×
Ad

ಗಂಗಾವತಿ: 'ಜೈ ಶ್ರೀರಾಮ್' ಘೋಷಣೆ ಕೂಗುವಂತೆ ಒತ್ತಾಯಿಸಿ ಅಂಧ ವೃದ್ಧನಿಗೆ ಹಲ್ಲೆ

Update: 2023-12-01 09:58 IST

ಹಲ್ಲೆಗೊಳಗಾದ ಹುಸೇನ್ ಸಾಬ್

ಕೊಪ್ಪಳ, ಡಿ.1: ಅಂಧ ವೃದ್ಧರೊಬ್ಬರಿಗೆ 'ಜೈ ಶ್ರೀರಾಮ್' ಘೋಷಣೆ ಕೂಗುವಂತೆ ಬಲವಂತಪಡಿಸಿ ದುಷ್ಕರ್ಮಿಗಳ ತಂಡವೊಂದು ಹಲ್ಲೆಗೈದಿರುವ ಘಟನೆ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದಿರುವುದು ವರದಿಯಾಗಿದೆ.

ಈ ಬಗ್ಗೆ ಮೆಹಬೂಬ್ ನಗರದ ಹುಸೇನ್ ಸಾಬ್ ಎಂಬವರು ನೀಡಿರುವ ದೂರಿನಂತೆ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಸೇನ್ ಸಾಬ್ ಕೆಲಸದ ನಿಮಿತ್ತ ಹೊಸಪೇಟೆಗೆ ಹೋದವರು ನ.25ರಂದು ಮಧ್ಯರಾತ್ರಿ ವೇಳೆ ಗಂಗಾವತಿಗೆ ವಾಪಸ್ ಆಗಿದ್ದರು. ಅಲ್ಲಿಂದ ಮನೆಗೆ ತೆರಳಲು ಆಟೊ ನಿಲ್ದಾಣದ ಬಳಿ ಕಾಯುತ್ತಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಕೆಲವು ಯುವಕರು 'ಎಲ್ಲಿಗೆ ಹೋಗುತ್ತಿದ್ದಿಯಾ?' ಎಂದು ಪ್ರಶ್ನಿಸಿದ್ದಲ್ಲದೆ, ಬಲವಂತವಾಗಿ ತನ್ನನ್ನು ಬೈಕ್ ಮೇಲೆ ಕೂರಿಸಿಕೊಂಡು ಪಂಪಾ ನಗರ ಬಳಿ ಕರೆದುಕೊಂಡು ಹೋದರು ಎಂದು ಹುಸೇನ್ ಸಾಬ್ ದೂರಿನಲ್ಲಿ ತಿಳಿಸಿದ್ದಾರೆ.

ಮುಸ್ಲಿಮ್ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ತಂಡ ತನಗೆ ಕೊಲೆ ಬೆದರಿಕೆಯೊಡ್ಡಿತ್ತು. ಸಿದ್ದಿಕೇರಿಗೆ ಹೋಗುವ ಮಾರ್ಗದಲ್ಲಿನ ರೈಲ್ವೆ ಸೇತುವೆ ಕೆಳಗಡೆ ಕರೆದೊಯ್ದು 'ಜೈ ಶ್ರೀರಾಮ್' ಎನ್ನುವಂತೆ ಬಲವಂತಪಡಿಸಿ ತನ್ನನ್ನು ನೆಲಕ್ಕೆ ಬೀಳಿಸಿ ಹಲ್ಲೆ ಮಾಡಿದ್ದಾರೆ ಎಂದು ಹುಸೇನ್ ಸಾಬ್ ಆರೋಪಿಸಿದ್ದಾರೆ.

"ನನಗೆ ಕಣ್ಣು ಕೂಡ ಕಾಣುವುದಿಲ್ಲ. ನನ್ನ ಬಳಿಯಿದ್ದ ಹಣವನ್ನು ಹಲ್ಲೆ ತಂಡ ದೋಚಿಕೊಂಡು ಹೋಗಿದೆ. ಬಳಿಕ ಬೆಳಗಿನ ಜಾವ ಕುರಿ ಕಾಯುವ ಹುಡುಗರು ನನ್ನನ್ನು ರಕ್ಷಣೆ ಮಾಡಿ ಮನೆಗೆ ತಲುಪಿಸಿದ್ದಾರೆ" ಎಂದು ಹುಸೇನ್ ಸಾಬ್ ದೂರಿನಲ್ಲಿ ತಿಳಿಸಿದ್ದಾರೆ.

ಹಲ್ಲೆಯಿಂದ ಹುಸೇನ್ ಸಾಬ್ ಬೆನ್ನಿನ ಭಾಗಕ್ಕೆ ಗಾಯಗಳಾಗಿವೆ.

ಈ ಕುರಿತು ಗುರುವಾರ ರಾತ್ರಿ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News