ಜಿಬಿಎ, ಹೊಸ 5 ಪಾಲಿಕೆಗಳಿಗೆ ಐಎಎಸ್, ಐಪಿಎಸ್ ಹುದ್ದೆ ಮರುಹಂಚಿಕೆ
ಬೆಂಗಳೂರು, ಆ.31: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಜತೆಗೆ, ಹೊಸದಾಗಿ ರಚನೆಯಾಗಿರುವ 5 ಪಾಲಿಕೆಗಳಿಗೆ ಐಎಎಸ್, ಐಪಿಎಸ್ ಹುದ್ದೆಗಳನ್ನು ಮರುಹಂಚಿಕೆ ಮಾಡಿ, ಪದನಾಮ ಮರುವಿನ್ಯಾಸಗೊಳಿಸಿ ರಾಜ್ಯ ಸರಕಾರ ಆದೇಶಿಸಿದೆ.
ಈ ಹಿಂದಿನ ಬಿಬಿಎಂಪಿಗೆ ಮಂಜೂರಾಗಿರುವ 15 ಐಎಎಸ್ ಹಾಗೂ 2 ಐಪಿಎಸ್ ವೃಂದದ ಹುದ್ದೆಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು 5 ನಗರ ಪಾಲಿಕೆಗಳಿಗೆ (ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ನಗರ ಪಾಲಿಕೆಗಳು) ಮರು ಹಂಚಿಕೆ ಮಾಡಿ ಪದನಾಮಗಳನ್ನು ಮರು ವಿನ್ಯಾಸಗೊಳಿಸಿದೆ.
ಅದರಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಪ್ರಧಾನ ಕಾರ್ಯದರ್ಶಿ ಅಥವಾ ಅದಕ್ಕಿಂತ ಉನ್ನತ ಸ್ಥಾನದ ಐಎಎಸ್ ಅಧಿಕಾರಿಯನ್ನು ಮುಖ್ಯ ಆಯುಕ್ತರಾಗಿರಲಿದ್ದಾರೆ. ಐಎಎಸ್ ಶ್ರೇಣಿಯ ನಾಲ್ವರು ವಿಶೇಷ ಆಯುಕ್ತರನ್ನು ಪ್ರಾಧಿಕಾರಕ್ಕೆ ನೇಮಿಸಲಾಗಿದೆ.
ಆಡಳಿತ, ಕಂದಾಯ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗ, ಆರೋಗ್ಯ ಮತ್ತು ಶಿಕ್ಷಣ ವಿಭಾಗ, ಎಫ್‍ಇಸಿಸಿ, ಚುನಾವಣೆ, ವಿಪತ್ತು ನಿರ್ವಹಣೆ, ಸಾರ್ವಜನಿಕ ಸಂಪರ್ಕ ಮತ್ತು ಸಮನ್ವಯ ವಿಭಾಗ ಮತ್ತು (ಹಣಕಾಸು) ಹಾಗೂ ಮುಖ್ಯ ಹಣಕಾಸು ಅಧಿಕಾರಿಯಾಗಿ ನಾಲ್ಕು ವಿಶೇಷ ಆಯುಕ್ತರನ್ನು ಮರುಹಂಚಿಕೆ ಮಾಡಲಾಗಿದೆ.
ಐದು ನಗರ ಪಾಲಿಕೆಗಳಿಗೆ ಪ್ರತ್ಯೇಕ ಐವರು ಆಯುಕ್ತರನ್ನು ಮರುಹಂಚಿಕೆ ಮಾಡಲಾಗಿದೆ. ಜೊತೆಗೆ ಐದು ನಗರ ಪಾಲಿಕೆಗಳಿಗೆ ತಲಾ ಒಬ್ಬರಂತೆ ಅಪರ ಆಯುಕ್ತ (ಅಭಿವೃದ್ಧಿ) ಹುದ್ದೆಯನ್ನು ಹಂಚಿಕೆ ಮಾಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬಿಎಂಟಿಎಫ್ ವಿಭಾಗಕ್ಕೆ ಎಡಿಜಿಪಿ ಹಾಗೂ ಎಸ್ಪಿ ಹುದ್ದೆಯನ್ನು ಹಂಚಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ರಚಿಸಿ ರಾಜ್ಯ ಸರಕಾರ ಆ.16 ರಂದು ಅಧಿಸೂಚನೆ ಹೊರಡಿಸಿತ್ತು. ಒಟ್ಟು 75 ಸದಸ್ಯರ ಬಲದ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ರಚಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷರಾಗಿದ್ದು, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಸಿಎಂ ಡಿ.ಕೆ.ಶಿವಕುಮಾರ್ ಉಪಾಧ್ಯಕ್ಷರಾಗಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ 73 ಮಂದಿಯನ್ನು ಪದನಿಮಿತ್ತ ಸದಸ್ಯರಾಗಿ ನೇಮಿಸಲಾಗಿದೆ.