×
Ad

ಸೌಜನ್ಯ ಪ್ರಕರಣದ ಬಗ್ಗೆ ವೀಡಿಯೋ ಮಾಡಿದ್ದ ಯೂಟ್ಯೂಬರ್ ಸಮೀರ್ ವಿರುದ್ಧ ಎಫ್‌ಐಆರ್‌

Update: 2025-03-06 16:57 IST

 ಸಮೀರ್ ಎಂಡಿ

ಬಳ್ಳಾರಿ : ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಹಾಗೂ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ವೀಡಿಯೋ ಮಾಡಿದ್ದ ಯೂಟ್ಯೂಬರ್ ಸಮೀರ್ ಎಂಡಿ ಅವರ ವಿರುದ್ಧ ಬಳ್ಳಾರಿ ಜಿಲ್ಲೆಯ ಕೌಲ್‌ಬಝಾರ್ ಠಾಣೆಯ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ಮೇಲೆ ಧಾರ್ಮಿಕ ಭಾವನೆ ಹೊಂದಿರುವ ಸಾರ್ವಜನಿಕರ ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ರೀತಿ ವೀಡಿಯೋ ಮಾಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಬುಧವಾರ ರಾತ್ರಿ ಸಮೀರ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು, ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಲಂ -299 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸಮೀರ್ ಅವರು ಧರ್ಮಸ್ಥಳದ ಸೌಜನ್ಯ ಪ್ರಕರಣದ ಬಗ್ಗೆ ಇತ್ತೀಚೆಗೆ ಮಾಡಿದ್ದ ವೀಡಿಯೋವೊಂದು ವ್ಯಾಪಕ ಗಮನ ಸೆಳೆದಿದ್ದು, ಈ ವೀಡಿಯೋ ಮತ್ತೆ ಸೌಜನ್ಯ ಪ್ರಕರಣವನ್ನು ಮುನ್ನಲೆಗೆ ತಂದಿತ್ತು.

ನಿನ್ನೆ ತಡರಾತ್ರಿ ನೋಟಿಸ್‌ ನೀಡಿದ್ದ ಪೊಲೀಸರು :

ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಹಾಗೂ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಯೂಟ್ಯೂಬರ್ "ದೂತ ಸಮೀರ್" ಮಾಡಿರುವ ವೀಡಿಯೋ ಸಂಚಲನ ಸೃಷ್ಟಿಸಿದ್ದ ಬೆನ್ನಲ್ಲೇ ಸಮೀರ್‌ ಎಂಡಿ ಅವರಿಗೆ ಪೊಲೀಸ್‌ ಇಲಾಖೆ ನೋಟಿಸ್‌ ನೀಡಿತ್ತು.

ಪೊಲೀಸರು ತಮ್ಮ ನಿವಾಸಕ್ಕೆ ಆಗಮಿಸಿ ಬಂಧನಕ್ಕೆ ಮುಂದಾಗಿದ್ದರು. ಆದರೆ ವಿಚಾರಣೆಗೆ ಸಹಕರಿಸುವುದಾಗಿ ಭರವಸೆ ನೀಡಿದ ಬಳಿಕ ನೋಟಿಸ್ ನೀಡಿ ಹಿಂದಿರುಗಿದ್ದಾರೆ ಎಂದು ಯೂಟ್ಯೂಬ್‌ ಲೈವ್‌ನಲ್ಲಿ ಸಮೀರ್‌ ಎಂಡಿ ಹೇಳಿದ್ದರು.

ತಡರಾತ್ರಿ 10.45 ಗಂಟೆಗೆ ಪೊಲೀಸ್‌ ನೋಟಿಸ್‌ ಬಂದಿದೆ. ಆದರೆ ಇದರ ಬಗ್ಗೆ ನನಗೆ ಯಾವುದೇ ಭಯ ಇಲ್ಲ. ಯಾಕೆಂದರೆ ನಾನು ಮಾಡಿದಂತಹ ಸೌಜನ್ಯ ಪ್ರಕರಣದ ವೀಡಿಯೋ ಸಂಬಂಧ ಎಲ್ಲ ಆಧಾರಗಳನ್ನು ಇಟ್ಟುಕೊಂಡು ಮಾತನಾಡಿದ್ದೇನೆ. ಈ ವೀಡಿಯೋಗೆ ಒಂದು ಮಿಲಿಯನ್ ವ್ಯೂವ್ಸ್‌ ಬರುತ್ತಿದ್ದಂತಯೇ ಸಾಮಾಜಿಕ ಮಾಧ್ಯಮದಲ್ಲಿ ನನ್ನ ವೈಯಕ್ತಿಕ ಮಾಹಿತಿ ಮತ್ತು ನನ್ನ ವಿಳಾಸ ಲೀಕ್‌ ಆಯಿತು. ನಂತರ ನನಗೆ ಹಲವಾರು ಜೀವ ಬೆದರಿಕೆ ಕರೆಗಳ ಬರಲು ಪ್ರಾರಂಭವಾದವು. ಪೊಲೀಸರ ಬಳಿ ಹೋದರೆ ರಕ್ಷಣೆ ಸಿಗುತ್ತೆ ಎಂಬ ನಂಬಿಕೆಯೂ ನನಗಿರಲಿಲ್ಲ. ಬಳಿಕ ನಾನು ಕೂಡಲೇ ಸೌಜನ್ಯ ಪ್ರಕರಣದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ತಂಡದ ಸದಸ್ಯರನ್ನು ಸಂಪರ್ಕಿಸಿದೆ. ಅವರು ನನಗೆ ದೈರ್ಯ ನೀಡಿ ವಕೀಲರ ಸಹಾಯವನ್ನು ನೀಡಿದ್ದಾರೆ ಎಂದು ಸಮೀರ್ ವೀಡಿಯೊದಲ್ಲಿ ತಿಳಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News