ಜನಾರ್ದನ ರೆಡ್ಡಿ ಶಾಸಕ ಸ್ಥಾನ ಅನರ್ಹತೆ ಸಾಧ್ಯತೆ
ಜನಾರ್ದನ ರೆಡ್ಡಿ (Photo credit: thenewsminute.com)
ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ‘ಅಪರಾಧಿ’ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದ ಹಿನ್ನೆಲೆಯಲ್ಲಿ, ಜನಾರ್ದನ ರೆಡ್ಡಿ ಶಾಸಕ ಸ್ಥಾನಕ್ಕೆ ಅನರ್ಹತೆ ಭೀತಿ ಎದುರಾಗಿದೆ.
ಮಂಗಳವಾರ ಹೈದರಾಬಾದ್‍ನ ಸಿಬಿಐ ವಿಶೇಷ ನ್ಯಾಯಾಲಯವು ಓಬಳಾಪುರಂ ಮೈನಿಂಗ್ ಕಂಪೆನಿ (ಒಎಂಸಿ) ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅಪರಾಧಿ ಎಂದು ತೀರ್ಪು ನೀಡಿದೆ. ಅಲ್ಲದೆ, ಈ ಹಿಂದೆ ಒಎಂಸಿ ವ್ಯವಸ್ಥಾಪಕ ನಿರ್ದೇಶಕ ಬಿ.ವಿ.ಶ್ರೀನಿವಾಸರೆಡ್ಡಿ ಸೇರಿದಂತೆ ಐದು ಮಂದಿಯನ್ನು ಅಪರಾಧಿಗಳು ಎಂದು ಕೋರ್ಟ್ ಹೇಳಿದೆ.
ರೆಡ್ಡಿಗೆ ನ್ಯಾಯಾಲಯ ಏಳು ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದೆ. ಕರ್ನಾಟಕ ಶಾಸನಸಭೆಯ ನಿಯಮಗಳ ಪ್ರಕಾರ, ಯಾವುದೇ ಶಾಸಕನ ವಿರುದ್ಧ ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಜೈಲು ಶಿಕ್ಷೆ ಪ್ರಕಟವಾದರೆ ತಕ್ಷಣವೇ ಅವರ ಶಾಸಕ ಸ್ಥಾನ ರದ್ದಾಗುತ್ತದೆ. ಹೀಗಾಗಿ ಗಾಲಿ ಜನಾರ್ದನ ರೆಡ್ಡಿ ಅವರ ಶಾಸಕ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆ ಇದೆ.
ಹೀಗಾಗಿ ಜಾಮೀನು ಕೋರಿ ಗಾಲಿ ಜನಾರ್ದನ ರೆಡ್ಡಿ, ಹೈದರಾಬಾದ್‍ನ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಹೈಕೋರ್ಟ್ ಜಾಮೀನು ನೀಡುವವರೆಗೆ ರೆಡ್ಡಿ, ಕಾರಾಗೃಹದಲ್ಲಿರುವುದು ಅನಿವಾರ್ಯವಾಗಿದೆ. ಹೈಕೋರ್ಟ್‍ನಿಂದ ಜಾಮೀನು ಸಿಕ್ಕರೆ ಮಾತ್ರವೇ ಜನಾರ್ದನ ರೆಡ್ಡಿಗೆ ಬಿಡುಗಡೆ ಭಾಗ್ಯ. ಇಲ್ಲವಾದರೆ ಶಾಸಕ ಸ್ಥಾನಕ್ಕೆ ಕಂಟಕ ಎದುರಾಗಲಿದೆ.
ಏನಿದು ಪ್ರಕರಣ:
ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡ ಹೀರೆಹಾಳ್ ಮತ್ತು ಸಿದ್ದಾಪುರ ಬಳಿಯ ಓಬಳಾಪುರಂ ಬೆಟ್ಟದಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡಲಾಗಿತ್ತು. ಆ ಮೂಲಕ 29ಲಕ್ಷ ಟನ್‍ನಷ್ಟು ಬೃಹತ್ ಪ್ರಮಾಣದ ಅದಿರನ್ನು ಲೂಟಿ ಮಾಡಿ 884 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಆದಾಯವನ್ನು ಗಳಿಸಿದ್ದರು ಎಂದು ಆರೋಪಿಸಲಾಗಿದೆ. ಈ ಪ್ರಕರಣದ ತನಿಖೆಗಾಗಿ 2009ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿಬಿಐ ತನಿಖೆಗೆ ಆದೇಶಿಸಿದ್ದರು.
ನನ್ನ ಹೋರಾಟಕ್ಕೆ ಜಯ ಸಿಕ್ಕಿದೆ: ಟಪಾಲ್ ಗಣೇಶ್
‘ಗಾಲಿ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಅಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದ್ದು, ನನ್ನ ಹೋರಾಟಕ್ಕೆ ಜಯ ಸಿಕ್ಕಿದೆ. ಹೀಗಾಗಿ ಆತನನ್ನು ನಾನು ಒಬ್ಬ ಕಳ್ಳ ಎಂದು ಕರೆಯುತ್ತೇನೆ. ಕೋರ್ಟ್ ತೀರ್ಪಿನಿಂದ ನನಗೆ ಸಂತೋಷವಾಗಿದೆ’ ಎಂದು ಅಕ್ರಮ ಗಣಿಗಾರಿಕೆ ಪ್ರಕರಣದ ದೂರುದಾರ ಟಪಾಲ್ ಗಣೇಶ್ ಹೇಳಿದ್ದಾರೆ.
‘ಕಾನೂನಿನ ಕಣ್ಣಿಗೆ ಮಣ್ಣೆರಚಿ ಅಕ್ರಮ ಗಣಿಗಾರಿಕೆ ಮಾಡಿದ್ದು, ಬಳ್ಳಾರಿ ಜಿಲ್ಲೆಯ ಜನರಿಗೆ ಅನ್ಯಾಯ ಮಾಡಿದ್ದರು. ಇದೀಗ ಆ ಪ್ರಕರಣದಲ್ಲಿ ಶಿಕ್ಷೆಯಾಗಿರುವುದು ನನಗೆ ಸಂತಸ ತಂದಿದೆ. ಇಂತಹ ಪ್ರಕರಣದಲ್ಲಿ ಒಂದೆರಡು ವರ್ಷಗಳಲ್ಲಿ ತೀರ್ಪು ಬರಬೇಕು. ಆದರೆ, 16 ವರ್ಷಗಳ ನಂತರ ತೀರ್ಪು ಬಂದಿದೆ. ತ್ವರಿತ ನ್ಯಾಯ ದೊರೆಯುವಂತಾಗಬೇಕು’
-ಎನ್.ಸಂತೋಷ್ ಹೆಗಡೆ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ
‘ಅಕ್ರಮ ಗಣಿಗಾರಿಕೆಯ ವಿರುದ್ಧ ಅತ್ಯಂತ ಕಠಿಣ ಪರಿಸ್ಥಿತಿ ಇದ್ದರೂ ಎದೆಗುಂದದೇ ಹೋರಾಟ ನಡೆಸಿದ್ದೇವೆ. ಅಕ್ರಮ ಗಣಿಕಾರಿಕೆಗೆ ಸಂಬಂಧಿಸಿದಂತೆ ಎಲ್ಲ ರೀತಿಯಲ್ಲೂ ದಾಖಲೆಗಳನ್ನು ಸಂಗ್ರಹಿಸಿ ಕೋರ್ಟ್‍ಗೆ ಸಲ್ಲಿಸಿದ್ದೇವು. ನಮ್ಮ ನಿರಂತರ ಹೋರಾಟಕ್ಕೆ ನ್ಯಾಯಾಲಯದ ತೀರ್ಪಿನಿಂದ ಜಯ ಸಿಕ್ಕಂತೆ ಆಗಿದೆ’
-ಎಸ್.ಆರ್. ಹಿರೇಮಠ, ಸಾಮಾಜಿಕ ಕಾರ್ಯಕರ್ತ