾರ್, ವಿಕಾಸ್ ಕೆ.ಎಸ್. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ.ವಿ.ಪಿ.ನಿರಂಜನಾರಾಧ್ಯ, ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಟಿ.ಎಸ್.ಫಣಿಕುಮಾರ್, ಕನ್ನಡ ಪರ ಹಿರಿಯ ಹೋರಾಟಗಾರರಾದ ಸಿದ್ದಯ್ಯ ಮತ್ತಿತರರು ಹಾಜರಿದ್ದರು.
ಕನ್ನಡ ಘಟಕ: ಬಿಬಿಎಂಪಿ ಕೇಂದ್ರ ಕಚೇರಿ ಸೇರಿದಂತೆ ಬೆಂಗಳೂರಿನ ಪ್ರತಿಯೊಂದು ವಲಯ ಕಚೇರಿಗಳಲ್ಲಿ ಕನ್ನಡ ಘಟಕವನ್ನು ತೆರೆದು ಅದಕ್ಕೆ ಒಬ್ಬ ನೋಡಲ್ ಅಧಿಕಾರಿಯನ್ನು ಮತ್ತು ಸಿಬ್ಬಂದಿಯನ್ನು ನೇಮಿಸಬೇಕು. ಈ ಘಟಕಗಳು ಪಾಲಿಕೆಯ ಕನ್ನಡ ಮತ್ತು ಸಂಸ್ಕೃತಿ ಕಾರ್ಯಕ್ರಮಗಳ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂಬ ಡಾ.ಬಿಳಿಮಲೆ ಅವರ ಒತ್ತಾಯಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತರು ಕನ್ನಡ ಘಟಕಗಳ ಸ್ಥಾಪನೆಗೆ ಸ್ಥಳದಲ್ಲಿಯೇ ಒಪ್ಪಿಗೆ ನೀಡಿದರು.