ಎಸೆಸೆಲ್ಸಿಯಲ್ಲಿ ಕಡಿಮೆ ಫಲಿತಾಂಶ ಬಂದಿರುವ ಅನುದಾನಿತ ಪ್ರೌಢಶಾಲೆಗಳ ಮೇಲೆ ಕ್ರಮಕ್ಕೆ ಶಿಕ್ಷಣ ಇಲಾಖೆ ನಿರ್ಧಾರ
ಸಅಂದರ್ಭಿಕ ಚಿತ್ರ
ಬೆಂಗಳೂರು: 2024-25ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಬಂದಿರುವ ಅನುದಾನಿತ ಪ್ರೌಢಶಾಲೆಗಳ ಮೇಲೆ ಕ್ರಮ ಜರುಗಿಸಲು ಶಿಕ್ಷಣ ಇಲಾಖೆಯು ನಿರ್ಧರಿಸಿದ್ದು, ಶಿಕ್ಷಕರ ವೇತನವನ್ನು, ವಾರ್ಷಿಕ ಬಡ್ತಿಯನ್ನು ತಡೆ ಹಿಡಿಯುವಂತೆ ಇಲಾಖೆಯ ಪ್ರೌಢಶಿಕ್ಷಣ ವಿಭಾಗದ ನಿರ್ದೇಶಕರು ರಾಜ್ಯದ ಎಲ್ಲ ಜಿಲ್ಲಾ ಉಪನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಈಗಾಗಲೇ ಅನುದಾನಕ್ಕೆ ಒಳಪಟ್ಟಿರುವ ಶಾಲೆಯ ವಿಷಯವಾರು ಫಲಿತಾಂಶವನ್ನು ಪರಿಗಣಿಸಿ ಶೇ.60ಕ್ಕಿಂತ ಕಡಿಮೆ ಫಲಿತಾಂಶವನ್ನು ಪಡೆದಿರುವ ವಿಷಯ ಶಿಕ್ಷಕರನ್ನು ಗುರುತಿಸಿ ಅಂತವರ ವಾರ್ಷಿಕ ವೇತನ ಬಡ್ತಿಯನ್ನು ತಡೆಹಿಡಿಯಬೇಕು. ವಿಷಯ ಶಿಕ್ಷಕರು ನಿರಂತರವಾಗಿ ಮೂರು ವರ್ಷಗಳಲ್ಲಿ ಶೇ.60ಕ್ಕಿಂತ ಕಡಿಮೆ ಫಲಿತಾಂಶವನ್ನು ನೀಡಿದ್ದರೆ, ಅಂತಹ ವಿಷಯ ಶಿಕ್ಷಕರ ವೇತನಾನುದಾನವನ್ನು ತಡೆಹಿಡಿಯಬೇಕು ಎಂದು ತಿಳಿಸಿದ್ದಾರೆ.
ಒಂದು ಅನುದಾನಿತ ಪ್ರೌಢಶಾಲೆಯು ಸತತ ಐದು ವರ್ಷಗಳ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.50ರಷ್ಟು ಫಲಿತಾಂಶವನ್ನು ಪಡೆಯದಿದ್ದರೆ, ಆ ಶಾಲೆಗೆ ನೀಡಲಾಗುತ್ತಿರುವ ವೇತನಾನುದಾನವನ್ನು ತಡೆಹಿಡಿಯಬೇಕು. ಈ ಬಗ್ಗೆ ಕ್ಷೇತ್ರಶಿಕ್ಷಣಾಧಿಕಾರಿಗಳು ವರದಿಯನ್ನು ಸಿದ್ದಪಡಿಸಿ, ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ.
ಸರಕಾರದ ಆದೇಶವನ್ನು ರದ್ದುಪಡಿಸಲು ಶಿಕ್ಷಕ ಸಂಘ ಒತ್ತಾಯ:
ಎಸೆಸೆಲ್ಸಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಬಂದಿರುವ ಅನುದಾನಿತ ಪ್ರೌಢಶಾಲೆಗಳ ಮೇಲೆ ಕ್ರಮ ಜರುಗಿಸಲು ಸರಕಾರ ಹೊರಡಿಸಿರುವ ಅವೈಜ್ಞಾನಿಕ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ಒತ್ತಾಯಿಸಿದೆ.
ಸೋಮವಾರ ಸಂಘವು ಪ್ರಕಟನೆ ಹೊರಡಿಸಿದ್ದು, ಅನುದಾನಿತ ಪ್ರೌಢ ಶಾಲೆಗಳ ನೈಜ ಸಮಸ್ಯೆಗಳನ್ನು ಅರಿಯದೆ ಅವೈಜ್ಞಾನಿಕವಾಗಿ ಎಸೆಸೆಲ್ಸಿಯಲ್ಲಿ ಕಡಿಮೆ ಫಲಿತಾಂಶ ಮಾಡಿದ ಶಾಲೆಗಳ ಅನುದಾನ ತಡೆಹಿಡಿಯುವ ಆದೇಶ ಹೊರಡಿಸಲಾಗಿದೆ. ವಿಷಯ ಶಿಕ್ಷಕರ ವಾರ್ಷಿಕ ವೇತನ ಹಾಗೂ ಸಂಪೂರ್ಣ ವೇತನ ತಡೆಹಿಡಿಯುವ ಹಾಗೂ ವೇತನ ಹಿಂಪಡೆಯುವ ಆದೇಶ ಹೊರಡಿಸಿರುವುದು ಅತ್ಯಂತ ಅವೈಜ್ಞಾನಿಕ ಕ್ರಮವಾಗಿದೆ ಎಂದು ಖಂಡಿಸಿದೆ.
ರಾಜ್ಯದ ಎಸೆಸೆಲ್ಸಿ ಪರೀಕ್ಷಾ ಧೋರಣೆಯನ್ನು ಇತರ ರಾಜ್ಯಗಳು ಮತ್ತು ರಾಷ್ಟ್ರೀಯ ಪರೀಕ್ಷಾ ಮಂಡಳಿಗಳ(ಸಿಬಿಎಸ್‍ಇ, ಐಸಿಎಸ್‍ಇ) ಜೊತೆ ಹೋಲಿಸಿದಾಗ., ನಮ್ಮ ರಾಜ್ಯದ ಪರೀಕ್ಷೆ ಕ್ರಮ ಅನ್ಯಾಯಕಾರಿ ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ಹಾನಿಕಾರಕವಾಗಿದೆ. ಎನ್‍ಎಸ್‍ಇಆರ್‍ಟಿ-2023 ಪಠ್ಯಕ್ರಮ ವರದಿ ಅಂಶಗಳ ಆಧಾರದ ಮೇಲೆ ರಾಜ್ಯದಲ್ಲಿ ಎಸೆಸೆಲ್ಸಿ ಪರೀಕ್ಷಾ ವ್ಯವಸ್ಥೆಯನ್ನು ಪುನರಚನೆ ಮಾಡುವ ಅವಶ್ಯಕತೆ ಇದೆ. ಶಿಕ್ಷಣದಲ್ಲಿ ರಾಜಕೀಯ ನೀತಿ ದೂರವಿಟ್ಟು ಪರಿಷ್ಕರಿಸಬೇಕಾಗಿದೆ ಎಂದು ತಿಳಿಸಿದೆ.
ವಿದ್ಯಾರ್ಥಿಗಳ ನ್ಯಾಯಯುತ ಭವಿಷ್ಯಕ್ಕಾಗಿ ಕೇವಲ ಶಿಕ್ಷಕರನ್ನೇ ಗುರಿಯಾಗಿಸುವುದನ್ನು ಬಿಟ್ಟು ಶಿಕ್ಷಣದ ಆಧಾರ ಸ್ಥಂಭಗಳಾದ ಸರಕಾರ, ಆಡಳಿತ ಮಂಡಳಿ, ಪಾಲಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಜೊತೆಯಾಗಿ ತಂಡವಾಗಿ ಕಾರ್ಯನಿರ್ವಹಿಸಬೇಕು. ಇದರಿಂದ ಫಲಿತಾಂಶ ಸುಧಾರಣೆ ಸಾಧ್ಯ ಎಂದು ಸಂಘವು ಅಭಿಪ್ರಾಯಪಟ್ಟಿದೆ.
ಸರಕಾರದ ಹಂತದಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಸರಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳ ಶಿಕ್ಷಕರ ನಡುವಿನ ತಾರತಮ್ಯ ನಿವಾರಣೆ ಮಾಡಬೇಕು. ಶಿಕ್ಷಕರನ್ನು ಶೈಕ್ಷಣಿಕೇತರ ಕಾರ್ಯಗಳಿಂದ ಮುಕ್ತಿಗೊಳಿಸಬೇಕು. ಮಧ್ಯಾಹ್ನದ ಬಿಸಿ ಊಟದಂತಹ ಕಾರ್ಯಗಳನ್ನು ಸ್ವತಂತ್ರ ಸಂಸ್ಥೆಗೆ ನಿರ್ವಹಿಸಲು ನೀಡಬೇಕು ಎಂದು ಮಾಧ್ಯಮಿಕ ಶಿಕ್ಷಕ ಸಂಘ ಆಗ್ರಹಿಸಿದೆ.