×
Ad

ಗಂಗಾವತಿ | 'ಜೈ ಶ್ರೀರಾಮ್' ಘೋಷಣೆ ಕೂಗುವಂತೆ ಒತ್ತಾಯಿಸಿ ಅಂಧ ವೃದ್ಧನಿಗೆ ಹಲ್ಲೆಗೈದ ಪ್ರಕರಣ: ಇಬ್ಬರ ಬಂಧನ

Update: 2023-12-06 13:46 IST

ಬಂಧಿತ ಆರೋಪಿಗಳಾದ ಸಾಗರ ಶೆಟ್ಟಿ ಕಲ್ಕಿ ಹಾಗೂ ನರಸಪ್ಪ ದನಕಾಯರ

ಕೊಪ್ಪಳ, ಡಿ.6: ಗಂಗಾವತಿ ನಗರದಲ್ಲಿ 'ಜೈ ಶ್ರೀರಾಮ್' ಘೋಷಣೆ ಕೂಗುವಂತೆ ಒತ್ತಾಯಿಸಿ ಅಂಧ ವೃದ್ಧ ಹುಸೇನ್ ಸಾಬ್ ಎಂಬವರಿಗೆ ಹಲ್ಲೆ ನಡೆಸಿ, ಗಡ್ಡಕ್ಕೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಗಂಗಾವತಿಯ ಕುವೆಂಪು ಬಡಾವಣೆ ನಿವಾಸಿ ಸಾಫ್ಟ್ ವೇರ್ ಇಂಜಿನಿಯರ್ ಸಾಗರ ಶೆಟ್ಟಿ ಕಲ್ಕಿ ಹಾಗೂ ಕಲ್ಲಪ್ಪನ ಕ್ಯಾಂಪ್ ನಿವಾಸಿ ನರಸಪ್ಪ ದನಕಾಯರ ಬಂಧಿತ ಆರೋಪಿಗಳು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

'ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಎಲ್ಲ ಆಯಾಮಗಳಿಂದ ತನಿಖೆ ಮಾಡಲಾಗಿದೆ. ಜೈ ಶ್ರೀರಾಮ್ ಹೇಳುವಂತೆ ಹುಸೇನ್ ಸಾಬ್ ರಿಗೆ ಒತ್ತಡ ಹೇರಲಾಗಿದೆ ಎನ್ನುವ ಆರೋಪಕ್ಕೆ ಯಾವುದೆ ಆಧಾರ ಲಭಿಸಿಲ್ಲ. ಅದೇರೀತಿ ಅವರ ಗಡ್ಡಕ್ಕೆ ಬೆಂಕಿ ಹಚ್ಚಲಾಗಿತ್ತು ಎನ್ನುವುದಕ್ಕೂ ದಾಖಲೆ ಲಭಿಸಿಲ್ಲ' ಎಂದು ಎಸ್ಪಿ ಹೇಳಿದ್ದಾರೆ.

ಮೆಹಬೂಬ್ ನಗರದ ಹುಸೇನ್ ಸಾಬ್ ಕೆಲಸದ ನಿಮಿತ್ತ ಹೊಸಪೇಟೆಗೆ ಹೋದವರು ನ.25ರಂದು ರಾತ್ರಿ ವೇಳೆ ಗಂಗಾವತಿಗೆ ವಾಪಸ್ ಆಗಿದ್ದರು. ಈ ವೇಳೆ ಅವರು ಬೈಕಿನಲ್ಲಿ ಸಂಚರಿಸುತ್ತಿದ್ದ ಆರೋಪಿಗಳಿಗೆ ಡ್ರಾಪ್ ನೀಡುವಂತೆ ಕೇಳಿದ್ದಾರೆ. ಅದರಂತೆ ಪಾನಮತ್ತರಾಗಿದ್ದ ಇಬ್ಬರು ಆರೋಪಿಗಳು ಬೈಕ್ ಮೇಲೆ ಹುಸೇನ್ ಸಾಬ್ ರನ್ನು ಕೂಡಿಸಿಕೊಂಡು ಹೋಗಿದ್ದಾರೆ. ಈ ವೇಳೆ ಮಧ್ಯದಲ್ಲಿ ಕುಳಿತಿದ್ದ ನರಸಪ್ಪ ಹುಸೇನ್ ಸಾಬ್ ಅವರ ಟೋಪಿಯನ್ನು ಜಗ್ಗಿದ್ದಾನೆ. ಇದಕ್ಕೆ ಅವರು ಕೋಪಗೊಂಡಿದ್ದಾರೆ. ಇದೇ ಕಾರಣಕ್ಕೆ ಆರೋಪಿಗಳು ಹುಸೇನ್ ಸಾಬ್ ರನ್ನು ರೈಲ್ವೆ ಸೇತುವೆ ಬಳಿ ಕರೆದೊಯ್ದು ಹಲ್ಲೆ ಮಾಡಿದ್ದಾರೆ ಎಂದು ಎಸ್ಪಿ ತಿಳಿಸಿದರು.

ಘಟನೆ ಹಿನ್ನೆಲೆ: ಹುಸೇನ್ ಸಾಬ್ ಕೆಲಸದ ನಿಮಿತ್ತ ಹೊಸಪೇಟೆಗೆ ಹೋದವರು ನ.25ರಂದು ಮಧ್ಯರಾತ್ರಿ ವೇಳೆ ಗಂಗಾವತಿಗೆ ವಾಪಸ್ ಆಗಿದ್ದರು. ಅಲ್ಲಿಂದ ಮನೆಗೆ ತೆರಳಲು ಆಟೊ ನಿಲ್ದಾಣದ ಬಳಿ ಕಾಯುತ್ತಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಯುವಕರು 'ಎಲ್ಲಿಗೆ ಹೋಗುತ್ತಿದ್ದಿಯಾ?' ಎಂದು ಪ್ರಶ್ನಿಸಿದ್ದಲ್ಲದೆ, ಬಲವಂತವಾಗಿ ತನ್ನನ್ನು ಬೈಕ್ ಮೇಲೆ ಕೂರಿಸಿಕೊಂಡು ಸಿದ್ದಿಕೇರಿಗೆ ಹೋಗುವ ಮಾರ್ಗದಲ್ಲಿನ ರೈಲ್ವೆ ಸೇತುವೆ ಕೆಳಗಡೆ ಕರೆದೊಯ್ದಿದ್ದಾರೆ. ಈ ವೇಳೆ 'ಜೈ ಶ್ರೀರಾಮ್' ಕೂಗುವಂತೆ ಬಲವಂತಪಡಿಸಿ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ಗಡ್ಡಕ್ಕೆ ಬೆಂಕಿ ಹಚ್ಚಿದ್ದಾರೆ. ತನ್ನ ಬಳಿಯಿದ್ದ ಹಣವನ್ನೂ ದೋಚಿದ್ದಾರೆ ಎಂದು ಹುಸೇನ್ ಸಾಬ್ ಅವರು ಗಂಗಾವತಿ ನಗರ ಠಾಣೆಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದರು. ಈ ಬಗ್ಗೆ ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಘಟನೆ ಬಳಿಕ ಹುಸೇನ್ ಸಾಬ್ ಗೆ ನ್ಯಾಯ ಒದಗಿಸಬೇಕು, ಹಲ್ಲೆ ಮಾಡಿದವರ ದುಷ್ಕರ್ಮಿಗಳನ್ನು ಬಂಧಿಸಬೇಕು ಎಂದು ವಿವಿಧ ಸಂಘಟನೆಗಳು ಧರಣಿ ನಡೆಸಿದ್ದವು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News