ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ನಿವಾಸದ ಮೇಲೆ ಈ.ಡಿ ದಾಳಿ; ಪರಿಶೀಲನೆ
PC : Enforcement Directorate/ಸುಬ್ಬಾರೆಡ್ಡಿ
ಬೆಂಗಳೂರು : ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ(ಫೆಮಾ) ಉಲ್ಲಂಘಿಸಿರುವ ಆರೋಪದ ಮೇಲೆ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ(ಈ.ಡಿ.)ದ ಅಧಿಕಾರಿಗಳು ಗುರುವಾರ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಎಸ್.ಎನ್.ಸುಬ್ಬಾರೆಡ್ಡಿ ಅವರ ಬಾಗೇಪಲ್ಲಿ ಕ್ಷೇತ್ರದಲ್ಲಿರುವ ಮನೆ, ಕಚೇರಿ ಹಾಗೂ ವ್ಯವಹಾರ ಹೊಂದಿರುವ ಪಾಲುದಾರರ ಮನೆಗಳು ಸೇರಿದಂತೆ ಐದು ಕಡೆಗಳಲ್ಲಿ ಈ.ಡಿ. ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ವಿದೇಶಿ ಬ್ಯಾಂಕುಗಳಲ್ಲಿ ಕೆಲವು ಠೇವಣಿ ಹೊಂದಿದ್ದಾರೆ ಎನ್ನಲಾಗಿದೆ. ವಾಹನಗಳ ಖರೀದಿಗೆ ಹಾಗೂ ಮಲೇಷ್ಯಾ, ಹಾಂಕಾಂಗ್, ಜರ್ಮನಿ ಇತರೆಡೆ ಸ್ಥಿರಾಸ್ತಿಗಳಲ್ಲಿ ಹೂಡಿಕೆ ಮಾಡಿರುವ ಆರೋಪ ಸಂಬಂಧ ದಾಖಲೆ ಪರಿಶೀಲನೆ ನಡೆದಿದೆ. ಒಟ್ಟಾರೆ ಎಸ್.ಎನ್.ಸುಬ್ಬಾರೆಡ್ಡಿ ಮತ್ತು ಅವರ ಕುಟುಂಬ ಸದಸ್ಯರು ಬಹಿರಂಗಪಡಿಸದ ವಿದೇಶಿ ಆಸ್ತಿಗಳನ್ನು ಹೊಂದಿರುವ ಆರೋಪಗಳ ಸಂಬಂಧ ಪರಿಶೀಲನೆ ನಡೆಸಲಾಗಿದೆ ಎಂದು ಈ.ಡಿ. ಮೂಲಗಳು ತಿಳಿಸಿವೆ.