×
Ad

ʼನಮ್ಮ ಮೆಟ್ರೋʼದಲ್ಲಿ ಗೋಬಿ ಮಂಚೂರಿ ತಿಂದವನಿಗೆ ಬಿತ್ತು ದಂಡ !

Update: 2023-10-06 16:08 IST

ಬೆಂಗಳೂರು, ಅ.6: ಮೆಟ್ರೋ ರೈಲಿನಲ್ಲಿ ಗೋಬಿ ಮಂಚೂರಿ ಸೇವಿಸುತ್ತಿದ್ದ ಪ್ರಯಾಣಿಕನ ವಿರುದ್ಧ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಪ್ರಕರಣ ದಾಖಲಿಸಿದೆ.

ರೈಲು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 500 ರೂ. ದಂಡವನ್ನೂ ವಿಧಿಸಿದೆ. ಬಿಎಂಆರ್‌ಸಿಎಲ್ ಇಂತಹ ಕ್ರಮ ಕೈಗೊಂಡಿರುವುದು ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿರುವ ವ್ಯಕ್ತಿಯು ನಮ್ಮ ಮೆಟ್ರೋದಲ್ಲಿ ಜಯನಗರ ಮತ್ತು ಸಂಪಿಗೆ ರಸ್ತೆ ನಡುವೆ ನಿತ್ಯ ಪ್ರಯಾಣಿಸುತ್ತಾರೆ. ಪ್ರಯಾಣಿಕ ಆಹಾರ ಸೇವಿಸುತ್ತಿರುವ ವೀಡಿಯೋದಲ್ಲಿ, ಸ್ನೇಹಿತರು ಮೆಟ್ರೋ ಒಳಗೆ ತಿನ್ನದಂತೆ ಎಚ್ಚರಿಸುವ ಸಲಹೆಯನ್ನು ನಿರ್ಲಕ್ಷಿಸಿ ಆಹಾರ ಸೇವಿಸುವುದನ್ನು ನೋಡಬಹುದು.

ʼನಿಯಮಗಳ ಪ್ರಕಾರ ಮೆಟ್ರೋ ರೈಲಿನಲ್ಲಿ ಆಹಾರ ಸೇವಿಸುವಂತಿಲ್ಲ. ಆದರೆ ಈ ಪ್ರಯಾಣಿಕ ನಿಯಮ ಉಲ್ಲಂಘಿಸಿ ಆಹಾರ ಸೇವಿಸಿದ ಹಿನ್ನೆಲೆ ಜಯನಗರ ಪೊಲೀಸ್ ಠಾಣೆಗೆ ಬಿಎಂಆರ್‌ಸಿಎಲ್ ದೂರು ದಾಖಲಿಸಿ ದಂಡ ವಿಧಿಸಲಾಗಿದೆʼ ಎಂದು ನಮ್ಮ ಮೆಟ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂತಹ ತಪ್ಪು ಮರುಕಳಿಸುವುದಿಲ್ಲ ಎಂದು ಪ್ರಯಾಣಿಕ ಭರವಸೆ ನೀಡಿದ್ದಾಗಿ ಅಧಿಕಾರಿ ಹೇಳಿದರು. ಆಡಿಯೋ ಮತ್ತು ವಿಡಿಯೋ ಸಂದೇಶಗಳ ಮೂಲಕ, ಮೆಟ್ರೋ ಸೇವೆಗಳನ್ನು ಬಳಸುವಾಗ ಅನುಸರಿಸಬೇಕಾದ ಶಿಷ್ಟಾಚಾರಗಳ ಬಗ್ಗೆ ನಾವು ಜಾಗೃತಿ ಮೂಡಿಸುತ್ತಿದ್ದೇವೆ. ನಿಯಮಗಳನ್ನು ಉಲ್ಲಂಘಿಸಬೇಡಿ ಮತ್ತು ತೊಂದರೆಯನ್ನು ಆಹ್ವಾನಿಸಬೇಡಿ ಎಂದು ನಾವು ಪ್ರಯಾಣಿಕರಲ್ಲಿ ಮನವಿ ಮಾಡುತ್ತೇವೆ ಎಂದರು.

ಮೆಟ್ರೋ ನಿಲ್ದಾಣಕ್ಕೆ ನುಸುಳಿ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಿದ್ದಕ್ಕಾಗಿ ಸೆಪ್ಟೆಂಬರ್ ಕೊನೆಯ ವಾರದಲ್ಲಿ ವಿದೇಶಿ ಯೂಟ್ಯೂಬರ್ ಫಿಡಿಯಾಸ್ ಪನಯೋಟೌ ವಿರುದ್ಧ ಬಿಎಂಆರ್‌ಸಿಎಲ್ ಪ್ರಕರಣ ದಾಖಲಿಸಿತ್ತು.

`ಪ್ರೊಫೆಷನಲ್ ಮಿಸ್ಟೇಕ್ ಮೇಕರ್’ ಎಂಬ ಯೂಟ್ಯೂಬರ್‌ನ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಬಿಎಂಆರ್‌ಸಿಎಲ್ ಕೆ.ಆರ್.ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News