ಪೊಲೀಸ್ ಇಲಾಖೆಯ ನೇಮಕಾತಿಗೆ ಶಾಶ್ವತ ವಯೋಮಿತಿ ಸಡಿಲಿಕೆಗೆ ನಿರ್ಧಾರ : ಗೃಹ ಸಚಿವ ಡಾ.ಜಿ.ಪರಮೇಶ್ವರ್
ʼಧರ್ಮಸ್ಥಳ ಪ್ರಕರಣದ ತನಿಖೆ ಬೇಗ ಮುಗಿಸುವಂತೆ ಸೂಚಿಸಿದ್ದೇವೆʼ
ಬೆಂಗಳೂರು, ಸೆ.30: ಪೊಲೀಸ್ ಇಲಾಖೆಯ ನೇಮಕಾತಿಗೆ ಶಾಶ್ವತ ವಯೋಮಿತಿ ಸಡಿಲಿಕೆಗೆ ಮುಂದಾಗಿದ್ದು, ಸದ್ಯದಲ್ಲೇ ವಯೋಮಿತಿ ಸಡಿಲಿಕೆ ಪ್ರಕಟಿಸುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳವಾರ ಇಲ್ಲಿನ ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರಕಾರಿ ನೌಕರರ ವಯೋಮಿತಿ ಸಡಿಲಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಒಂದು ಸಲಕ್ಕೆ ಅನ್ವಯ ಆಗುವಂತೆ ಸಡಿಲಿಕೆ ಮಾಡಲಾಗಿದೆ. 2027ರವರೆಗೆ ವಯೋಮಿತಿ ಸಡಿಲಿಸಿದ್ದೇವೆ. ನಮ್ಮ ಪೊಲೀಸ್ ಇಲಾಖೆಯಲ್ಲಿ ಶಾಶ್ವತ ವಯೋಮಿತಿ ಸಡಿಲಿಕೆಗೆ ಮುಂದಾಗಿದ್ದೇವೆ ಎಂದರು.
ಕಾನ್‍ಸ್ಟೇಬಲ್, ಪಿಎಸ್ಸೈ, ಎಸ್‍ಐ ಹುದ್ದೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳ ಶಾಶ್ವತ ವಯೋಮಿತಿ ಸಡಿಲಿಕೆ ಬಗ್ಗೆ ಪರಿಶೀಲನೆ ನಡೆದಿದೆ. ಯಾವ್ಯಾವ ರಾಜ್ಯಗಳಲ್ಲಿ ಎಷ್ಟು ವಯೋಮಿತಿ ಇದೆ ಎಂಬ ಮಾಹಿತಿ ತರಿಸಿಕೊಂಡಿದ್ದೇವೆ. ಸದ್ಯದಲ್ಲೇ ವಯೋಮಿತಿ ಸಡಿಲಿಕೆ ಆದೇಶ ಪ್ರಕಟಿಸುತ್ತೇವೆ ಎಂದು ಜಿ.ಪರಮೇಶ್ವರ್ ಹೇಳಿದರು.
ʼಧರ್ಮಸ್ಥಳ ಪ್ರಕರಣʼ ತನಿಖೆ ಬೇಗ ಮುಗಿಸುವಂತೆ ಸೂಚಿಸಿದ್ದೇವೆ :
ಧರ್ಮಸ್ಥಳ ಪ್ರಕರಣದ ತನಿಖೆ ವಿಳಂಬ, ಷಡ್ಯಂತ್ರ ಮಾಡಿದವರನ್ನು ಬಂಧಿಸದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರ ಬಂಧನಕ್ಕೆ ಕಾನೂನು ತೊಡಕುಗಳಿವೆ. ಅವುಗಳ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ. ಎಫ್‍ಎಸ್‍ಎಲ್ ವರದಿ ಇನ್ನೂ ಬಂದಿಲ್ಲ. ಎಸ್‍ಐಟಿಯವರು ಅವರ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ಸಾಕ್ಷ್ಯಗಳನ್ನು ಎಫ್‍ಎಸ್‍ಎಲ್‍ಗೆ ಕಳಿಸಲಾಗಿದೆ. ಎಲ್ಲವನ್ನೂ ಅಂತಿಮಗೊಳಿಸಬೇಕು. ಆಮೇಲೆ ಎಸ್‍ಐಟಿ ವರದಿ ನೀಡಲಿದೆ. ತನಿಖೆ ಬೇಗ ಮುಗಿಸುವಂತೆ ಸೂಚಿಸಿದ್ದೇವೆ ಎಂದು ಜಿ.ಪರಮೇಶ್ವರ್ ತಿಳಿಸಿದರು.
ಮಹೇಶ್ ಶೆಟ್ಟಿ ತಿಮರೋಡಿ ನಾಪತ್ತೆ ವಿಚಾರವಾಗಿ ಮಾತನಾಡಿದ ಜಿ.ಪರಮೇಶ್ವರ್, ನಾವು ಕಾನೂನು ಚೌಕಟ್ಟಿನಲ್ಲೇ ಮಾಡಬೇಕು. ಗಡಿಪಾರು ವಿಚಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಅದೇನಾಗಲಿದೆ ಮೊದಲು ನೋಡಬೇಕು. ತಿಮರೋಡಿ ಬಂಧನ, ಕ್ರಮಕ್ಕೆ ಕಾನೂನು ಚೌಕಟ್ಟಿದೆ. ಅದರ ಪ್ರಕಾರವೇ ಎಲ್ಲವನ್ನೂ ಮಾಡಬೇಕು ಎಂದರು.