ರೆಂಜಾಳ ರಾಮಕೃಷ್ಣರಾವ್ ಸೇರಿ ಐದು ಮಂದಿಗೆ ಯಕ್ಷಗಾನ ಅಕಾಡಮಿಯ ಗೌರವ ಪ್ರಶಸ್ತಿ: ಡಾ.ತಲ್ಲೂರು ಶಿವರಾಮಶೆಟ್ಟಿ
ಯಕ್ಷಗಾನ ಅಕಾಡಮಿಯ ವಿವಿಧ ಪ್ರಶಸ್ತಿ ಪ್ರಕಟ
ರೆಂಜಾಳ ರಾಮಕೃಷ್ಣ ರಾವ್, ಮುರಲಿ ಕಡೆಕಾರ್
ಬೆಂಗಳೂರು: ರೆಂಜಾಳ ರಾಮಕೃಷ್ಣರಾವ್ ಸೇರಿ 5ಮಂದಿ ಯಕ್ಷಗಾನ ಸಾಧಕರಿಗೆ ಕರ್ನಾಟಕ ಯಕ್ಷಗಾನ ಅಕಾಡಮಿಯ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಯಕ್ಷಗಾನ ಅಕಾಡಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮಶೆಟ್ಟಿ ತಿಳಿಸಿದ್ದಾರೆ.
ಬುಧವಾರ ನಗರದ ಕನ್ನಡ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಯಕ್ಷಗಾನ ಅಕಾಡಮಿಯು ಯಕ್ಷಗಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2025ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, 5 ಮಂದಿ ಸಾಧಕರಿಗೆ ವಾರ್ಷಿಕ ಗೌರವ ಪ್ರಶಸ್ತಿ, 10 ಜನಕ್ಕೆ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ, ಮೂರು ಪುಸ್ತಕ ಬಹುಮಾನ ಪ್ರಶಸ್ತಿ ಹಾಗೂ ಓರ್ವ ಸಾಧಕರಿಗೆ ದತ್ತನಿಧಿ ಪ್ರಶಸ್ತಿ ಘೋಷಿಸಿರುವುದಾಗಿ ತಿಳಿಸಿದರು.
ವಾರ್ಷಿಕ ಗೌರವ ಪ್ರಶಸ್ತಿಗೆ ರೆಂಜಾಳ ರಾಮಕೃಷ್ಣ ರಾವ್, ವಿಷ್ಣು ಆಚಾರಿ ಬೆಳಕೂರು, ಡಿ.ಮನೋಹರ್ ಕುಮಾರ್, ಮುರಲಿ ಕಡೆಕಾರ್, ರಮೇಶ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು 50 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ಮತ್ತು ಫಲಕ, ಫಲ ತಾಂಬೂಲವನ್ನು ಒಳಗೊಂಡಿದೆ ಎಂದರು.
2025ನೇ ಸಾಲಿನ ದಿ.ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ದತ್ತಿನಿಧಿ ಪ್ರಶಸ್ತಿಗೆ ದೇವದಾಸ ರಾವ್ ಕೊಡ್ಲಿ ಅವರು ಆಯ್ಕೆಯಾಗಿದ್ದು, ಈ ಪ್ರಶಸ್ತಿಯು 25 ಸಾವಿರ ರೂ. ನಗದು ಒಳಗೊಂಡಿದೆ. 2024ನೇ ಸಾಲಿನ ಪುಸ್ತಕ ಬಹುಮಾನ ಪ್ರಶಸ್ತಿಗೆ ಅಶೋಕ ಹಾಸ್ಯಗಾರ ಅವರ ಪುಸ್ತಕ ದಶರೂಪಕಗಳ ದಶಾವತಾರ, ಕೆರೆಮನೆ ಶಿವಾನಂದ ಹಗಡೆ ಅವರ ಆಟದ ಮೇಳ, ಮಣಿಪಾಲ್ ಯುನಿವರ್ಸಲ್ ಪ್ರೆಸ್ ಸಂಪಾದಿಸಿದ ದೊಡ್ಡ ಸಾಮಗರ ನಾಲ್ಮೊಗ ಪುಸ್ತಕಗಳು ಆಯ್ಕೆಯಾಗಿವೆ. ಈ ಪ್ರಶಸ್ತಿಯು 25 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ಮತ್ತು ಫಲಕಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭವು ಡಿ.21ರಂದು ಸಂಜೆ 4ಗಂಟೆಗೆ ಉಡುಪಿ ಜಿಲ್ಲೆಯ ಅಂಬಲವಾಡಿಯ ಜನಾರ್ಧನ-ಮಹಾಕಾಳಿ ದೇವಸ್ಥಾನದಲ್ಲಿ ನಡೆಸಲಾಗುತ್ತಿದ್ದು, ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಯಕ್ಷಗಾನ ಅಕಾಡಮಿಯ ರಿಜಿಸ್ಟ್ರಾರ್ ನಮ್ರತ.ಎನ್, ಅಕಾಡಮಿ ಸದಸ್ಯರಾದ ಕೃಷ್ಣಪ್ಪ ಪೂಜಾರಿ ಕಿನ್ಯಾಮ ವಿನಯ ಕುಮಾರ್ ಶೆಟ್ಟಿ, ಸತೀಶ ಅಡಪ ಸಂಕಬೈಲ್ ಮತ್ತಿತರರು ಉಪಸ್ಥಿತಿದ್ದರು.
ಯಕ್ಷಸಿರಿ ವಾರ್ಷಿಕ ಪ್ರಶಸ್ತಿ
ದಾಸನಡ್ಕ ರಾಮ ಕುಲಾಲ್, ರಾಜೀವಶೆಟ್ಟಿ ಹೊಸಂಗಡಿ, ದಾಸಪ್ಪಗೌಡ ಗೇರುಕಟ್ಟೆ, ಶ್ರೀನಿವಾಸ್ ಸಾಲ್ಯಾನ್, ಸದಾಶಿವ ಕುಲಾಲ್, ಬೆಳ್ಳಾರೆ ಮಂಜುನಾಥ ಭಟ್, ಕೇಶವ ಶಕ್ತಿನಗರ, ಲಕ್ಷ್ಮಣಗೌಡ ಬೆಳಾಲ್, ಸಣ್ಣ ಮಲ್ಲಯ್ಯ, ಎ.ಜಿ.ನಾಗರಾಜು ಅವರನ್ನು ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು 25 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ಮತ್ತು ಫಲಕಗಳನ್ನು ಒಳಗೊಂಡಿದೆ ಎಂದು ಯಕ್ಷಗಾನ ಅಕಾಡಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮಶೆಟ್ಟಿ ತಿಳಿಸಿದರು.