ವಿವಾಹೇತರ ಸಂಬಂಧ: ಇಬ್ಬರ ಹತ್ಯೆ ಮಾಡಿದ್ದ ಆರೋಪಿಯ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್
ಬೆಂಗಳೂರು, ಡಿ.6: ತನ್ನ ಪತ್ನಿಯೊಂದಿಗೆ ವಿವಾಹೇತರ ಸಂಬಂಧವನ್ನು ಇಟ್ಟುಕೊಂಡಿದ್ದ ವ್ಯಕ್ತಿ, ಮತ್ತವರ ತಂದೆಯನ್ನು ಹತ್ಯೆ ಮಾಡಿದ್ದ ಪ್ರಕರಣದ ತಪ್ಪಿತಸ್ಥನಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ರದ್ದುಪಡಿಸಬೇಕು ಎಂದು ಕೋರಿ ಹರೀಶ್ (ಹೆಸರು ಬದಲಿಸಲಾಗಿದೆ) ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿದೆ.
ಘಟನೆಗೆ ಸಂಬಂಧಿಸಿದಂತೆ ಮೇಲ್ಮನವಿದಾರರು ಭಾಗಿಯಾಗಿರುವುದು ಸ್ಪಷ್ಟವಾಗಿದೆ. ಅಲ್ಲದೆ, ಘಟನೆಯಲ್ಲಿ ಹಲ್ಲೆಗೊಳಗಾಗಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಬದಲಾಗಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆದ ಕಾರಣ ಘಟನೆಗೂ ಅರ್ಜಿದಾರರಿಗೂ ಸಂಬಂಧವಿರುವುದು ಸಾಬೀತಾಗಿದೆ ಎಂದು ಪೀಠ ತಿಳಿಸಿದೆ. ಇದೇ ವೇಳೆ ಈ ಘಟನೆ ಆಕಸ್ಮಿಕವಾಗಿ ನಡೆದಿದ್ದು, ಉದ್ದೇಶಪೂರ್ವಕವಲ್ಲ ಎಂಬುದಾಗಿ ವಾದಿಸಿದ್ದ ಮೇಲ್ಮನವಿದಾರರ ವಾದವನ್ನು ನ್ಯಾಯಪೀಠ ತಳ್ಳಿಹಾಕಿದೆ.
ಪ್ರಕರಣವೇನು?: ಅರ್ಜಿದಾರರ ಮಾಲಕತ್ವದ ವಾಹನ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರವಾಹನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಗಾಯಗೊಂಡು ಮೃತಪಟ್ಟಿದ್ದರು(ಒಬ್ಬರು ಆರೋಪಿಯ ಪತ್ನಿಯೊಂದಿಗೆ ವಿವಾಹಯೇತರ ಸಂಬಂಧ ಹೊಂದಿದ್ದ ಆರೋಪವಿತ್ತು). ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು ಅರ್ಜಿದಾರರ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.