×
Ad

ರಾಜ್ಯಪಾಲರು ಪೂರ್ಣ ಭಾಷಣ ಓದಲಿಲ್ಲ, ʼಜೈ ಸಂವಿಧಾನʼ ಉಲ್ಲೇಖಿಸದೆ ಹೋದರು : ಸಿಎಂ ಸಿದ್ದರಾಮಯ್ಯ

"ಸಂವಿಧಾನವನ್ನು ಎಲ್ಲರೂ ಒಪ್ಪಲೇಬೇಕು; ನಾವು ರಾಜ್ಯಪಾಲರ ವಿರುದ್ಧ ಇಲ್ಲ"

Update: 2026-02-02 16:16 IST

ಬೆಂಗಳೂರು : ʼರಾಜ್ಯಪಾಲರು ಪೂರ್ಣ ಭಾಷಣ ಓದದೆ ತರಾತುರಿಯಲ್ಲಿ ಹೋದರು. ಭಾಷಣದಲ್ಲಿದ್ದ "ಜೈ ಸಂವಿಧಾನ" ಎನ್ನುವುದನ್ನೂ ಉಲ್ಲೇಖಿಸದೆ, ಓದದೆ ಹೋದರು. ರಾಷ್ಟ್ರಗೀತೆ ಮುಗಿಯುವವರೆಗೂ ಕಾಯದೆ ಹೋಗಿಬಿಟ್ಟರು. ಇದು ಸರಿಯಲ್ಲʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಜ್ಯಪಾಲರ ಭಾಷಣದ ಮೇಲೆ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಉತ್ತರ ನೀಡಿದ ಮುಖ್ಯಮಂತ್ರಿ, ಬಿಜೆಪಿ ಶಾಸಕ ಸುನಿಲ್ ಕುಮಾರ್ ಅವರು ಮಾತಾಡುವಾಗ ನನ್ನನ್ನು "ಅಸಹಾಯಕ ಮುಖ್ಯಮಂತ್ರಿ" ಎಂದು ಕರೆದಿದ್ದಾರೆ. ಕೆಲವು ಬಾರಿ, "ಅಸತ್ಯದ ಎದುರು ಸತ್ಯ ಅಸಹಾಯಕವಾಗಿಬಿಡುತ್ತದೆ. ನಾವು ರಾಜ್ಯಪಾಲರ ವಿರುದ್ಧ ಇಲ್ಲ. ಕೇಂದ್ರ ಸರಕರದ ವಿರುದ್ಧ ಇದ್ದೇವೆ. ಮನರೇಗಾ ಬದಲಾಯಿಸಿ "ವಿಬಿ-ಜಿ ರಾಮ್ ಜಿ" ಎಂದು ಮಾಡಿದ್ದಾರೆ. ಇದರಲ್ಲಿರುವ ರಾಮ, ಧಶರಥ ರಾಮನೂ ಅಲ್ಲ. ಅಯೋಧ್ಯೆ ರಾಮನೂ ಅಲ್ಲ. ಹೆಸರು ಬದಲಾಯಿಸುವುದಕ್ಕೇ ಕೆಲವರನ್ನು ಅವರು ಇಟ್ಟುಕೊಂಡಿದ್ದಾರೆ ಅನ್ನಿಸತ್ತೆ ಎಂದಿದ್ದಾರೆ.

ಸಂವಿಧಾನದ ಆರ್ಟಿಕಲ್ 176 ಓದಿದ್ದರೆ ಚನ್ನಾಗಿರುತ್ತಿತ್ತು. ಸಂವಿಧಾನ ಜಾರಿಯಾದ ದಿನದಿಂದ ಇವತ್ತಿವರೆಗೆ ಜಂಟಿ ಅಧಿವೇಶನಗಳು ನಡೆದುಕೊಂಡು ಬಂದಿವೆ. ಇದು ಸಂವಿಧಾನದ ಪ್ರಕಾರ ನಡೆದುಕೊಂಡು ಬರುತ್ತಿರುವ ಪದ್ಧತಿ. ಎಚ್‌.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ "ನರೇಗ ಉದ್ಯೋಗ ಸಂಜೀವಿನಿ" ಎಂದು ಕರೆದಿದ್ದರು. ಈಗ ಬಿಜೆಪಿ ಜೊತೆ ಸೇರಿ ನರೇಗಾ ವಿರೋಧಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯಪಾಲರ ಭಾಷಣದ ಮೇಲೆ ವಿರೋಧಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ 15 ಜನ ಸದಸ್ಯರು ಮಾತನಾಡಿದ್ದಾರೆ. ಕಾಂಗ್ರೆಸ್ ನ ವಂದನಾ ನಿರ್ಣಯ ಮಂಡಿಸಿದ ಪೊನ್ನಣ್ಣ, ಮತ್ತು ಪ್ರದೀಪ್ ಈಶ್ವರ್ ರವರು ಅನುಮೋದನೆ ಮಾಡಿದ್ದಾರೆ. ಸುಮಾರು 9 ಜನ ಮಾತನಾಡಿದ್ದು, ಜೆಡಿಎಸ್ ನಿಂದ ಸುರೇಶ್ ಬಾಬುರವರು ಮತ್ತು ಪಕ್ಷೇತರರಲ್ಲಿ ಇಬ್ಬರು ಸೇರಿದಂತೆ ಒಟ್ಟು 27 ಜನ ಮಾತನಾಡಿದ್ದಾರೆ. ಕಾಂಗ್ರೆಸ್ 5 ಗಂಟೆ 18 , ಬಿಜೆಪಿಯವರು 8 ಗಂಟೆ 53 ನಿಮಿಷ , ಜೆಡಿಎಸ್ ನವರು 12 ನಿಮಿಷ ಮತ್ತು ಪಕ್ಷೇತರರು 54 ನಿಮಿಷ ಮಾತನಾಡಿದ್ದು, ಹೀಗೆ ಒಟ್ಟು 15 ಗಂಟೆ 17 ನಿಮಿಷ ಚರ್ಚೆ ನಡೆದಿದೆ ಎಂದು ತಿಳಿಸಿದರು.

ಮಾನ್ಯ ರಾಜ್ಯಪಾಲರು ಅವರು ಪೂರ್ಣ ಭಾಷಣವನ್ನು ಓದದೇ, ಮೊದಲನೇ ಹಾಗೂ ಕಡೆಯ ಜೈಹಿಂದ್, ಜೈಕರ್ನಾಟಕ ಎಂದು ಓದಿದರು, ಭಾಷಣದಲ್ಲಿ ಬರೆದುಕೊಡಲಾಗಿದ್ದ ‘ಜೈಸಂವಿಧಾನ’ವನ್ನು ಹೇಳಲಿಲ್ಲ. ಈ ಬಗ್ಗೆ ಸಂವಿಧಾನದ ಕಲಂ 176 , 163 ಬಗ್ಗೆ ಈಗಾಗಲೇ ಚರ್ಚೆ ಮಾಡಲಾಗಿದೆ. ಶಾಸಕ ಸುನಿಲ್ ಕುಮಾರ್ ಅವರು ‘ಸರಕಾರದ ಆಡಳಿತ ಹದಗೆಟ್ಟಿದೆ ಮತ್ತು ಸಂವಿಧಾನರಹಿತ ಸರಕಾರ’ , ‘ಅಸಹಾಯಕ ಮುಖ್ಯಮಂತ್ರಿ’ ಎಂದಿದ್ದಾರೆ. ಕೆಲವೊಮ್ಮ ಅಸತ್ಯದ ಎದುರು ಸತ್ಯ ಅಸಹಾಯಕವಾಗುತ್ತದೆ ಎಂದರು.

ಜನರು ನಮ್ಮನ್ನು ಅವರ ಪ್ರತಿನಿಧಿಯಾಗಿ ಆಯ್ಕೆ ಮಾಡುತ್ತಾರೆ. ವಿರೋಧಪಕ್ಷದವರ ಮತ್ತು ಸರಕಾರದವರ ಸಿದ್ಧಾಂತಗಳು ವಿಭಿನ್ನವಾಗಿರುತ್ತವೆ. ನಾವಿಬ್ಬರೂ ಪರಸ್ಪರ ಒಪ್ಪಲೇಬೇಕೆಂಬ ಷರತ್ತಿಲ್ಲ. ಆದರೆ ನಾವೆಲ್ಲರೂ ಸಂವಿಧಾನ ಒಪ್ಪಲೇಬೇಕು. ಸಂವಿಧಾನಬದ್ಧವಾಗಿ ಸರಕಾರ, ಆಡಳಿತ ನಡೆಯಲೇಬೇಕು. ಸಂವಿಧಾನವನ್ನು ಯಾವುದೇ ಕಾರಣಕ್ಕೂ ವಿರೋಧಿಸಬಾರದು. ರಾಜ್ಯಪಾಲರು ಮೂಲತಃ ಉತ್ತಮ ವ್ಯಕ್ತಿಯೇ. ನಾವು ರಾಜ್ಯಪಾಲರ ವಿರುದ್ಧವಿಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News