×
Ad

ಮೀನುಗಾರರಿಗೆ ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು: ಸಚಿವ ಮಂಕಾಳ ವೈದ್ಯ

Update: 2025-11-22 18:58 IST

ಬೆಂಗಳೂರು: ಪ್ರತಿಯೊಬ್ಬ ಮೀನುಗಾರ ಕುಟುಂಬಕ್ಕೂ ಶಾಶ್ವತ ಸೂರಿರಬೇಕು ಉದ್ದೇಶದಿಂದ ಮತ್ಯಾಶ್ರಯ ಯೋಜನೆ ಮೂಲಕ ವಸತಿ ರಹಿತ 10 ಸಾವಿರ ಮೀನುಗಾರರಿಗೆ ಮನೆ ನಿರ್ಮಾಣಕ್ಕಾಗಿ ಆರ್ಥಿಕ ನೆರವನ್ನು ನೀಡಲಾಗುವುದು ಎಂದು ಮೀನುಗಾರಿಕೆ ಮತ್ತು ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ.

ಶನಿವಾರ ನಗರದ ಹೆಬ್ಬಾಳ ರಸ್ತೆಯಲ್ಲಿರುವ ಪಶುವೈದ್ಯಕೀಯ ಮಹಾವಿದ್ಯಾಲಯ ಆವರಣದಲ್ಲಿ ಮೀನುಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವ ಮೀನುಗಾರಿಕೆ ದಿನಾಚರಣೆ-2025 ಹಾಗೂ ಮತ್ಸ್ಯ ಮೇಳ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ನಮ್ಮ ಕರಾವಳಿಯಲ್ಲಿ ಕರ್ನಾಟಕದ ಮೊಟ್ಟ ಮೊದಲ ಸಮರ್ಪಿತ ಸಮುದ್ರ ಅಂಬ್ಯುಲೆನ್ಸ್ ಅನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. 7 ಕೋಟಿ ರೂ. ವೆಚ್ಚದ ಈ ಯೋಜನೆಯು, ಸಮುದ್ರದಲ್ಲಿ ಮೀನುಗಾರರ ಜೀವ ತುರ್ತು ವೈದ್ಯಕೀಯ ನೆರವಿನಿಂದ ವಂಚಿತವಾಗಬಾರದು ಎಂಬ ನಮ್ಮ ಆಶಯ. ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರವಾಗಿ ನಮ್ಮ ಕಡಲ ತೀರದಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂದರು.

ಮೀನುಗಾರಿಕಾ ನಿಷೇಧದ ಅವಧಿಯಲ್ಲಿ ನಮ್ಮ ಮೀನುಗಾರರು ಎದುರಿಸುವ ಸಂಕಷ್ಟವನ್ನು ನಾವು ಗುರುತಿಸಿದ್ದೇವೆ. ಹಾಗಾಗಿ, 'ಮಕ್ಷ್ಯ ಆಶಾ ಕಿರಣ' ಯೋಜನೆಯಡಿಯಲ್ಲಿ ನೀಡಲಾಗುತ್ತಿದ್ದ ಪರಿಹಾರವನ್ನು 1,500 ರೂ. ಗಳಿಂದ 3,000 ರೂ.ಗಳಿಗೆ ದ್ವಿಗುಣಗೊಳಿಸಿದ್ದೇವೆ. ಇದು ನಮ್ಮ ಮೀನುಗಾರ ಕುಟುಂಬಗಳಿಗೆ ಅತಿ ಮುಖ್ಯವಾದ ಆರ್ಥಿಕ ಬೆಂಬಲವಾಗಿದೆ ಎಂದು ಹೇಳಿದರು.

ನಮ್ಮ ಸಾಂಪ್ರದಾಯಿಕ ವಲಯವನ್ನು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ. ನಾಡದೋಣಿಗಳಿಗೆ ಕೈಗಾರಿಕಾ ಸೀಮೆಎಣ್ಣೆಯನ್ನು ಪ್ರತಿ ಲೀಟರ್ ಗೆ 35 ರೂ. ರಿಯಾಯಿತಿ ದರದಲ್ಲಿ ವಿತರಿಸಲು ನಮ್ಮ ಸರಕಾರವು ತಕ್ಷಣ ಕ್ರಮ ಕೈಗೊಂಡು ಅಗತ್ಯ ಪರಿಹಾರವನ್ನು ಮುಂದುವರೆಸಿದೆ ಎಂದರು.

ಕರಾವಳಿಯಿಂದ ಮಾರುಕಟ್ಟೆಗೆ ಮೀನಿನ ಸಾಗಾಣಿಕೆಗೆ ಅನುಕೂಲವಾಗಲು, ನಮ್ಮ ಕರಾವಳಿ ಜಿಲ್ಲೆಗಳಲ್ಲಿನ ಪ್ರಮುಖ ಮೀನುಗಾರಿಕಾ ಸಂಪರ್ಕ ರಸ್ತೆಗಳ ತಕ್ಷಣದ ಅಭಿವೃದ್ಧಿಯನ್ನು ನಬಾರ್ಡ್ ನೆರವಿನೊಂದಿಗೆ ಕೈಗೊಳ್ಳಲು 30 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ ಎಂದು ಸಚಿವರು ಹೇಳಿದರು.

ಮೀನುಗಾರರ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದ್ದು, ಮೀನುಗಾರರಿಗೆ ಜೀವ ರಕ್ಷಕ ಕವಚಗಳನ್ನು ನೀಡಲಾಗುತ್ತಿದೆ. ಒಟ್ಟಾರೆಯಾಗಿ ನಮ್ಮ ಸರಕಾರ ಮೀನುಗಾರರ ಅಭಿವೃದ್ಧಿ, ಬಂದರುಗಳ ಅಭಿವೃದ್ಧಿ, ಕೆರೆ ತುಂಬಿಸುವ ಕೆಲಸ, ಮೀನುಗಾರರಿಗೆ ಪೂರಕವಾದ ಪರಿಕರಗಳನ್ನು ಒದಗಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದು ಅವರು ತಿಳಿಸಿದರು.

ಈ ಎಲ್ಲ ಉಪಕ್ರಮಗಳಿಗೆ ಆಧಾರವಾಗಿ, ನಮ್ಮ ಸರಕಾರವು ಕರ್ನಾಟಕಕ್ಕಾಗಿ ನೂತನ ಮೀನುಗಾರಿಕೆ ನೀತಿಯನ್ನು ಅಂತಿಮಗೊಳಿಸುವ ಹಂತದಲ್ಲಿದೆ. ಈ ನೀತಿಯು ಪರಿಸರ ಆರೋಗ್ಯ, ಸಂಪನ್ಮೂಲಗಳ ರಕ್ಷಣೆ ಮತ್ತು ಪ್ರತಿಯೊಬ್ಬ ಮೀನುಗಾರ ಕುಟುಂಬದ ಸುಸ್ಥಿರ ಆರ್ಥಿಕ ಅಭಿವೃದ್ಧಿಗೆ ನೀಲನಕ್ಷೆಯಾಗಲಿದೆ ಎಂದು ಅವರು ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News