×
Ad

ಉಮರ್ ಖಾಲಿದ್ ಬಿಡುಗಡೆಗೆ ಪ್ರಯತ್ನ ಮಾಡಬೇಕಿದೆ: ನೂರ್ ಶ್ರೀಧರ್

Update: 2024-09-14 23:34 IST

ಬೆಂಗಳೂರು: ‘ಸಿಎಎ ಹಾಗೂ ಎನ್‍ಆರ್‍ಸಿ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಯುವ ಹೋರಾಟಗಾರ ಉಮರ್ ಖಾಲಿದ್ ನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದಾರೆ. ಅವರನ್ನು ಶೀಘ್ರವಾಗಿ ಬಿಡುಗಡೆ ಮಾಡಲು ಎಲ್ಲರೂ ಪ್ರಯತ್ನ ಮಾಡಬೇಕು’ ಎಂದು ‘ಎದ್ದೇಳು ಕರ್ನಾಟಕ’ ಸಂಘಟನೆಯ ಸಂಚಾಲಕ ನೂರ್ ಶ್ರೀಧರ್ ಹೇಳಿದರು.

ಶನಿವಾರ ನಗರದ ಸೆಂಟ್‍ಮಾಕ್ರ್ಸ್ ರಸ್ತೆಯಲ್ಲಿರುವ ಆಶೀರ್ವಾದ ಸಭಾಂಗಣದಲ್ಲಿ ಉಮರ್ ಖಾಲಿದ್ ಬಿಡುಗಡೆಗೆ ಒತ್ತಡ ಹೇರುವ ಸಂಬಂಧ ಎದ್ದೇಳು ಕರ್ನಾಟಕ, ವಿಕಲ್ಪ ಬೆಂಗಳೂರು, ಮಾರಾ ಹಾಗೂ ಪೆಡೆಸ್ಟ್ರೀಯನ್ ಪಿಕ್ಚರ್ಸ್ ವತಿಯಿಂದ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉಮರ್ ಖಾಲಿದ್ ನನ್ನ ಸ್ನೇಹಿತ. ಜಾತ್ಯತೀತ ಶಕ್ತಿಗಳಿದ್ದರೂ ಉಮರ್ ಖಾಲಿದ್ ಪರವಾಗಿ ಏನು ಮಾಡಲು ಆಗಿಲ್ಲ ಎಂಬ ಬೇಸರವಿದೆ. ಇಂದು ಪ್ರದರ್ಶನ ಮಾಡಿದ ಚಿತ್ರದಲ್ಲಿ ಉಮರ್ ಖಾಲಿದ್ ಹೇಳಿಕೆಗಳು ನಮಲ್ಲಿ ಚೈತನ್ಯ ತುಂಬಿವೆ. ಅವರ ಬಿಡುಗಡೆಗೆ ನಾವು ಶೀಘ್ರವೇ ಸಭೆ ಕರೆದು ಚರ್ಚೆ ಮಾಡುತ್ತೇವೆ ಎಂದು ನೂರ್ ಶ್ರೀಧರ್ ಹೇಳಿದರು.

ಉಮರ್ ಖಾಲಿದ್ ನಲ್ಲಿದ್ದ ದೂರದೃಷ್ಟಿ ಅದ್ಭುತವಾದದ್ದು. ಸಿಎಎ ಕುರಿತು ಕೇಂದ್ರ ಸರಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವಾಗಲೇ, ಒಂದು ವೇಳೆ ಈ ಸಿಎಎ ಜಾರಿಗೆ ಬಂದರೆ ಮುಸ್ಲಿಮರು ಇಡೀ ದೇಶದಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ನನಗೆ ಆಗಲೇ ತಿಳಿಸಿದ್ದ ಎಂದು ಅವರು ಹೇಳಿದರು.

ಆತನ ಮುಂದಾಲೋಚನೆಯಂತೆಯೇ ದೇಶದ ಮುಸ್ಲಿಮರು ಸಿಎಎ ವಿರೋಧಿ ಹೋರಾಟವನ್ನು ಅತ್ಯಂತ ಸಂಘಟನಾತ್ಮಕವಾಗಿ, ದೇಶಪ್ರೇಮ, ಸಂವಿಧಾನ, ರಾಷ್ಟಧ್ಜಜವನ್ನು ಮುಂದಿಟ್ಟುಕೊಂಡು ನಡೆಸಿದ್ದು ಅದ್ಭುತವಾದದ್ದು ಎಂದು ಅವರು ಹೇಳಿದರು.

ಉಮರ್ ಖಾಲಿದ್ ಬಿಡುಗಡೆಗೆ ತೊಡಕಾಗಿರುವುದು ಆತ ದೇಶಪ್ರೇಮಿ ಹಾಗೂ ಮುಸ್ಲಿಮ್ ಎಂಬ ಕಾರಣಕ್ಕಾಗಿಯೇ. ನಾಲ್ಕು ವರ್ಷದಿಂದ ಆತ ಬಂಧನದಲ್ಲಿದ್ದಾನೆ. ಆತನ ಬಿಡುಗಡೆಗೆ ನಾವು ಪ್ರಯತ್ನ ಮಾಡಬೇಕಿದೆ ಎಂದು ಅವರು ಹೇಳಿದರು.

ಸಂವಾದದಲ್ಲಿ ಉಮರ್ ಖಾಲಿದ್ ಬಿಡುಗಡೆಗೆ ರಾಷ್ಟ್ರಪತಿಗೆ ಪತ್ರ ಬರೆಯುವ ಚಳವಳಿ ಮಾಡುವುದು ಹಾಗೂ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ಪಕ್ಷಗಳು ಸಂಸತ್ತಿನಲ್ಲಿ ಭೀಮಾ ಕೋರೆಗಾಂವ್ ಹೋರಾಟಗಾರರು ಹಾಗೂ ಉಮರ್ ಖಾಲಿದ್ ಬಿಡುಗಡೆಗೆ ಧ್ವನಿ ಎತ್ತುವಂತೆ ಒತ್ತಡ ಹೇರಬೇಕು ಎಂಬ ಸಲಹೆಗಳು ವ್ಯಕ್ತವಾದವು.

ಮಾರಾ ಸಂಘಟನೆಯ ರಾಮ್ ಭಟ್ ಸಂವಾದ ನಡೆಸಿಕೊಟ್ಟರು. ವಿವಿಧ ಸಂಘಟನೆಗಳ ಪ್ರಮುಖರು, ಹೋರಾಟಗಾರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News