×
Ad

ರಾಜ್ಯದ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರ ಸ್ಥಾಪನೆ : ದಿನೇಶ್ ಗುಂಡೂರಾವ್

Update: 2025-05-22 20:46 IST

ಬೆಂಗಳೂರು : ರಾಜ್ಯದ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ನಾಳೆ(ಮೇ 23) ಮೈಸೂರಿನಲ್ಲಿ ಕೀಮೋಥೆರಪಿ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ರೋಗಿಗಳ ಅನುಕೂಲಕ್ಕಾಗಿ ಸಮೀಪದ ಜಿಲ್ಲಾ ಆಸ್ಪತ್ರೆಗಳಲ್ಲಿ ಸುಲಭವಾಗಿ, ಗುಣಮಟ್ಟದ ಕೀಮೋಥೆರಪಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದರು.

ಕೇಂದ್ರ ಸರಕಾರ ಡೇ ಕೇರ್ ಕೀಮೋಥೆರಪಿ ಕೇಂದ್ರಗಳನ್ನು ಸ್ಥಾಪಿಸಲು ಪ್ರಸಕ್ತ ಬಜೆಟ್‍ನಲ್ಲಿ ಘೋಷಣೆ ಮಾಡಿದೆ. ಆದರೆ ನಮ್ಮ ಸರಕಾರ ಹಿಂದಿನ ಬಜೆಟ್‍ನಲ್ಲಿಯೇ ಕೇಂದ್ರಗಳನ್ನು ತೆರೆಯುವುದಾಗಿ ಹೇಳಿತ್ತು. ಹೀಗಾಗಿ 16 ಆಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಹಾಗೆಯೇ ದಕ್ಷಿಣ ಕನ್ನಡ ಜಿಲ್ಲೆಯ ಎರಡು ತಾಲ್ಲೂಕುಗಳಲ್ಲಿ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ಪ್ರಸ್ತಾವ ಇದೆ ಎಂದು ಅವರು ತಿಳಿಸಿದರು.

ಡೇ ಕೇರ್ ಕೀಮೋಥೆರಪಿ ಕೇಂದ್ರಗಳಲ್ಲಿ ಯಾವುದೇ ರೀತಿಯ ಕ್ಯಾನ್ಸರ್ ತಪಾಸಣೆಯನ್ನು ಮಾಡುವುದಿಲ್ಲ. ಆದರೆ ನೋಂದಾಯಿತ ತೃತೀಯ ಹಂತದ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಪ್ರಾರಂಭಿಕ ಚಿಕಿತ್ಸೆ ಪಡೆದ ನಂತರ ಮುಂದುವರೆದ ಕೀಮೋಥೆರಪಿ ಚಿಕಿತ್ಸೆಗಳನ್ನು ಈ ಕೇಂದ್ರಗಳಲ್ಲಿ ನೀಡಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ತೃತೀಯ ಹಂತದ ಆಸ್ಪತ್ರೆಗಳು ಮತ್ತು ಸರಕಾರದ ನಡುವಿನ ಒಪ್ಪಂದದ ಮೂಲಕ ಹಬ್-ಅಂಡ್-ಸ್ಪೋಕ್ ಮಾದರಿಯಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ತೃತೀಯ ಹಂತದ ಕ್ಯಾನ್ಸರ್ ಆಸ್ಪತ್ರೆಗಳು ಹಬ್ ಆಸ್ಪತ್ರೆಗಳಾಗಿ ಕಾರ್ಯ ನಿರ್ವಹಿಸಲಿವೆ. ಆಸ್ಪತ್ರೆಗಳಲ್ಲಿಯೇ ಸ್ಥಾಪಿಸಿದ ಡೇ ಕೇರ್ ಕೀಮೋಥೆರಪಿ ಕೇಂದ್ರಗಳು ಸ್ಪೋಕ್ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ. ಒಂದು ವರ್ಷದ ಅವಧಿಯ ಒಪ್ಪಂದ, ಮುಂದಿನ ವರ್ಷಗಳಿಗೆ ವಿಸ್ತರಣೆ ಆಗಲಿವೆ ಎಂದು ಅವರು ತಿಳಿಸಿದರು.

ತೃತೀಯ ಹಂತದ ಕ್ಯಾನ್ಸರ್ ಆಸ್ಪತ್ರೆಗಳು ಕ್ಯಾನ್ಸರ್ ತಪಾಸಣೆ ಮತ್ತು ಮೇಲ್ವಿಚಾರಣೆ ಮಾಡಲಿವೆ. ಹಾಗೆಯೇ ಔಷಧಿಗಳನ್ನು ತಯಾರಿಸಿ, ಸ್ಪೋಕ್ ಕೇಂದ್ರಗಳಿಗೆ ರವಾನಿಸಲಿವೆ. ಡೇ ಕೇರ್ ಕೀಮೋಥೆರಪಿ ಕೇಂದ್ರಗಳಲ್ಲಿ ಹಬ್‍ನೊಂದಿಗೆ ಸಮನ್ವಯ ಸಾಧಿಸಿ, ರೋಗಿಯ ಆರೈಕೆ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.

ಡೇ ಕೇರ್ ಕೀಮೋಥೆರಪಿ ಕೇಂದ್ರಗಳಲ್ಲಿ ಒಬ್ಬ ವೈದ್ಯಕೀಯ ಆಂಕೋಲಾಜಿಸ್ಟ್, ಕೀಮೋಥೆರಪಿ ಚಿಕಿತ್ಸೆಯಲ್ಲಿ ತರಬೇತಿ ಪಡೆದ ಇಬ್ಬರು ದಾದಿಯರು ಸೇರಿದಂತೆ ಮತ್ತಿತರರು ಇರುತ್ತಾರೆ. ಪ್ರತಿ ಆಸ್ಪತ್ರೆಯಲ್ಲಿ 10 ಬೆಡ್ ಮೀಸಲಿಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಕೋವಿಡ್ ಪ್ರಕರಣಗಳ ಬಗ್ಗೆ ಯಾರೂ ಗಾಬರಿ ಪಡುವ ಅಗತ್ಯವಿಲ್ಲ. 16 ಕೋವಿಡ್ ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ. ಹೀಗಾಗಿ ಮಾನಿಟರ್ ಮಾಡಿ ಎಂದು ಸೂಚನೆ ನೀಡಲಾಗಿದೆ. ಆದರೆ ಕೇಂದ್ರದಿಂದ ಯಾವುದೇ ಮಾರ್ಗಸೂಚಿ ಬಂದಿಲ್ಲ ಎಂದು ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಪ್ರತಿ ವರ್ಷ 70 ಸಾವಿರ ಕ್ಯಾನ್ಸರ್ ಖಾಯಿಲೆ ಕಾಣಿಸಿಕೊಳ್ಳುತ್ತಿದೆ. ಬಡವರು ಕಿದ್ವಾಯಿಯಂತಹ ಸಂಸ್ಥೆಗಳಿಗೆ ಬರಬೇಕು. ಕೀಮೋಥೆರಪಿಗಾಗಿ ಶೇ.60 ರೋಗಿಗಳು 100 ಕಿ.ಮೀ. ಪ್ರಯಾಣ ಮಾಡಬೇಕು. ಹಾಗಾಗಿ ಜಿಲ್ಲೆಗಳಲ್ಲಿನ ಜನರಿಗೆ ಅನುಕೂಲ ಆಗಲಿ ಎಂದು ಜಿಲ್ಲಾ ಆಸ್ಪತ್ರೆಗಳಲ್ಲಿ ಕೀಮೋಥೆರಪಿ ಕೇಂದ್ರಗಳನ್ನು ಆರಂಭಿಸಲಾಗಿದೆ.

-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

ಜಿಲ್ಲೆ- ಕೀಮೋಥೆರಪಿ ಕೇಂದ್ರ

1.ವಿಜಯಪುರ - ಇನ್-ಹೌಸ್

2.ಉಡುಪಿ - ಇನ್-ಹೌಸ್

3.ಬಳ್ಳಾರಿ - ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

4.ಧಾರವಾಡ - ಹೆಚ್‍ಸಿಜಿ ಹಾಸ್ಪಿಟಲ್

5.ಚಿತ್ರದುರ್ಗ - ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

6.ವಿಜಯನಗರ - ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

7.ಹಾವೇರಿ - ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

8.ದಾವಣಗೆರೆ - ಹುಬ್ಬಳ್ಳಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

9.ಬೆಂಗಳೂರು ಗ್ರಾಮಾಂತರ - ಸಂಜೀವಿನಿ ಆಸ್ಪತ್ರೆ,

10.ರಾಮನಗರ - ಸಂಜೀವಿನಿ ಆಸ್ಪತ್ರೆ,

11. ಬೆಂಗಳೂರು ನಗರ - ಸಂಜೀವಿನಿ ಆಸ್ಪತ್ರೆ, ಸಿ.ವಿ. ರಾಮನ್ ಆಸ್ಪತ್ರೆ

12.ದಕ್ಷಿಣ ಕನ್ನಡ – ಮಂಗಳೂರಿನ ಕೆಎಂಸಿ

13.ಮೈಸೂರು - ಕಿದ್ವಾಯಿ ಆಸ್ಪತ್ರೆ,

14.ತುಮಕೂರು - ಸಿದ್ಧಾರ್ಥ ಮೆಡಿಕಲ್ ಕಾಲೇಜು

15.ಕೋಲಾರ - ಆರ್.ಎಲ್.ಜಾಲಪ್ಪ ಮೆಡಿಕಲ್ ಕಾಲೇಜು ಆಸ್ಪತ್ರೆ

16.ಬಾಗಲಕೋಟೆ - ನಿಜಲಿಂಗಪ್ಪ ಮೆಡಿಕಲ್ ಕಾಲೇಜು ಆಸ್ಪತ್ರೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News