ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ಪಾಲಿಕೆ ರಚನೆ, ಶೀಘ್ರವೇ ಚುನಾವಣೆ : ಡಿಸಿಎಂ ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್
ಬೆಂಗಳೂರು:“ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ಪಾಲಿಕೆ ರಚನೆ ಮಾಡಿ, ಶೀಘ್ರ ಚುನಾವಣೆ ನಡೆಸುತ್ತೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.
ಕೆಪಿಸಿಸಿ ಕಚೇರಿ ಭಾರತ್ ಜೋಡೋ ಭವನದಲ್ಲಿ ಮಂಗಳವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಾಜ್ಯ, ಜಿಲ್ಲೆ, ತಾಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.
“ಜಿಬಿಎ ರಚನೆ ಮಾಡಲಾಗಿದೆ, ಈ ಮೂಲಕ ಐದು ಪಾಲಿಕೆಗಳನ್ನು ನಾವು ಮಾಡಿಯೇ ತೀರುತ್ತೇವೆ. ಈ ಕುರಿತು ಶಾಸಕ ರಿಜ್ವಾನ್ ನೇತೃತ್ವದಲ್ಲಿ ಸಮಿತಿ ಮಾಡಲಾಗಿದೆ. ಕೆಲವರು ಸಾರ್ವಜನಿಕವಾಗಿ ವಿರೋಧ ಮಾಡಬಹುದು ಆದರೆ ಆಡಳಿತ ದೃಷ್ಟಿಯಿಂದ ಇದನ್ನು ಮಾಡಲೇಬೇಕಾಗಿದೆ. ಪಾಲಿಕೆಗಳು ರಚನೆಯಾದರೆ ನಮ್ಮ ಕಾರ್ಯಕರ್ತರಿಗೆ ಹೆಚ್ಚಿನ ಸ್ಥಾನ ಮಾನ ನೀಡಲೇಬೇಕು ಎಂದು ನಾವು ತೀರ್ಮಾನಿಸಿದ್ದೇವೆ. ಇದಕ್ಕೆ ಅಡಿಪಾಯ ತಯಾರು ಮಾಡಬೇಕಿದೆ. ಏಕೆಂದರೆ ಡಿ.ಕೆ.ಶಿವಕುಮಾರ್ ಒಬ್ಬನೇ ಸರ್ಕಾರ ತರಲು ಆಗುವುದಿಲ್ಲ. ಕಾರ್ಯಕರ್ತರೇ ಇಲ್ಲಿ ಜೀವಾಳ. ನಾವು ವಿಧಾನಸೌಧದಲ್ಲಿ ತೀರ್ಮಾನ ಮಾಡಬಹುದು, ಆದರೆ ಸರ್ಕಾರದ ರಾಯಭಾರಿಗಳು ನೀವು. ನಮ್ಮ ಭವಿಷ್ಯ, ಬೆಂಗಳೂರು ಭವಿಷ್ಯ ನಿಮ್ಮ ಕೈಯಲ್ಲಿದೆ” ಎಂದರು.
ಜನರ ಕಲ್ಯಾಣಕ್ಕಾಗಿ ಶೇ.25 ಹಣ ವಿನಿಯೋಗ :
“ನಮ್ಮ ಸರ್ಕಾರ ಸಮಾಜ ಹಾಗೂ ಬಡವರ ಕಲ್ಯಾಣಕ್ಕಾಗಿ 1 ಲಕ್ಷ ಕೋಟಿ ರೂಪಾಯಿ ಹಣ ನೀಡಿದೆ. 50 ಸಾವಿರ ಕೋಟಿ ಗ್ಯಾರಂಟಿಗಳಿಗೆ ವೆಚ್ಚವಾದರೆ, 19 ಸಾವಿರ ಕೋಟಿ ಹಣವನ್ನು ರೈತರ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್, ಸುಮಾರು 11 ಸಾವಿರ ಕೋಟಿಯನ್ನು ಪಿಂಚಣಿಗಳಿಗೆ ವೆಚ್ಚ ಮಾಡಲಾಗುತ್ತಿದೆ. ರಾಜ್ಯ ಬಜೆಟ್ಟಿನ ಶೇ.25 ಹಣವನ್ನು ಜನರಿಗೆ ನೀಡುತ್ತಿದ್ದೇವೆ. ಈ ಉಪಕಾರ ಸ್ಮರಣೆಯನ್ನು ಜನರಿಗೆ ಮನದಟ್ಟು ಮಾಡಬೇಕಿರುವುದು ನಿಮ್ಮ ಕರ್ತವ್ಯ” ಎಂದರು.
“ಈ ದೇಶದ ಇತಿಹಾಸದಲ್ಲಿ ಕಾಂಗ್ರೆಸ್ ನೀಡಿರುವ ಹಲವಾರು ಕಾರ್ಯಕ್ರಮಗಳನ್ನು ಯಾರೂ ಸಹ ನಿಲ್ಲಸಲು ಸಾಧ್ಯವಿಲ್ಲ. ಉಳುವವನೆ ಭೂಮಿಯ ಒಡೆಯ, ಅಂಗನವಾಡಿ, ಆಶಾ, ನರೇಗಾ ಹೀಗೆ ನೂರಾರು ಕಾರ್ಯಕ್ರಮಗಳು ಕಾಂಗ್ರೆಸ್ ಜನರಿಗೆ ನೀಡಿರುವ ಶಕ್ತಿ. ಅರಣ್ಯ ಭೂಮಿ ಹಕ್ಕು, ಆಹಾರ ಭದ್ರತಾ ಕಾಯ್ದೆಗಳನ್ನು ಬಿಜೆಪಿಯವರು ಬದಲಾವಣೆ ಮಾಡಲು ಸಾಧ್ಯವಾಯಿತೇ? ರೈತರ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ನೀಡಿದ್ದು ಬಂಗಾರಪ್ಪ ಅವರು. ನಾವು ಯಾವುದೇ ರಾಜಕೀಯ ದೃಷ್ಟಿ ಇಟ್ಟುಕೊಂಡು ನಾವು ಕೆಲಸ ಮಾಡುತ್ತಿಲ್ಲ. ಜನರ ಅಭಿವೃದ್ದಿಗಾಗಿ ಕೆಲಸ ಮಾಡುತ್ತಿದ್ದೇವೆ. ಬ್ಯಾಂಕ್ ಗಳ ರಾಷ್ಟ್ರೀಕರಣದಿಂದ ಬ್ಯಾಂಕ್ ಗಳೇ ಮನೆ ಬಾಗಿಲಿಗೆ ಬಂದಿವೆ. ಬಿಸಿಯೂಟ, ಅನ್ನಭಾಗ್ಯ ಇದೆಲ್ಲವೂ ಕ್ರಾಂತಿಕಾರಕ ಯೋಜನೆಗಳು. ಹಟ್ಟಿ, ತಾಂಡಾಗಳಲ್ಲಿ ವಾಸವಿರುವ ಜನರು ಯಾವುದೇ ಭೂ ದಾಖಲೆಗಳನ್ನು ಹೊಂದಿರಲಿಲ್ಲ. ಅವರಿಗೆಲ್ಲ ಉಚಿತವಾಗಿ ಭೂ ದಾಖಲೆಗಳನ್ನು ನೀಡಲಾಗುತ್ತಿದೆ. ಇತ್ತೀಚೆಗೆ 1,11,111 ದಾಖಲೆಗಳನ್ನು ನೀಡಲಾಯಿತು” ಎಂದರು.
ವಾರ್ಡ್, ಪಂಚಾಯ್ತಿ ಮಟ್ಟದಲ್ಲಿ ಗ್ಯಾರಂಟಿ ಸಮಾವೇಶ :
“ನೀವುಗಳು ಕೂಡ ಈ ಕೆಲಸ ಮಾಡಬೇಕು. ಪ್ರತಿ ವಾರ್ಡ್, ಪಂಚಾಯ್ತಿಯಲ್ಲಿ ಗ್ಯಾರಂಟಿ ಸಮಾವೇಶ ಮಾಡುವುದರ ಬಗ್ಗೆ ಚರ್ಚಿಸುತ್ತಿದ್ದೇವೆ. ಆಮೂಲಕ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು. ಇಂದಿನ ಕಾರ್ಯಕ್ರಮಕ್ಕೆ ಪರಾಜಿತ ಅಭ್ಯರ್ಥಿಗಳು, ಬ್ಲಾಕ್ ಅಧ್ಯಕ್ಷರು, ಮಾಜಿ ಕೌನ್ಸಲರ್ ಗಳನ್ನು ಕರೆಸಿದ್ದು, ನೀವು ಈ ವಿಚಾರವಾಗಿ ಯಾವ ರೀತಿ ಕೆಲಸ ಮಾಡುತ್ತೀರಿ ಅದರ ಮೇಲೆ ನಿಮ್ಮ ಹಣೆಬರಹ ನಿರ್ಧಾರವಾಗಲಿದೆ. ಡಿ.ಕೆ. ಶಿವಕುಮಾರ್, ಹೆಚ್.ಎಂ ರೇವಣ್ಣ ಹಿಂದೆ ಗಿರಕಿ ಹೊಡೆದರೆ ಪಾಲಿಕೆ ಚುನಾವಣೆ ಟಿಕೆಟ್ ಸಿಗುತ್ತದೆ ಎಂದು ನೀವು ಭಾವಿಸಿದ್ದರೆ, ಅದನ್ನು ತಲೆಯಿಂದ ತೆಗೆದುಹಾಕಿ. ನೀವು ಸ್ಥಳೀಯ ಮಟ್ಟದಲ್ಲಿದ್ದು ಕೆಲಸ ಮಾಡಬೇಕು” ಎಂದರು.
ಶೇ.33 ಮೀಸಲಾತಿ ಜಾರಿಯಾದರೆ 75 ಜನ ಮಹಿಳಾ ಶಾಸಕಿಯರು :
“ಕಾರ್ಯಕರ್ತರು ಯಾವುದಕ್ಕೂ ಚಿಂತನೆ ಮಾಡಬೇಡಿ. ಎಲ್ಲರೂ ಶಾಸಕರು, ಪಾಲಿಕೆ ಸದಸ್ಯರು ಆಗಲು ಆಗುವುದಿಲ್ಲ. ಮನೆಯಲ್ಲಿ ಬೈದರೂ ಕೂಡ ನಮ್ಮ ಮಹಿಳಾ ಕಾರ್ಯಕರ್ತರು ಪಕ್ಷಕ್ಕಾಗಿ ದುಡಿಯುತ್ತಾರೆ. ಅವರಿಗಾಗಿ ಏನಾದರೂ ಮಾಡಲೇಬೇಕು. ಇದಕ್ಕಾಗಿ ರಾಜಕೀಯದಲ್ಲಿ ಶೇ.33 ಮೀಸಲಾತಿ ತರಲು ನಾವು ಪ್ರಯತ್ನ ಮಾಡಿದ್ದೆವು. ಮುಂದೆ ಇದು ಜಾರಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಗೆ ಇದನ್ನು ಜಾರಿಗೆ ತರಲು ಸಿದ್ಧತೆ ನಡೆಯುತ್ತಿದೆ. ಇದು ಜಾರಿಯಾದರೆ, ನಮ್ಮ ಜೊತೆಗೆ 75 ಜನ ಮಹಿಳಾ ಶಾಸಕಿಯರು ಇರುತ್ತಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ ಶೆ.50 ಮೀಸಲಾತಿ ನೀಡಿದ್ದೇವೆ” ಎಂದರು.
“ನಾಯಕತ್ವ ಬೆಳೆಸಲು ರಾಹುಲ್ ಗಾಂಧಿ ಅವರು ನಮಗೆ ಸೂಚನೆ ನೀಡಿದ್ದಾರೆ. ಹೀಗಾಗಿ ಈಗ ನಿಂತುಹೋಗಿರುವ ಕಾಲೇಜುಗಳಲ್ಲಿ ವಿದ್ಯಾರ್ಥಿ ಮಟ್ಟದ ಚುನಾವಣೆಯನ್ನು ನಡೆಸಲು ಚರ್ಚಿಸುತ್ತಿದ್ದೇವೆ. ಪಕ್ಷದ ಸಂಘಟನೆಯಲ್ಲಿ ಶ್ರಮಿಸಿದವರಿಗೆ ಸ್ಥಾನಮಾನ ನೀಡಲು ಅಧ್ಯಕ್ಷ ಸ್ಥಾನ ನೀಡಿದ್ದೇವೆ. ನೀವು ನಿಮ್ಮ ಬೂತ್, ವಾರ್ಡ್ ಗಳಲ್ಲಿ ನೀವು ಬಲಿಷ್ಠವಾಗಿ. ನಿಮ್ಮ ಶಾಸಕರು, ಪರಾಜಿತ ಅಭ್ಯರ್ಥಿ ಮೂಲಕ ನಿಮ್ಮನ್ನು ಗುರುತಿಸಲಾಗುವುದು. ನೀವು ಬಲಿಷ್ಠವಾಗಿದ್ದಷ್ಟು ನಮ್ಮ ಅಭ್ಯರ್ಥಿಗಳು ಬಲಿಷ್ಠವಾಗಿರುತ್ತಾರೆ. ನೀವು ದುರ್ಬಲರಾದರೆ ಅವರೂ ದುರ್ಬಲರಾಗುತ್ತಾರೆ. ಕಾರ್ಯಕರ್ತರು ಶಕ್ತಿಶಾಲಿಯಾಗದಿದ್ದರೆ, ಪಕ್ಷ ಬಲಿಷ್ಠವಾಗಲು ಹೇಗೆ ಸಾಧ್ಯ” ಎಂದರು.
ಮಂಗಳೂರು ಭಾಗದಲ್ಲಿ ಹೆಚ್ಚು ಫಲಾನುಭವಿಗಳು :
“ಮಂಗಳೂರು ಭಾಗದಲ್ಲಿ ನಮಗೆ ಹೆಚ್ಚು ಸೋಲಾಗಿದೆ. ಆದರೆ ಗ್ಯಾರಂಟಿ ಯೋಜನೆಗಳಲ್ಲಿ ಹೆಚ್ಚು ಫಲಾನುಭವಿಗಳು ಇದೇ ಭಾಗದವರಿದ್ದಾರೆ. ಹೀಗಾಗಿ ಗ್ಯಾರಂಟಿ ಟೀಕಿಸುವ ವಿರೋಧ ಪಕ್ಷದವರಿಗೆ ನಾನು ಸವಾಲು ಹಾಕಿದೆ. ಗ್ಯಾರಂಟಿ ಯೋಜನೆ ಬೇಡವಾದರೆ ಅದನ್ನು ನಿಮ್ಮವರಿಂದ ಬರೆದು ಕಳಿಸಿ ಎಂದು ಹೇಳಿದೆ. ಗ್ಯಾರಂಟಿ ಯೋಜನೆ ಫಲ ಅನುಭವಿಸಿ ಅದನ್ನೇ ಟೀಕೆ ಮಾಡಿದರೆ ಹೇಗೆ? ನನಗೆ ಯುವಕರು ಹಾಗೂ ಮಹಿಳೆಯರ ಮೇಲೆ ಹೆಚ್ಚು ನಂಬಿಕೆ. ಹೀಗಾಗಿ ನಮ್ಮ ಗ್ಯಾರಂಟಿ ಯೋಜನೆಗಳು ಈ ವರ್ಗದವರ ಮೇಲೆ ಹೆಚ್ಚು ಕೇಂದ್ರೀಕೃತವಾಗಿದೆ. ಗ್ಯಾರಂಟಿ ಸಮಿತಿಯಲ್ಲಿ ಮಹಿಳೆಯರಿಗೆ ಜವಾಬ್ದಾರಿ ನೀಡಲಾಗಿದೆ. ನಮ್ಮ ಸರ್ಕಾರದ ಕೆಲಸಗಳನ್ನು ವಿರೋಧ ಪಕ್ಷಗಳು ಟೀಕೆ ಮಾಡುತ್ತಾರೆ. ಅವರು ಏನು ಬೇಕಾದರೂ ಟೀಕೆ ಮಾಡಲಿ. ಅವರ ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ” ಎಂದರು.