×
Ad

ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಧರ್ಮಸ್ಥಳ ಪ್ರಕರಣ | ಧರ್ಮ-ರಾಜಕೀಯ ಬೇಡ, ಸತ್ಯ ಹೊರ ಬರಲಿ : ಜಿ.ಪರಮೇಶ್ವರ್

Update: 2025-08-14 18:58 IST

ಬೆಂಗಳೂರು, ಆ.14 : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಆರೋಪ ಪ್ರಕರಣವೂ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಈ ಪ್ರಕರಣದ ತನಿಖೆಯಲ್ಲಿ ‘ರಾಜಕೀಯ, ಧರ್ಮ ಹೊರಗಿಟ್ಟು, ಸತ್ಯ ಮಾತ್ರವೇ ಹೊರಬರಬೇಕು ಎನ್ನುವುದೇ ಸರಕಾರದ ಆಶಯ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ವಿ.ಸುನಿಲ್ ಕುಮಾರ್ ನಿಯಮ 69ರಡಿ ‘ಅನಾಮಿಕ ವ್ಯಕ್ತಿಯೊಬ್ಬ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಹೇಳಿಕೊಂಡು ಧಾರ್ಮಿಕ ಶ್ರದ್ಧಾ ಕೇಂದ್ರವಾದ ಧರ್ಮಸ್ಥಳದ ಹೆಸರಿಗೆ ಅಪಚಾರವೆಸಗುವ ಷಡ್ಯಂತ್ರ ನಡೆಸುತ್ತಿರುವ ಬಗ್ಗೆ’ ಪ್ರಸ್ತಾವಿಸಿದ ವಿಷಯದ ಕುರಿತು ಸರಕಾರದ ಪರವಾಗಿ ಅವರು ಹೇಳಿಕೆ ನೀಡಿದರು.

‘ಧರ್ಮಸ್ಥಳದ ಬಗ್ಗೆ ನಮಗೂ ಅಪಾರ ಗೌರವ, ಭಕ್ತಿಯಿದೆ. ರಾಷ್ಟ್ರಪತಿಯಾಗಿದ್ದ ಎ.ಪಿ.ಜೆ.ಅಬ್ದುಲ್ ಕಲಾಂ ಅವರನ್ನು ನಾನೆ ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗಿದ್ದೇನೆ. ಧರ್ಮಸ್ಥಳದ ಬಗ್ಗೆ ಕೋಟ್ಯಂತರ ಜನರು ಭಕ್ತಿಯ ಭಾವನೆ ಹೊಂದಿದ್ದಾರೆ ಎಂದು ಡಾ.ಪರಮೇಶ್ವರ್ ವಿವರಣೆ ನೀಡಿದರು.

ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಭಾರತ ಸರಕಾರ ಸುಮ್ಮನೆ ಪದ್ಮ ಪ್ರಶಸ್ತಿಗಳನ್ನು ನೀಡಿದೆಯೆ? ಸಾವಿರಾರು ಹೆಣ್ಣು ಮಕ್ಕಳು ಸ್ವಾವಲಂಬಿ ಜೀವನ ನಡೆಸಲು ಅವರು ಕಾರಣಕರ್ತರಾಗಿದ್ದಾರೆ. ಇವರ ಮೇಲಿನ ಆಪಾದನೆ ಬಗ್ಗೆ ಸತ್ಯ ಹೊರಬರಬಾರದೆ?, ಸತ್ಯ ಶೋಧನೆ ಆಗಬೇಕು, ಅವರು ಇದರಿಂದ ಹೊರಗೆ ಬರಬೇಕು ಎಂದು ಎಸ್‍ಐಟಿ ರಚನೆ ಮಾಡಿದ್ದೇವೆ ಎಂದು ಡಾ.ಪರಮೇಶ್ವರ್ ತಿಳಿಸಿದರು.

ದೂರುದಾರ ಮಾಡಿರುವ ಆರೋಪಗಳು ಅಸತ್ಯವಾದರೆ ಆತನ ವಿರುದ್ಧವು ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ಪೊಲೀಸರು ನ್ಯಾಯಯುತವಾಗಿ ತಮ್ಮ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರಕಾರ ಏನು ಮಾಡಿದೆ? ಎಂದು ಪ್ರಶ್ನಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಸತ್ಯ ಹೊರಗೆ ಬರಬೇಕು ಅನ್ನೋದು ನಮ್ಮ ಉದ್ದೇಶ ಅವರು ಡಾ.ಪರಮೇಶ್ವರ್ ಹೇಳಿದರು.

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅಥವಾ ನಮ್ಮ ಸಂಪುಟದ ಯಾವುದೆ ಸಚಿವರು ಎಸ್‍ಐಟಿ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅತ್ಯಂತ ಪಾರದರ್ಶಕವಾಗಿ ತನಿಖೆ ನಡೆದು ಸತ್ಯ ಏನು ಅನ್ನೋದು ಗೊತ್ತಾಗಬೇಕು. ಆದುದರಿಂದ, ಯಾವುದೇ ಕಾರಣಕ್ಕೂ ಈ ಪ್ರಕರಣದಲ್ಲಿ ರಾಜಕೀಯ, ಧರ್ಮ ಬರಬಾರದು. ನ್ಯಾಯ ಮಾತ್ರ ಬರಬೇಕು ಎಂದು ಡಾ.ಪರಮೇಶ್ವರ್ ತಿಳಿಸಿದರು.

ಅಪಪ್ರಚಾರ ಬೇಡ: ಇದಕ್ಕೂ ಮೊದಲು ಬಿಜೆಪಿ ಸದಸ್ಯ ಸುನೀಲ್ ಕುಮಾರ್ ವಿಷಯ ಪ್ರಸ್ತಾಪಿಸಿ, ‘ಧರ್ಮಸ್ಥಳದ ನೇತ್ರಾವತಿ ನದಿ ತಟದಲ್ಲಿ ತನಿಖೆ, ಬುರುಡೆ ಶೋಧದ ನೆಪದಲ್ಲಿ ಧಾರ್ಮಿಕ ಕೇಂದ್ರಗಳ ವಿರುದ್ಧ ನಡೆಯುವ ಅಪಪ್ರಚಾರವನ್ನು ಸಹಿಸುವುದಕ್ಕೆ ಸಾಧ್ಯವಿಲ್ಲ. ಹೋರಾಟ ಹಾಗೂ ತನಿಖೆ ಜನರ ನಂಬಿಕೆಯನ್ನು ಘಾಸಿಗೊಳಿಸುವಂತಿರಬಾರದು. ಸರಕಾರ ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯ ಹೆಜ್ಜೆ ಇಡಲಿ. ಜನರು ಬೀದಿಗೆ ಇಳಿಯುವ ಸಂದರ್ಭ ಸೃಷ್ಟಿಯಾಗಿದೆ ಎಂದು ಎಚ್ಚರಿಸಿದರು.

ಸರಕಾರದ ಸಹಾನುಭೂತಿಯಿಂದ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳದ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಕುಟುಂಬದ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ ಎಂದು ಸುನಿಲ್ ಕುಮಾರ್ ಇದೇ ವೇಳೆ ಆಕ್ಷೇಪ ವ್ಯಕ್ತಪಡಿಸಿದರು.

ಆದರೆ, ಡಿಜೆ ಹಳ್ಳಿಯಲ್ಲಿ ಒಂದು ಸಾಮಾಜಿಕ ಜಾಲತಾಣದ ಪೋಸ್ಟ್‌ ಗೆ ಪೊಲೀಸ್ ಠಾಣೆಗೆ ಬೆಂಕಿ ಹಾಕಲಾಯಿತು. ಆಗ ಅದನ್ನು ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಂಡಿದ್ದಾರೆ. ಈಗ ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ಸಂದೇಶಗಳನ್ನು ಹಾಕುತ್ತಿದ್ದರೂ ಸರಕಾರ ಈ ಬಗ್ಗೆ ಏಕೆ ಮೌನ ವಹಿಸಿದೆ ಎಂದು ಅವರು ಪ್ರಶ್ನಿಸಿದರು.

ಧರ್ಮಸ್ಥಳಕ್ಕೂ ಎಸ್‍ಡಿಪಿಐಗೆ ಏನು ಸಂಬಂಧ?, ಇದರ ಹಿಂದೆ ಯಾರ ಹುನ್ನಾರ ಇದೆ? ಧರ್ಮಸ್ಥಳಕ್ಕೆ ನುಗ್ಗುತ್ತೇವೆ ಎಂದು ಹೇಳಿದಾಗಲೂ ಸರಕಾರ ಮಾತನಾಡುತ್ತಿಲ್ಲ ಎಂದ ಅವರು, ಎಸ್‍ಐಟಿ ತನಿಖೆ ಮಾಡಲಿ, ನಮ್ಮದೇನು ಅಭ್ಯಂತರವಿಲ್ಲ. ಆದರೆ ಧರ್ಮಸ್ಥಳ ಧಾರ್ಮಿಕ ಕ್ಷೇತ್ರವನ್ನು ಗುರಿ ಮಾಡುವುದು ಸಲ್ಲ. ಅನಾಮಿಕನ ಮಾತು ಕೇಳಿ ಬರೀ ಗುಂಡಿ ಅಗೆಯುವ ಕೆಲಸ ಆಗುತ್ತಿದ್ದು, ಬಾಹುಬಲಿ ಬೆಟ್ಟದಲ್ಲಿಯೂ ಗುಂಡಿ ತೆಗೆಯಲಾಗಿದೆ. ಮುಂದೆ ಇದೇ ವಿಚಾರದಿಂದ ಸರಕಾರದ ಬುಡ ಅಲೆಗಾಡುವ ದಿನ ದೂರವಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

ಧಾರ್ಮಿಕ ಸ್ಥಳಗಳ ಮೇಲೆ ಪ್ರಹಾರ ಮಾಡುವ ಕೆಲಸ ಈ ಕೂಡಲೇ ನಿಲ್ಲಿಸಬೇಕು. ಗುಂಡಿ ಅಗೆದರು ಏನು ಸಿಕ್ಕಿಲ್ಲ ಎನ್ನುವ ಮಾಹಿತಿ ಇದೆ. ಈಗ ತನಿಖೆ ಪ್ರಗತಿ ಬಗ್ಗೆ ಮಧ್ಯಂತರ ವರದಿ ಮೂಲಕ ಸದನಕ್ಕೆ ಮಾಹಿತಿ ನೀಡಬೇಕು ಹಾಗೂ ಅನಾಮಿಕನನ್ನು ಮಂಪರು ಪರೀಕ್ಷೆ ನಡೆಸಬೇಕು ಎಂದು ಸುನಿಲ್ ಕುಮಾರ್ ಒತ್ತಾಯಿಸಿದರು.

ಮತ್ತೋರ್ವ ಬಿಜೆಪಿ ಸದಸ್ಯ ಬಿ.ವೈ.ವಿಜಯೇಂದ್ರ ಮಾತನಾಡಿ, ಧರ್ಮಸ್ಥಳ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದೆ. ಮುಸುಕುದಾರಿಯ ಪೂರ್ವಾಪರ ಏನು? ಇದರ ಬಗ್ಗೆ ತನಿಖೆ ಮಾಡಬೇಕಿತ್ತು. ಜೊತೆಗೆ ಎಸ್‍ಐಟಿ ತನಿಖೆಗೆ ಯಾರ ಒತ್ತಡ ಇದೆ? ಎನ್ನುವುದನ್ನು ಸರಕಾರ ತಿಳಿಸಬೇಕು ಎಂದು ಕೇಳಿದರು. ಚರ್ಚೆಯಲ್ಲಿ ಬಿಜೆಪಿ ಸದಸ್ಯರಾದ ಸುರೇಶ್ ಕುಮಾರ್, ಆರಗ ಜ್ಞಾನೇಂದ್ರ, ಎಸ್.ಆರ್.ವಿಶ್ವನಾಥ್, ಹರೀಶ್ ಪೂಂಜಾ, ಕಾಂಗ್ರೆಸ್ಸಿನ ಎಚ್.ಡಿ.ರಂಗನಾಥ್ ಸೇರಿದಂತೆ ಇನ್ನಿತರ ಸದಸ್ಯರು ಭಾಗವಹಿಸಿದರು.

‘ಶಾಸಕರ ಭವನದಲ್ಲಿ ಬಾಂಬ್ ಇಟ್ಟ ವ್ಯಕ್ತಿಗೆ ಬಿಜೆಪಿ ಸದಸ್ಯತ್ವ ಕೊಟ್ಟು, ಪ್ರಚೋದನಕಾರಿ ಮಾತನಾಡಲು ತರಬೇತಿ ನೀಡಿ ಇದೀಗ ನಮಗೆ ಬುದ್ದಿವಾದ ಹೇಳಲಿಕ್ಕೆ ಬರಬೇಡಿ’

-ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ

‘ಧರ್ಮಸ್ಥಳ ವಿಚಾರಕ್ಕೆ ಸಂಬಂಧಿಸಿದಂತೆ ಯೂಟೂಬರ್‌ಗಳಿಗೆ ವಿಧಿಸಿದ್ದ ನಿರ್ಬಂಧವನ್ನು ಕೋರ್ಟ್ ತೆರವು ಮಾಡಿದೆಯೇ, ಹೊರತು ಸರಕಾರವಲ್ಲ. ಧರ್ಮಸ್ಥಳದ ಬಗ್ಗೆ ಬಿಜೆಪಿಗಿಂತ ಕಾಂಗ್ರೆಸ್‍ನವರೇ ಹೆಚ್ಚು ಭಕ್ತಿಯನ್ನಿಟ್ಟುಕೊಂಡಿದ್ದಾರೆ. ದೇವರ ಹೆಸರಿನಲ್ಲಿ ರಾಜಕೀಯ ಮಾಡುವುದು, ಮತಗಳನ್ನು ಪಡೆಯುವ ಕೆಲಸವನ್ನು ಬಿಜೆಪಿಯವರು ಬಿಡಬೇಕು’

-ರಾಮಲಿಂಗಾರೆಡ್ಡಿ, ಮುಜುರಾಯಿ ಸಚಿವ

ಎಸ್‍ಐಟಿ ರದ್ದುಗೊಳಿಸಲು ಯತ್ನಾಳ್ ಆಗ್ರಹ: ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂಳಲಾಗಿದೆ ಎಂಬ ಅನಾಮಿಕ ವ್ಯಕ್ತಿಯ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿರುವ ಎಸ್‍ಐಟಿ ಅನ್ನು ಕೂಡಲೇ ರದ್ದು ಮಾಡಬೇಕು ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.

ಚರ್ಚೆ ವೇಳೆ ಪ್ರಸ್ತಾಪಿಸಿದ ಅವರು, ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ. ಎಸ್‍ಐಟಿ ರಚನೆ ಮಾಡಿದ್ದೆ ಸರಕಾರದ ಮೊದಲು ತಪ್ಪು. ಮೊದಲು ಅನಾಮಿಕನ ಬಗ್ಗೆ ತನಿಖೆ ಮಾಡಬೇಕಿತ್ತು ಎಂದು ಹೇಳಿದರು.

ಕಾಂಗ್ರೆಸ್ ಧರ್ಮಸ್ಥಳದ ವಿರೋಧಿಯಲ್ಲ: ‘ಧರ್ಮಸ್ಥಳದಲ್ಲಿ ನಡೆದ ಸೌಜನ್ಯಾಳ ಕೊಲೆ ಪ್ರಕರಣ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ನ್ಯಾಯಾಲಯವು ಆರೋಪಿಯನ್ನು ದೋಷಮುಕ್ತಗೊಳಿಸಿದ ನಂತರವೂ ಅನೇಕ ಗೊಂದಲಗಳು ಮುಂದುವರೆದಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಒತ್ತಾಯದ ಮೇರೆಗೆ ರಾಜ್ಯ ಸರಕಾರವು ಎಸ್‍ಐಟಿ ಮೂಲಕ ತನಿಖೆ ನಡೆಸುತ್ತಿದೆ. ಸರಕಾರದ ಈ ಕ್ರಮವು ಜನರ ಮನಸ್ಸಿನಲ್ಲಿರುವ ಎಲ್ಲ ಸಂಶಯಗಳನ್ನು ನಿವಾರಿಸಲು ಸಹಕಾರಿಯಾಗಲಿದೆ. ಕಾಂಗ್ರೆಸ್ ಪಕ್ಷವು ಧರ್ಮಸ್ಥಳ ಕ್ಷೇತ್ರದ ವಿರೋಧಿಯಲ್ಲ. ನಿಷ್ಪಕ್ಷಪಾತ ತನಿಖೆಯ ಮೂಲಕ ಸತ್ಯವನ್ನು ಜನರ ಮುಂದೆ ಇಟ್ಟು, ಕ್ಷೇತ್ರದ ಗೌರವ ಉಳಿಸುವ ಕೆಲಸ ಮಾಡುತ್ತಿದೆ. ಈ ಸೂಕ್ಷ್ಮ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ’

-ಅಶೋಕ್ ಕುಮಾರ್ ರೈ, ಕಾಂಗ್ರೆಸ್ ಸದಸ್ಯ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News