ದ್ವೇಷ ಭಾಷಣ ಮಸೂದೆ | ವಿಪಕ್ಷವನ್ನು ಮಟ್ಟ ಹಾಕಲು ತಂದ ಕಾಯ್ದೆ: ವಿಜಯೇಂದ್ರ
"ಕೇಂದ್ರದಿಂದ ರಾಜ್ಯಕ್ಕೆ ಯಾವುದೇ ರೀತಿ ಅನ್ಯಾಯ ಆಗಿಲ್ಲ"
ಶಿವಮೊಗ್ಗ: ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೂ ಅವಕಾಶ ನೀಡದೇ ಆತುರಾತುರವಾಗಿ ದ್ವೇಷ ಭಾಷಣ ಮಸೂದೆಯನ್ನು ಸರಕಾರ ಮಂಜೂರು ಮಾಡಿಸಿತ್ತು. ಈ ಕಾಯ್ದೆ ವಿಪಕ್ಷವನ್ನು ಮಟ್ಟ ಹಾಕಲು ತಂದ ಕಾಯ್ದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ರಾಜ್ಯಪಾಲರು ಮಸೂದೆಗೆ ಅಂಕಿತ ಹಾಕದಿರುವ ಕುರಿತು ಪ್ರಶ್ನೆಗೆ ಉತ್ತರ ಕೊಟ್ಟರು. ಈ ಮಸೂದೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ತರೀಕೆರೆಯಲ್ಲಿ ನಮ್ಮ ಕಾರ್ಯಕರ್ತ ವಿಕಾಸ್ ಪುತ್ತೂರು ಭಾಷಣವನ್ನೇ ಆರಂಭಿಸಿರಲಿಲ್ಲ. ಅಲ್ಲಿ ಪೊಲೀಸ್ ಅಧಿಕಾರಿಗಳು ಹೋಗಿ ನೋಟಿಸ್ ಕೊಟ್ಟು, ನೀವೇನಾದರೂ ಮಾತನಾಡಿದರೆ, ಬಂಧಿಸುವುದಾಗಿ ಬೆದರಿಸಿದ್ದಾರೆ ಎಂದು ಟೀಕಿಸಿದರು.
ದಕ್ಷಿಣ ಕನ್ನಡದಲ್ಲಿ ಬಜರಂಗದಳದ ಕಾರ್ಯಕರ್ತ ಶರಣ್ ಪಂಪ್ವೆಲ್ ಗಡಿ ದಾಟದಂತೆ ಕಡಿವಾಣ ಹಾಕಿದ್ದಾರೆ. ಬೆಂಗಳೂರಿನಲ್ಲಿ ಪುನೀತ್ ಕೆರೆಹಳ್ಳಿ ಪ್ರಾಮಾಣಿಕವಾಗಿ ಬಾಂಗ್ಲಾ ದೇಶೀಯರನ್ನು ಪತ್ತೆ ಹಚ್ಚಿ ಪೊಲೀಸರು ಮಾಡುವ ಕೆಲಸ ಮಾಡಿದರೆ, ಅವರನ್ನೂ ಬಂಧಿಸಿದ್ದಾರೆ ಎಂದು ಆಕ್ಷೇಪಿಸಿದರು
ದಕ್ಷಿಣ ಭಾರತದ ನಾಯಕರಾಗಲು ಹೊರಟಿದ್ದಾರೆ :
ಸಿದ್ದರಾಮಯ್ಯನವರು ಹಿಂದೆ ವೀರಶೈವ ಲಿಂಗಾಯತ ಪ್ರತ್ಯೇಕ ಎಂದು ಒಡೆಯಲು ಮುಂದಾಗಿದ್ದರು. ಈಗ ತಮ್ಮ ಲೋಪ ಮುಚ್ಚಿ ಹಾಕಿಕೊಳ್ಳಲು ರಾಜ್ಯವನ್ನು ಕೇಂದ್ರದ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ಕೇಂದ್ರ ಸರಕಾರವು ರಾಜ್ಯಕ್ಕೆ ಅನ್ಯಾಯ ಮಾಡಿದೆ; ಕೇಂದ್ರ ಸರಕಾರ ದಕ್ಷಿಣ ಭಾರತದ ರಾಜ್ಯಗಳಿಗೂ ಅನ್ಯಾಯ ಮಾಡಿದೆ ಎಂದು ತಿಳಿಸಿ ದಕ್ಷಿಣ ಭಾರತದ ನಾಯಕರಾಗಲು ಹೊರಟಿದ್ದಾರೆ ಎಂದು ಟೀಕಿಸಿದರು.
ಇಂಥ ವಿಭಜಕ ಮಾನಸಿಕ ಸ್ಥಿತಿ ಸಿದ್ದರಾಮಯ್ಯನವರ ದೃಷ್ಟಿಯಿಂದಲೂ ಒಳ್ಳೆಯದಲ್ಲ, ನಮ್ಮ ರಾಜ್ಯದ ದೃಷ್ಟಿ, ಈ ದೇಶದ ಅಭಿವೃದ್ಧಿ ದೃಷ್ಟಿಯಿಂದಲೂ ಒಳ್ಳೆಯದಲ್ಲ. ಇವರ ಸರಕಾರ ದೆಹಲಿಗೆ ಹೋಗಿ ನಮ್ಮ ತೆರಿಗೆ ನಮ್ಮ ಹಕ್ಕು ಎಂದು ಪ್ರತಿಭಟನೆ ಮಾಡಿ ಬಂದಿತ್ತು. ಹಣಕಾಸಿನ ಸಚಿವರಾದ ಸಿದ್ದರಾಮಯ್ಯನವರು ರಾಜ್ಯದಲ್ಲಿ ಗ್ಯಾರಂಟಿಗೆ ಹಣ ಕ್ರೋಡೀಕರಿಸಲು ಸಾಧ್ಯವಾಗದೇ ಅಬಕಾರಿ ಇಲಾಖೆ ಗುರಿಯನ್ನು 40 ಸಾವಿರ ಕೋಟಿಗೆ ಏರಿಸಿದ್ದಾರಲ್ಲವೇ? ನಿಮ್ಮ ಕೃಪಾಕಟಾಕ್ಷದಿಂದ ಕುಡುಕರ ಸಂಖ್ಯೆ ಹೆಚ್ಚಾಗುತ್ತಿದೆ. ನಾಳೆ ಇವರು ನಮ್ಮ ತೆರಿಗೆ ನಮ್ಮ ಹಕ್ಕು ಎಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಿದರೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಕೇಂದ್ರದಿಂದ ರಾಜ್ಯಕ್ಕೆ ಯಾವುದೇ ರೀತಿ ಅನ್ಯಾಯ ಆಗಿಲ್ಲ. ಸಣ್ಣಪುಟ್ಟ ವ್ಯತ್ಯಾಸ ಇದ್ದರೆ ಪ್ರತಿಭಟನೆ ಮಾಡದೇ, ಕೇಂದ್ರ ಸರಕಾರದ ಮನ ಒಲಿಸಬೇಕಿತ್ತು ಎಂದರು. ಕರ್ನಾಟಕದಲ್ಲಿ ಬೆಂಗಳೂರು ಮಹಾನಗರ ಗರಿಷ್ಠ ತೆರಿಗೆ ಕೊಡುತ್ತದೆ. ಈ ತೆರಿಗೆ ಹಣವನ್ನು ಬೆಂಗಳೂರಿಗೇ ಬಂಡವಾಳವಾಗಿ ಬಳಸುವುದಾಗಿ ಹೇಳಿದರೆ, ರಾಯಚೂರು, ಕೊಪ್ಪಳ, ಬೆಳಗಾವಿ, ಶಿವಮೊಗ್ಗ ಜಿಲ್ಲೆ ಸ್ಥಿತಿ ಏನಾಗಬೇಕು ಎಂದು ಕೇಳಿದರು.
ಹಣಕಾಸಿನ ಸಚಿವರಾಗಿ ಸಿದ್ದರಾಮಯ್ಯನವರು ರಾಜ್ಯದ ಅಭಿವೃದ್ಧಿಯನ್ನು ಚಿಂತಿಸಬೇಕಲ್ಲವೇ? ಅದೇರೀತಿ ಈ ದೇಶದ ಪ್ರಧಾನಿ, ಹಣಕಾಸಿನ ಸಚಿವೆಯಾಗಲೀ ಜಾಗತಿಕ ಸವಾಲು ಎದುರಿಸುವ ಸಂದರ್ಭದಲ್ಲಿ ಹಾಗೂ ಭಾರತವನ್ನು ಅಭಿವೃದ್ಧಿ ಪಥದಲ್ಲಿ ಒಯ್ಯುವ ಸಂದರ್ಭದಲ್ಲಿ ಕರ್ನಾಟಕದ ಜೊತೆಗೆ ಮಹಾರಾಷ್ಟ್ರವೂ ಹೆಚ್ಚು ತೆರಿಗೆ ನೀಡುತ್ತದೆ; ಹಾಗೆಂದು ಕರ್ನಾಟಕಕ್ಕೆ ಅನ್ಯಾಯ ಮಾಡಬೇಕೆಂದಲ್ಲ. ಕರ್ನಾಟಕಕ್ಕೂ ನ್ಯಾಯ ಕೊಟ್ಟಿದ್ದಾರೆ ಎಂದರು.