ʼಸಿಎಂ ಬದಲಾವಣೆ ವಿಚಾರʼ ಕೇವಲ ಮಾಧ್ಯಮಗಳಲ್ಲಿನ ಗೊಂದಲ, ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ : ಜಿ.ಪರಮೇಶ್ವರ್
"ಹೈಕಮಾಂಡ್ ಹೇಳುವವರೆಗೆ ಸಿದ್ದರಾಮಯ್ಯನವರೇ ಸಿಎಂ ಆಗಿ ಇರುತ್ತಾರೆ"
ಮೈಸೂರು : ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಹೈಕಮಾಂಡ್. ಅವರು ಎಷ್ಟು ದಿನ ಮುಖ್ಯಮಂತ್ರಿಯಾಗಿ ಇರುವಂತೆ ಹೇಳುತ್ತಾರೆ, ಅಲ್ಲಿಯವರೆಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರ ಹಂಚಿಕೆಯ ಬಗ್ಗೆ ಯಾವುದೇ ಒಪ್ಪಂದದ ಪ್ರಸ್ತಾಪ ಆಗಿಲ್ಲ, ಸಿಎಂ ಬದಲಾವಣೆ ವಿಚಾರ ಕೇವಲ ಮಾಧ್ಯಮಗಳಲ್ಲಿನ ಗೊಂದಲ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಗೊಂದಲ ಇದ್ದರೆ ಸಿಎಲ್‌ಪಿ ಮೀಟಿಂಗ್ ನಲ್ಲಿ ಅದನ್ನು ಚರ್ಚೆ ಮಾಡುತ್ತಿದ್ದರು ಎಂದರು.
ನಾನು ಅನೇಕ ಕಾರ್ಯಕ್ರಮಕ್ಕೆ ಹೋದಾಗ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಕೂಗುತ್ತಾರೆ. ಅದು ಸಮಾನ್ಯ, ಅಂತಿಮವಾಗಿ ಹೈಕಮಾಂಡ್ ಏನು ಹೇಳುತ್ತದೆ, ಅದನ್ನು ಎಲ್ಲಾರೂ ಕೇಳುತ್ತೇವೆ. ಹೈಕಮಾಂಡ್ ಯಾವ ಸಂದರ್ಭದಲ್ಲಿ ಹೇಳುತ್ತಾರೆ ಯಾರಿಗೆ ಗೊತ್ತು ಎಂದು ಪ್ರಶ್ನಿಸಿದರು.
5 ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಅವರ ವೈಯಕ್ತಿಕ ಹೇಳಿಕೆ, ಅವರು ಯಾವ ಮಾಹಿತಿಯಿಂದ ಹೇಳಿದ್ದರೂ ಗೊತ್ತಿಲ್ಲ ಎಂದು ಹೇಳಿದರು.
ಮೈಸೂರಿನಲ್ಲಿ ಯಾವುದೇ ಡ್ರಗ್ಸ್ ಸಿಕ್ಕಿಲ್ಲ, ಎನ್ ಸಿಬಿ ಅವರು ವಾಪಸು ಹೋದ ಮೇಲೆ ಪ್ರೆಸ್ ರಿಲೀಸ್ ಮಾಡಿ ಡ್ರಗ್ಸ್ ಸಿಕ್ಕಿದೆ ಎಂದು ಹೇಳಿದ್ದಾರೆ. ಮೈಸೂರು ಕಮೀಷನರ್‌ನ ವಿಚಾರಿಸಿದಾಗ ಇಲ್ಲಿ ಏನು ಸಿಕ್ಕಿಲ್ಲ ಅಂತನೇ ಹೇಳಿದರು.
ಎನ್ ಸಿಬಿ ಅವರು ಅವರು ಕೋರ್ಟ್ ನಲ್ಲಿ ಕೊಟ್ಟ ಹೇಳಿಕೆಯಲ್ಲಿ ಯಾವುದೇ ಡ್ರಗ್ಸ್ ಸಿಕ್ಕಿರುವ ಬಗ್ಗೆ ಉಲ್ಲೇಖ ಮಾಡಿಲ್ಲ. ಅಲ್ಲಿಗೆ ಹೋಗಿ ಪ್ರೇಸ್ ರಿಲೀಸ್ ಮಾಡುವ ಅಗತ್ಯ ಏನಿತ್ತು? ಇದರ ಹಿಂದಿನ ಉದ್ದೇಶವನ್ನು ಅವರೇ ಹೇಳಬೇಕು ಎಂದು ಹೇಳಿದರು.